)
-ಸಾಗರದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಹೇಳಿಕೆ
ಕನ್ನಡಪ್ರಭ ವಾರ್ತೆ ಸಾಗರ
ಹಸಿರುಮಕ್ಕಿ ಸೇತುವೆ ಗುತ್ತಿಗೆದಾರನಿಂದ ಮಾಜಿ ಸಚಿವ ಹೆಚ್.ಹಾಲಪ್ಪನವರು ₹೫೦ ಲಕ್ಷ ಕಿಕ್ಬ್ಯಾಕ್ ಪಡೆದಿರುವುದಕ್ಕೆ ನಾನೇ ಸಾಕ್ಷಿ. ಈಗಲೂ ನಾನು ಆ ಮಾತಿಗೆ ಬದ್ಧನಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಾಯಿ ಮುಚ್ಚಿಸಲು ಅವರ ಅಣ್ಣನ ಮಗನ ಮೂಲಕ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ನಾನು ಕಾಂಗ್ರೆಸ್ ಪಕ್ಷವನ್ನು ಸೇರುವಾಗ, ಪಂಚಾಯಿತಿ ಮೀಸಲಾತಿಗೆ ಯಾರಿಂದಲೂ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸೊರಬದಲ್ಲಿ ಇದ್ದ ಹಾಲಪ್ಪ ಅವರನ್ನು ನಾನೇ ಸಾಗರಕ್ಕೆ ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದೇನೆ. ಆದರೆ, ಬಿಜೆಪಿಯಲ್ಲಿ ನನ್ನನ್ನು ಹಂತಹಂತವಾಗಿ ತುಳಿಯುವ ಕೆಲಸ ಮಾಡಿದ ಹಾಲಪ್ಪ ಜಿಲ್ಲಾ ಪಂಚಾಯಿತಿ ಆವಿನಹಳ್ಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಲು ಎಲ್ಲರ ಒತ್ತಾಯ ಇದ್ದಾಗ್ಯೂ ತಮ್ಮ ಅಣ್ಣನ ಮಗ ರವೀಂದ್ರನಿಗೆ ಟಿಕೆಟ್ ಕೊಟ್ಟು ಕುಟುಂಬ ರಾಜಕಾರಣ ಮಾಡಿದ್ದು, ಹಿಂದುಳಿದ ವರ್ಗದ ಆಯೋಗಕ್ಕೆ ನನ್ನ ಹೆಸರು ಸೂಚಿಸುವ ಬದಲು ಸೊರಬದ ಕಲ್ಯಾಣ ಕುಮಾರ್ ಎಂಬುವವರ ಹೆಸರು ಸೂಚಿಸಿದ್ದು, ಎಪಿಎಂಸಿ ಅಧ್ಯಕ್ಷನಾಗುವ ಸಂದರ್ಭದಲ್ಲಿ ಅಡ್ಡಗಾಲು ಹಾಕಿದ್ದು, ಆನಂದಪುರಂನಲ್ಲಿ ರತ್ನಾಕರ ಹೊನಗೋಡು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.
ಲಕ್ಷ್ಮಣ ಸಾಗರ್, ಗುರು ಶಿರವಾಳ, ಗಿರೀಶ್ ಕೋವಿ, ಆನಂದ್ ಭೀಮನೇರಿ, ಕಿರಣ್ ದೊಡ್ಮನೆ, ಮಹಾಬಲ ಇದ್ದರು.