ಹರಿಹರ ಶಾಸಕ ಹರೀಶ್‌ಗೆ ಪ್ರಾಣ ಬೆದರಿಕೆ: ಎಸ್‌ಪಿಗೆ ದೂರು

KannadaprabhaNewsNetwork | Published : Apr 24, 2024 2:15 AM

ಸಾರಾಂಶ

ಅಕ್ರಮ ಮರಳುಗಾರಿಕೆ ವಿಷಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದ ಹರಿಹರ ಶಾಸಕ ಬಿ.ಪಿ.ಹರೀಶ್‌ ಅವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ದಾವಣಗೆರೆ ನಗರದಲ್ಲಿ ಮಂಗಳ‍ವಾರ ಬೆಳಗ್ಗೆ ನಡೆದಿದೆ.

- ಅಮರಾವತಿ ಮಂಜುನಾಥನನ್ನು ಬಂಧಿಸಿ, ಶಾಸಕರಿಗೆ ಭದ್ರತೆ ನೀಡಲು ಬಿಜೆಪಿ ಒತ್ತಾಯ

- ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಶಾಸಕಾಂಗ ಸಭೆಯಲ್ಲಿ ಧ್ವನಿ ಎತ್ತುತ್ತೇವೆ: ಜಿಲ್ಲಾಧ್ಯಕ್ಷ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಅಕ್ರಮ ಮರಳುಗಾರಿಕೆ ವಿಷಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದ ಹರಿಹರ ಶಾಸಕ ಬಿ.ಪಿ.ಹರೀಶ್‌ ಅವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ದಾವಣಗೆರೆ ನಗರದಲ್ಲಿ ಮಂಗಳ‍ವಾರ ಬೆಳಗ್ಗೆ ನಡೆದಿದೆ.

ನಗರದ ಜಿಲ್ಲಾ ಆಸ್ಪತ್ರೆ ಎದುರಿನ ಕಾಫಿ ಬಾರ್ ಬಳಿ ಬೆಳಗಿನ ವಾಯು ವಿಹಾರ ಮುಗಿಸಿಕೊಂಡು ಎಂದಿನಂತೆ ಬಂದಿದ್ದ ವೇಳೆ ಅಮರಾವತಿ ಮಂಜುನಾಥ ಎಂಬ ವ್ಯಕ್ತಿ ಅಕ್ರಮ ಮರಳುಗಾರಿಕೆ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದ್ದೀಯಾ, ಯಾವ ಧೈರ್ಯದಿಂದ ಹರಿಹರಕ್ಕೆ ಬರುತ್ತೀಯಾ? ಯಾವುದೇ ಕಾರಣಕ್ಕೂ ನಿನ್ನನ್ನು ಉಳಿಸಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ಬಿ.ಪಿ.ಹರೀಶ ದೂರು ನೀಡಿದ್ದಾರೆ.

ಘಟನೆ ಬಗ್ಗೆ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅವರು, ಹರಿಹರ ತಾಲೂಕು ಚಿಕ್ಕಬಿದರಿ, ಹರಪನಹಳ್ಳಿ ತಾಲೂಕು ವಟ್ಲಹಳ್ಳಿ ಗ್ರಾಮಗಳ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಶಾಸಕ ಬಿ.ಪಿ.ಹರೀಶ ಮಾಧ್ಯಮದವರನ್ನು ಕರೆದೊಯ್ದು, ತೋರಿಸಿದ್ದರು. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಎಂದರು.

ದಾವಣಗೆರೆಯಲ್ಲಿ ಎಂದಿನಂತೆ ಮಂಗಳವಾರ ಬೆಳಗ್ಗೆ ವಾಯು ವಿಹಾರ ಮುಗಿಸಿದ ಶಾಸಕ ಬಿ.ಪಿ.ಹರೀಶ ಜಿಲ್ಲಾಸ್ಪತ್ರೆ ಎದುರಿನ ಕಾಫಿ ಬಾರ್ ಬಳಿ ಬಂದಿದ್ದಾಗ ಅಮರಾವತಿ ಮಂಜುನಾಥ ಎಂಬಾತ ಹರೀಶ್‌ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಜೀವ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಬಂಧಿಸಬೇಕು. ಶಾಸಕರಿಗೆ ಸೂಕ್ತ ರಕ್ಷಣೆ, ಭದ್ರತೆ ಕಲ್ಪಿಸಬೇಕು. ಓರ್ವ ಶಾಸಕರಿಗೆ ಸಾರ್ವಜನಿಕರಿವಾಗಿ ಜೀವ ಬೆದರಿಕೆ ಹಾಕಿದ್ದನ್ನು ನೋಡಿದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಶಾಸಕರಿಗೆ ಜೀವ ಬೆದರಿಕೆ ಪ್ರಕರಣ ನಾವಂತೂ ಇಲ್ಲಿಗೇ ಬಿಡುವುದಿಲ್ಲ. ಶಾಸಕಾಂಗ ಸಭೆಯಲ್ಲೂ ಇದರ ಬಗ್ಗೆ ಧ್ವನಿ ಎತ್ತುತ್ತೇವೆ. ಜಿಲ್ಲಾಡಳಿತ ಇದಕ್ಕೆ ಉತ್ತರ ನೀಡಬೇಕಾಗುತ್ತದೆ. ಕಾಂಗ್ರೆಸ್ಸಿನವರು ಸಂವಿಧಾನದ ಹೆಸರನ್ನು ಹೇಳಿಕೊಂಡು, ಹೊಟ್ಟೆಪಾಡಿನ ರಾಜಕಾರಣ ಮಾಡುತ್ತಿದ್ದಾರೆ. ಅಮರಾವತಿ ಮಂಜುನಾಥ್‌ನನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಎಸ್‌ಪಿ ಸೂಕ್ತ ಕ್ರಮ ಜರುಗಿಸಲಿ ಎಂದು ರಾಜಶೇಖರ ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಅಣಜಿ ಅಣ್ಣೇಶ್, ಅನಿಲಕುಮಾರ ನಾಯ್ಕ, ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ, ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಮಾಜಿ ಮೇಯರ್ ಎಚ್.ಎನ್‌. ಗುರುನಾಥ ಇತರರು ಇದ್ದರು.

- - - -23ಕೆಡಿವಿಜಿ3:

ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article