ಕನ್ನಡಪ್ರಭವಾರ್ತೆ ಪುತ್ತೂರು ಸೌಹಾರ್ದತೆ ಇಂದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಕಾಣಲು ಸಾಧ್ಯ. ರಾಜಕೀಯ ಕ್ಷೇತ್ರದಲ್ಲಿ ಸಾಧ್ಯವಿಲ್ಲ. ಎಲ್ಲ ಪಕ್ಷದವರನ್ನೂ ಒಟ್ಟಾಗಿಸುವ ಕೆಲಸ ಅವರು ಮಾಡುತ್ತಿದ್ದಾರೆ. ಅವರ ಸಾಧನೆಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಅವರಿಗೆ ಅರ್ಹವಾಗಿಯೇ ಸಂದಿವೆ. ರಾಜೇಂದ್ರ ಕುಮಾರ್ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಈ ಪ್ರಶಸ್ತಿಗಳ ಗೌರವ ಹೆಚ್ಚಾದಂತಾಗಿದೆ ಎಂದು ರಾಜ್ಯ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡಿದರು.ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣದ ಜೊತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿ ಕ್ಷೇತ್ರದ ಮೂಲಕ ಅನುವು ಮಾಡಿ ಕೊಟ್ಟಿರುವುದು ಅದ್ಭುತ ಸಾಧನೆಯಾಗಿದೆ. ಇಂದಿನ ಕ್ರೀಡಾಕೂಟದಲ್ಲಿ ಸುಮಾರು ೧೫ ಸಾವಿರ ಮಂದಿ ಪಾಲ್ಗೊಳ್ಳುವಂತೆ ಮಾಡಿರುವ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಕ್ರೀಡಾಕೂಟಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಅದ್ಭುತ ಸೇವೆ ಮಾಡಿರುವ ಸಹಕಾರಿ ರತ್ನ ಡಾ.ರಾಜೇಂದ್ರ ಕುಮಾರ್ ಅವರು ಗ್ರಾಮೀಣ ಭಾಗದ ಮಹಿಳೆಯರ ಬದುಕಿನಲ್ಲಿ ಉಳಿತಾಯ ಮನೋಭಾವದ ಮೂಲಕ ಆರ್ಥಿಕ ಸ್ವಾಲಂಬಿತನ ಹಾಗೂ ಕ್ರೀಡಾ ಕಾರ್ಯಕ್ರಮಗಳ ಮೂಲಕ ದೈಹಿಕವಾಗಿ ಶಕ್ತಿ ನಿರ್ಮಾಣ ಮಾಡುತ್ತಿದ್ದಾರೆ. ಸರ್ಕಾರಗಳು ಮಾಡಬೇಕಾಗಿದ್ದ ಮಹಿಳಾ ಸಬಲೀಕರಣದ ಕೆಲಸವನ್ನು ಡಾ.ರಾಜೇಂದ್ರ ಕುಮಾರ್ ಮಾಡಿದ್ದಾರೆ. ಸಹಕಾರಿ ಕ್ಷೇತ್ರ ಹಾಗೂ ಮಹಿಳೆಯರ ಬದುಕಿನಲ್ಲಿ ಸಂತಸ ತಂದಿರುವ ರಾಜೇಂದ್ರಕುಮಾರ್ ಸಾಧನೆ ಒಂದೆಡೆಯಾದರೆ, ಇನ್ನೊಂದೆಡೆ ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆಗಳು ಇಂದು ಉಸಿರಾಡುತ್ತಿದೆ ಎಂದರೆ ಅದಕ್ಕೆ ಡಾ. ರಾಜೇಂದ್ರ ಕುಮಾರ್ ಅವರೇ ಕಾರಣರಾಗಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರಾಜೇಂದ್ರ ಕುಮಾರ್, ಭಾಷಣಗಳಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಸಾಧನೆ ಸಾಧ್ಯವಾಗುತ್ತದೆ. ಸಹಕಾರಿ ಕ್ಷೇತ್ರ ಬೆಳೆಯಲು ಎಲ್ಲರೂ ಕೈಜೋಡಿಸಬೇಕಾಗಿದೆ. ಸಹಕಾರಿ ಕ್ಷೇತ್ರವು ರಾಜಕೀಯ ರಹಿತವಾಗಿ ಬೆಳೆದು ಬಂದಿದೆ. ಗ್ರಾಮೀಣ ಭಾಗದ ಮಹಿಳೆಯರ ಬದುಕಿನಲ್ಲಿ ಕಷ್ಟಗಳು ತುಂಬಿದ್ದ ಕಾಲದಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದಿದ್ದೇವೆ ಎಂದರು.ಕ್ರೀಡಾ ಧ್ವಜಾರೋಹಣ ನಡೆಸಿದ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಸಹಕಾರಿ ಕ್ಷೇತ್ರದ ಚಳವಳಿಯ ಮೂಲಕ ಈ ವ್ಯವಸ್ಥೆಯನ್ನು ಉತ್ತುಂಗಕ್ಕೇರಿಸಿದ ರಾಜೇಂದ್ರ ಕುಮಾರ್, ಮಹಿಳೆಯರ ಜೀವನಕ್ಕೆ ಗಟ್ಟಿಯಾದ ಅಡಿಪಾಯ ಹಾಕಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಳ್ಳಿಯ ಮಹಿಳೆಯರ ಹಾಗೂ ರೈತರ ಬದುಕಿನಲ್ಲಿ ಭದ್ರತೆ ಉಂಟು ಮಾಡಿದ ರಾಜೇಂದ್ರ ಕುಮಾರ್ ಸ್ವಾವಲಂಬಿ ಜೀವನಕ್ಕೆ ಪ್ರೇರಣೆಯಾಗಿದ್ದಾರೆ. ಸಮಾಜಮುಖಿ ಚಿಂತನೆಯ ಜತೆಗೆ ದೊಡ್ಡ ಮಟ್ಟದ ಮಹಿಳಾ ಶಕ್ತಿಯ ಸಂಘಟನೆ ಮಾಡುವ ಮೂಲಕ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.* ಸನ್ಮಾನ ಕಾರ್ಯಕ್ರಮಈ ಸಂದರ್ಭ ಪುತ್ತೂರಿಗೆ ಮೊದಲ ಬಾರಿ ಆಗಮಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕ್ರೀಡಾಕೂಟದ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ಜವಾಬ್ದಾರಿ ನಿರ್ವಹಿಸಿದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ್ ಕಾವು ಹಾಗೂ ನಿವೃತ್ತ ದೈಹಿಕ ಶಿಕ್ಷಕ ದಯಾನಂದ ರೈ ಕೋರ್ಮಂಡ ಅವರನ್ನು ಗೌರವಿಸಲಾಯಿತು. ಬಲೂನ್ ಆಕಾಶಕ್ಕೆ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆಯನ್ನು ಅತಿಥಿಗಳು ನೀಡಿದರು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ತಹಶೀಲ್ದಾರ್ ಶಿವಶಂಕರ್, ಎಸ್‌ಸಿಡಿಸಿಸಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಶ್ರೀ ರಾಮಕೃಷ್ಣ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಆದರ್ಶ ವಿವಿಧೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹಿಂ, ಅಪೆಕ್ಸ್ ಬ್ಯಾಂಕ್ ಆಡಳಿತ ನಿರ್ದೇಶಕ ನಾಗಣ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ನಿಕಟ ಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.ಎಸ್‌ಸಿಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಭಟ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
೧೫ ಸಾವಿರಕ್ಕೂ ಮಿಕ್ಕಿದ ಮಹಿಳೆಯರು ಭಾಗಿಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಹಾಗೂ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಭಾಗಿತ್ವದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಬಂಟ್ವಾಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳ ನವೋದಯ ಸಂಘದ ಸುಮಾರು ೧೫ ಸಾವಿರಕ್ಕೂ ಮಿಕ್ಕಿದ ಮಹಿಳೆಯರು ಭಾಗವಹಿಸಿದ್ದರು.