ಕನ್ನಡಪ್ರಭ ವಾರ್ತೆ ಭಾರತೀನಗರ
ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಂಕ್ರಾಂತಿ ಸಂಭ್ರಮದ ವಿಶೇಷತೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕುಣಿದು ಕುಪ್ಪಳಿಸಿ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಕಾಲೇಜು ಆವರಣ ಹಬ್ಬದ ವಾತಾವರಣದಿಂದ ನಿರ್ಮಾಣವಾಗಿತ್ತು. ಕಾಲೇಜಿನ ಎಲ್ಲ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ದೇಶಿ ಉಡುಗೆ ತೊಟ್ಟು ಪಾಲ್ಗೊಂಡಿದ್ದರು. ಪೂರ್ವಿಕರು ಹಾಡುತ್ತಿದ್ದ ಹಾಡು, ನೃತ್ಯ, ಗಾದೆ, ಒಗಟು ಹೇಳುವುದು, ಕೋಲಾಟ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಕಾಲೇಜಿನ ಅಂಗಳದಲ್ಲಿ ಅಂಗಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳು ಚಕ್ಕುಲಿ, ನಿಪ್ಪಟ್ಟು, ರವೆಉಂಡೆ, ಕಡಲೆಕಾಯಿ, ಸೋತೆಕಾಯಿ, ಬೇಯಿಸಿದ ಹಸಿರುಕಾಳು, ತರಕಾರಿ, ಪಾನಕ, ಮಜ್ಜಿಗೆ ಮೊದಲಾದ ದೇಶಿ ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿದರು. ಇದರಲ್ಲಿ ತಿಂಡಿಗಳನ್ನು ರುಚಿಕರವಾಗಿ ಮಾಡಿದಂತಹ ವಿದ್ಯಾರ್ಥಿಗಳಿಗೆ ಕಜ್ಜಾಯದ ಬುಟ್ಟಿಯ ಮೂಲಕ ಬಹುಮಾನ ನೀಡಲಾಯಿತು.
ಅಲಂಕೃತಗೊಂಡ ಎತ್ತಿನಗಾಡಿಗಳಿಗೆ ಮತ್ತು ಸುಂದರವಾಗಿ ದೇಸಿ ವೇಷಭೂಷಣ ತೊಟ್ಟ ಇಬ್ಬರು ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ದೇಶಿ ಚಲುವ ಮತ್ತು ದೇಶಿ ಚೆಲುವೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳು ರಾಸುಗಳನ್ನು ಕಿಚ್ಚುಹಾಯಿಸಿದರು.
ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕಿಯರು ಒಬ್ಬರಿಗೊಬ್ಬರಿಗೂ ಹಬ್ಬದ ಶುಭಾಷಯ ವಿನಿಯಮ ಮಾಡಿಕೊಂಡು ಎಳ್ಳುಬೆಲ್ಲ ಹಂಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.