ಸುಗ್ಗಿ ಹಬ್ಬ ಸಂಕ್ರಾಂತಿಯು ವಿಶಿಷ್ಟವಾದ ಸಂಸ್ಕೃತಿ: ಡಾ.ನಿಂಗರಾಜ್‌ಗೌಡ

KannadaprabhaNewsNetwork |  
Published : Jan 14, 2025, 01:01 AM IST
೧೩ಕೆಎಂಎನ್‌ಡಿ-೧ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಸುಗ್ಗಿ ಸಂಭ್ರಮ ಪ್ರಯುಕ್ತ  ಹತ್ತನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಕಾವ್ಯ ಕೌಸ್ತುಭ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿದರು. | Kannada Prabha

ಸಾರಾಂಶ

ಅನ್ಯ ಭಾಷೆಗಳ ದಬ್ಬಾಳಿಕೆಯಿಂದ ಕನ್ನಡವನ್ನು ರಕ್ಷಿಸಿಕೊಂಡು ಭಾಷಾ ಬೆಳವಣಿಗೆಗೆ ನಾಂದಿ ಹಾಡಬೇಕು. ಕರ್ನಾಟಕದಲ್ಲಿ ಕನ್ನಡವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದಲ್ಲದೇ ದೇಶದಲ್ಲಿ ಕನ್ನಡ ಭಾಷೆ ಚಿರಸ್ಥಾಯಿಯಾಗಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಸುಗ್ಗಿ ಹಬ್ಬ ಒಂದು ವಿಶಿಷ್ಟವಾದ ಸಂಸ್ಕೃತಿ. ವರ್ಷಪೂರ್ತಿ ಬೆಳೆ ಬೆಳೆದು ಅದಕ್ಕೆ ನೆರವಾದವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ ದವಸ- ಧಾನ್ಯಗಳನ್ನು ಹಂಚಿ ಉಳಿದಿದ್ದನ್ನು ಮನೆಗೆ ತೆಗೆದುಕೊಂಡು ಹೋಗುವ ಸಂಸ್ಕೃತಿ ದೇಶದೆಲ್ಲೆಡೆ ಪ್ರಚಲಿತದಲ್ಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಹತ್ತನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಕಾವ್ಯ ಕೌಸ್ತುಭ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಇತರೆ ದೇಶಗಳಲ್ಲೂ ಸುಗ್ಗಿ ಹಬ್ಬವಿದೆ. ಆದರೆ, ನಮ್ಮಲ್ಲಿರುವ ವೈಶಿಷ್ಟ್ಯತೆಯನ್ನು ಬೇರೆಲ್ಲೂ ಕಾಣಲಾಗುವುದಿಲ್ಲ. ಬೆಳೆ ಬೆಳೆಯುವುದರಿಂದ ಆರಂಭವಾಗಿ ಕಳೆ ತೆಗೆದು, ಕಟಾವು ಮಾಡಿ, ಕಣ ಮಾಡಿ, ಬೆಳೆದ ದವಸ- ಧಾನ್ಯಗಳನ್ನು ಬಡಿದು ರಾಶಿ ಹಾಕಿ ಪೂಜೆ ಸಲ್ಲಿಸುವುದು. ಜಾತಿ, ಮತ- ಬೇಧವಿಲ್ಲದೆ ಬೆಳೆದದ್ದನ್ನು ಹಂಚಿಕೊಂಡು ಸಂಭ್ರಮಿಸುವ ಸುಗ್ಗಿ ಹಬ್ಬ ವಿಭಿನ್ನತೆಯನ್ನು ಒಳಗೊಂಡು ಸಂಸ್ಕೃತಿಯ ರೂಪ ಪಡೆದುಕೊಂಡಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಹೆಸರಿದೆ. ಐದು ಕೋಟಿಗೂ ಹೆಚ್ಚು ಜನರು ವಿಶ್ವಾದ್ಯಂತ ಕನ್ನಡ ಮಾತನಾಡುತ್ತಾರೆ. ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಮಾತನಾಡುವ ಕನ್ನಡಿಗರಿದ್ದಾರೆ. ಕನ್ನಡ ಮತ್ತಷ್ಟು ಬೆಳೆಯಬೇಕೆಂದರೆ ಮಾತನಾಡುವವರ ಸಂಖ್ಯೆ ಹೆಚ್ಚಾಗಬೇಕು. ೧೭೨೧ ವೈವಿದ್ಯಮಯ ಭಾಷೆಗಳು ನಮ್ಮ ದೇಶದಲ್ಲಿವೆ. ಇಷ್ಟು ಭಾಷೆಗಳ ನಡುವೆ ನಮ್ಮ ಕನ್ನಡ ವಿಶೇಷ ಸ್ಥಾನಮಾನ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದ ಅವರು, ಊಟಿ, ಕಾಸರಗೋಡು, ಸೊಲ್ಲಾಪುರ ಪ್ರದೇಶಗಳು ಬೇರೆ ರಾಜ್ಯದಲ್ಲಿದ್ದರೂ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಈ ಪ್ರದೇಶಗಳು ಮೂಲ ಕರ್ನಾಟಕಕ್ಕೆ ಸೇರಿದ್ದರಾದರೂ ಹಿಂದೆ ನಮ್ಮನ್ನಾಳಿದ ರಾಜಕಾರಣಿಗಳ ಲಾಲಸ್ಯದಿಂದ ಈ ಪ್ರದೇಶಗಳು ಇಂದು ಬೇರೆ ರಾಜ್ಯಗಳ ಪಾಲಾಗಿವೆ ಎಂದು ವಿಷಾದಿಸಿದರು.

ಹಿರಿಯ ಸಾಹಿತಿ ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಹೆಚ್ಚು ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯ ಉಳಿಸಿ, ಬೆಳೆಸುವಂತಹ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಯುವಕರ ಮೇಲಿದೆ. ಇಂದಿನ ಯುವ ಪೀಳಿಗೆ ಆಂಗ್ಲ ಭಾಷೆಗೆ ಜೋತು ಬಿದ್ದಿದ್ದಾರೆ. ಆಂಗ್ಲ ಭಾಷೆಯನ್ನು ಕಲಿಕೆಗೆ ಮೀಸಲಿಟ್ಟು, ಕನ್ನಡವನ್ನು ಹೆಚ್ಚು ಬೆಳೆಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಬೇಕು ಎಂದರು.

ಸಮ್ಮೇಳನಾಧ್ಯಕ್ಷ ಡಾ.ಸಿ.ಮರಯ್ಯ ಮಾತನಾಡಿ, ಅನ್ಯ ಭಾಷೆಗಳ ದಬ್ಬಾಳಿಕೆಯಿಂದ ಕನ್ನಡವನ್ನು ರಕ್ಷಿಸಿಕೊಂಡು ಭಾಷಾ ಬೆಳವಣಿಗೆಗೆ ನಾಂದಿ ಹಾಡಬೇಕು. ಕರ್ನಾಟಕದಲ್ಲಿ ಕನ್ನಡವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದಲ್ಲದೇ ದೇಶದಲ್ಲಿ ಕನ್ನಡ ಭಾಷೆ ಚಿರಸ್ಥಾಯಿಯಾಗಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಗಣ್ಯರನ್ನು ಅಭಿನಂದಿಸಲಾಯಿತು.

ಸಾಹಿತಿ ಡಾ.ಬಿ.ಸಿ.ವಿಜಯಕುಮಾರ್, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಚೈತ್ರಾ ಶಶಿಧರ್‌ಗೌಡ, ಡಾ.ಎಲ್.ಜಿ.ಮಂಜುನಾಥ್, ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ಶಫಿ, ಪಾಂಡವಪುರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಕಾರ್ಯಾಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಹೊಸಹಳ್ಳಿ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ