ಕನ್ನಡಪ್ರಭ ವಾರ್ತೆ ಹಲಗೂರು
ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು.
ಸಮೀಪದ ಕೊನ್ನಾಪುರ ಗ್ರಾಮದ ಶಂಭುಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಜಾಗರಣೆ ಪ್ರಯುಕ್ತ ದೇವಾಲಯದ ಅವರಣದಲ್ಲಿ ಹರಿಕಥೆ ನಡೆಯಿತು. ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.ಹಲಗೂರಿನ ಭೀಮಾ ನದಿ ತೀರದ ಸೋಮೇಶ್ವರ ಮತ್ತು ಬೆನಮನಹಳ್ಳಿ ಅರ್ಕೆಶ್ವರ ಬಸವನ ಬೆಟ್ಟದ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನ ಸೇರಿದಂತೆ ಮುತ್ತತ್ತಿ ರಸ್ತೆಯ ವಿದ್ಯಾ ಗಣಪತಿ ದೇವಸ್ಥಾನ ನಡುಕೇರಿ ವೀರಭದ್ರ ಸ್ವಾಮಿ ಇನ್ನೂ ವಿವಿಧ ಕಡೆ ಶಿವ ರಾತ್ರಿ ಹಬ್ಬದ ಅಂಗವಾಗಿ ಶಿವನ ಮೂರ್ತಿಯನ್ನು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ನಡೆದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆಗಳನ್ನು ನಡೆಸಲಾಯಿತು.
ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಬುಧವಾರ ರಾತ್ರಿ ಭಕ್ತರು ಇಡೀ ರಾತ್ರಿ ಬೆಟ್ಟದ ತಪ್ಪಲಿನಲ್ಲಿ ಕುಳಿತು ಶಿವ ಸ್ಮರಣೆ ಮಾಡಿ ಶಿವನ ಕೃಪೆಗೆ ಪಾತ್ರರಾದರು.
ಹಲಗೂರು ಶ್ರೀಅಘೋರ ಭದ್ರಕಾಳಿ ಶಕ್ತಿ ಪೀಠದ ವಿದ್ವಾನ್ ಶ್ರೀಪ್ರಸಾದ್ ಗುರೂಜೀ ಮಾತನಾಡಿ, ಸೋಮೇಶ್ವರ ದೇವಾಲಯದಲ್ಲಿ ಪ್ರಾತಃ ಕಾಲದಲ್ಲಿ ಶಿವನ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ, ಅಭಿಷೇಕ, ರುದ್ರಾಭಿಷೇಕ ಮಾಡುವುದರ ಜೊತೆಗೆ ಸಹಸ್ರಾರು ಬಿಲ್ಪಾರ್ಚನೆಯಿಂದ ಪೂಜಾ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.