ಡೀಸಿ ಕಚೇರಿ ಮುಂದೆ ಹಾಸನ-ಹಿರಿಯೂರು ಹೆದ್ದಾರಿ ಸಂತ್ರಸ್ತರ ಪ್ರತಿಭಟನೆ

KannadaprabhaNewsNetwork |  
Published : Feb 28, 2024, 02:30 AM IST
27ಎಚ್ಎಸ್ಎನ್16 : ಸೂಕ್ತ ಪರಿಹಾರ ಹಾಗೂ ಪರ್ಯಾಯ ಜೀವನೋಪಾಯಕ್ಕಾಗಿ ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಭೂಮಿ ಕಳೆದುಕೊಂಡ ರೈತರು. | Kannada Prabha

ಸಾರಾಂಶ

ತಾಲೂಕಿನ ದುದ್ದ, ಶಾಂತಿಗ್ರಾಮ, ಗಂಡಸಿ ಹೋಬಳಿಗಳಲ್ಲಿ ಹಾಸನ-ಹಿರಿಯೂರು ರಾಜ್ಯ ಹೆದ್ದಾರಿ ಯೋಜನೆಯಡಿ ಭೂಮಿ ಕಳೆದುಕೊಳ್ಳುತ್ತಿರುವ ಸಂತಸ್ತ್ರ ರೈತರುಗಳ ಹೋರಾಟ ಸಮಿತಿಯಿಂದ ಪರ್ಯಾಯ ಭೂಮಿ ಮತ್ತು ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಮಂಗಳವಾರ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭವಾರ್ತೆ ಹಾಸನತಾಲೂಕಿನ ದುದ್ದ, ಶಾಂತಿಗ್ರಾಮ, ಗಂಡಸಿ ಹೋಬಳಿಗಳಲ್ಲಿ ಹಾಸನ-ಹಿರಿಯೂರು ರಾಜ್ಯ ಹೆದ್ದಾರಿ ಯೋಜನೆಯಡಿ ಭೂಮಿ ಕಳೆದುಕೊಳ್ಳುತ್ತಿರುವ ಸಂತಸ್ತ್ರ ರೈತರುಗಳ ಹೋರಾಟ ಸಮಿತಿಯಿಂದ ಪರ್ಯಾಯ ಭೂಮಿ ಮತ್ತು ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಮಂಗಳವಾರ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಗ್ರಾಮದ ಶಂಕರ್ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಭೂಮಿ ನಮ್ಮ ಹಕ್ಕು. ಭೂಮಿಗೆ ಭೂಮಿ ಕೊಡಲೇಬೇಕು, ಒಂದೇ ಭಾರತ, ಒಂದೇ ಯೋಜನೆ, ಒಂದೇ ಪರಿಹಾರ ಬೇಕು. ಎಕನಾಮಿಕ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಈಗಾಗಲೇ ಆರಂಬಿಸಲಾಗಿದೆ. ಈ ಯೋಜನೆಯು ಹಾಸನ, ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ನೂರಾರು ಹಳ್ಳಿಗಳ ಮೇಲೆ ಹಾದುಹೋಗುತ್ತಿದೆ. ಈ ಯೋಜನೆಯು ಹಳೆಯ ರಸ್ತೆಯ ಅಗಲೀಕರಣಕ್ಕಿಂತ ಹೊಸದಾಗಿ ನಿರ್ಮಿಸುತ್ತಿರುವ ಕಾರಣ ಸಾವಿರಾರು ಎಕರೆ ಈ ಯೋಜನೆಗೆ ಭೂಸ್ವಾಧೀನವಾಗುತ್ತಿದೆ. ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿಯವರ ಸಹಭಾಗಿತ್ವದ ಅಡಿಯಲ್ಲಿ ನಡೆಯುತ್ತಿದೆ. ಇಂತಹ ಯೋಜನೆಗಳಿಗೆ ೨೦೧೩ರ ಭೂಸ್ವಾಧೀನ ಕಾಯ್ದೆ ಪ್ರಕಾರ ಶೇಕಡ ೭೦ ರಷ್ಟು ಸಂತ್ರಸ್ಥರ ರೈತರು ಮತ್ತು ನಾಗರೀಕರ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದಲ್ಲಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗದೇ ತಮ್ಮ ಜೀವನೋಪಾಯವೇ ಸಂಕಷ್ಟದಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗೆ ಭೂಮಿ, ಮನೆ- ಮಠ ಕಳೆದುಕೊಳ್ಳುವ ರೈತರು, ನಾಗರೀಕರು ತಮ್ಮ ಭವಿಷ್ಯದ ಬಗ್ಗೆ ಆತಂಕಗಳಾಗಿದ್ದಾರೆ. ಎಷ್ಟೋ ಭೂಮಿ, ಮನೆ, ನಿವೇಶನಗಳು ಈ ಹೆದ್ದಾರಿಯ ನಿರ್ಮಾಣಕ್ಕೆ ಬಿಟ್ಟುಕೊಡಬೇಕಾಗಿದೆ. ಅದಕ್ಕೆ ಸರ್ಕಾರ ನೀಡುವ ಪರಿಹಾರವೇನು ಎಂಬ ಬಗ್ಗೆ ಬಹುತೇಕ ನಾಗರೀಕರಿಗೆ, ರೈತರಿಗೆ ಖಚಿತ ಮಾಹಿತಿ ದೊರೆಯುತಿಲ್ಲ, ಸಮರ್ಪಕವಾದ ಉತ್ತರ ಸಿಗುತ್ತಿಲ್ಲ, ಈ ಗೊಂದಲಗಳ ನಡುವೆ ಬಹುತೇಕ ಸರ್ವೇ ಕಾರ್ಯ ಪೂರ್ಣಗೊಳಿಸಿ ಜಮೀನಿನಲ್ಲಿ ರಸ್ತೆ ಜಾಗ ಸಹ ಗುರುತಿಸಲಾಗಿದೆ. ಇದರ ಮಧ್ಯೆ ರೈತರು ಮುಂಗಾರಿನಲ್ಲಿ ತಮ್ಮ ಜಮೀನಿನಲ್ಲಿ ಬೆಳೆಯಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಯಾವುದೇ ಸ್ಪಷ್ಟನೆ ಇಲ್ಲದಿರುವುದರಿಂದ ಅನೇಕರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದೆ ಖಾಲಿ ಬಿಡುವಂತಾಗಿದೆ. ಸದ್ಯ ಇರುವ ವಾಣಿಜ್ಯ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ರೈತರು ಕಳೆದ ಒಂದು ವರ್ಷದಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಜನಸ್ನೇಹಿಲ್ಲದ ಇಂತಹ ಯೋಜನೆಗಳಿಗಾಗಿ ರೈತರು ತಮ್ಮ ಸರ್ವಸ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಕೊಡುವ ಪರಿಹಾರದಿಂದ ಭೂಮಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪರಿಹಾರದ ಜೊತೆಗೆ ಪರ್ಯಾಯ ಭೂಮಿಯನ್ನು ಕೊಡಬೇಕು ಮತ್ತು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಜೊತೆಗೆ ಇದುವರೆಗೂ ಸಾಕಷ್ಟು ಮನವಿ ಸಲ್ಲಿಸಿದ್ದರು. ಯಾವುದೇ ಉತ್ತರಗಳು ಬಂದಿರುವುದಿಲ್ಲ ಆದ್ದರಿಂದ ದಯಮಾಡಿ ನಮ್ಮ ಬೇಡಿಕೆಗಳನ್ನು ಹಿಡೇರಿಸಬೇಕಾಗಿ ಕೋರುತ್ತೇವೆ ಎಂದು ಮನವಿ ಮಾಡಿದರು.

ಬೇಡಿಕೆಗಳು: ಯೋಜನೆ ಜಾರಿ ಸಂಬಂಧ ಸಾರ್ವಜನಿಕ ಕುಂದು ಕೊತರೆ ಸಮಸ್ಯೆಯನ್ನು ಆಲಿಸಿ, ಪರಿಹರಿಸಲು ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೂಡಲೇ ನೇಮಿಸಬೇಕು. ಸರ್ವೇ ಕಾರ್ಯಕ್ಕೆ ಮುನ್ನ ಪ್ರತಿ ಗ್ರಾಮದಲ್ಲೂ ರೈತರು ನಾಗರೀಕರ ಸಭೆ ಕರೆದು ಅವರ ಗೊಂದಲಗಳನ್ನು ಪರಿಹಾರ ಮಾಡಬೇಕು. ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡುವ ಪರಿಹಾರದ ಬಗ್ಗೆ ಈ ಕೂಡಲೇ ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಭೂಮಿ ಕಳೆದುಕೊಳ್ಳುವ ರೈತರಿಗೆ ಪರ್ಯಾಯ ಭೂಮಿಯನ್ನು ಕೊಡಬೇಕು ಮತ್ತು ಮನೆ ಕಳೆದುಕೊಳ್ಳುವ ಕುಟುಂಬಗಳಿಗೆ ಕಾನೂನು ಪ್ರಕಾರ ಮನೆ ಕಟ್ಟಿಸಿಕೊಡಬೇಕು ಎಂದರು. ಮಾರುಕಟ್ಟೆ ಮೌಲ್ಯ ನಿರ್ಧಾರಿಸುವಾಗ ಅನುಸರಿಸಿದ ಹಿಂದಿನ ಮೂರು ವರ್ಷಗಳ ಎಸ್.ಆರ್ ವ್ಯಾಲ್ಯು ಪರಿಗಣಿಸಿದ್ದು, ಆ ಸಮಯದಲ್ಲಿ ದೇಶ ವ್ಯಾಪಿ ಕೋರೊನ ಮಹಾಮಾರಿ ಅಟ್ಟಹಾಸ ಮೆರೆದಿದ್ದು ಈ ಸಮಯದಲ್ಲಿ ಯಾವುದೇ ರಿಜಿಸ್ಟ್ರೇಷನ್ ನಡೆದಿರುವುದಿಲ್ಲ ಆಗಾಗಿ ನಮ್ಮಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗಧಿ ಮಾಡಬೇಕು. ಯೋಜನಾ ನಿರಾಶ್ರಿತರ ಪ್ರಮಾಣ ಪತ್ರವನ್ನು ಭೂ ಸಂತ್ರಸ್ಥರಿಗೆ ಮೊದಲೇ ಕೊಡಬೇಕು. ಸಂತ್ರಸ್ಥರ ರೈತರು ಮತ್ತು ನಾಗರೀಕರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗಲು ಸುಂಕರಹಿತ ಪಾಸುಗಳನ್ನು ಭೂಸ್ವಾಧೀನ ಆಗುವುದಕ್ಕಿಂತ ಮುಂಚೆ ವಿತರಿಸಬೇಕು. ಜಮೀನಿನ ಸ್ವಾಧೀನದ ಮಧ್ಯ ಭಾಗದಲ್ಲಿ ರಸ್ತೆ ಬಂದಲ್ಲಿ ಇಕ್ಕೆಲಗಳಲ್ಲಿ ಉಳಿಯುವ ಜಮೀನನ್ನು ಸರ್ಕಾರವೇ ಸ್ವಾಧೀನ ಮಾಡಿಕೊಂಡು ನಿಗದಿಪಡಿಸಿರುವ ಬೆಲೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಇಸಿ ಮತ್ತು ಮ್ಯುಟೇಶನ್, ಪಹಣಿ ಇತರೇ ದಾಖಲೆಗಳನ್ನು ತಾವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಿ ಅಕ್ಕ-ಪಕ್ಕದ ಜಮೀನಿಗೆ ಹಾದುಹೋಗುವ ಪ್ರತ್ಯೇಕ ಸರ್ವೀಸ್ ರಸ್ತೆ ವ್ಯವಸ್ಥೆ ಮಾಡಿಕೊಡುವುದು. ೧೧ ಸಂತ್ರಸ್ಥ ರೈತರ ಕುಟುಂಬಕ್ಕೆ ಒಂದು ನೌಕರಿ ಕೊಡಬೇಕು ಹಾಗೂ ಹೆದ್ದಾರಿ ಹಾದು ಹೋಗುವ ಹೋಬಳಿ ಕೇಂದ್ರಕ್ಕೆ ಒಂದು ಇಂಟರ್‌ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಹೈಟೆಕ್ ಆಸ್ಪತ್ರೆಯನ್ನು ತೆರೆಯಬೇಕೆಂದು ತಮ್ಮ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟರು. ಪ್ರತಿಭಟನೆಯಲ್ಲಿ ಸಂತಸ್ತ್ರ ರೈತರುಗಳ ಹೋರಾಟ ಸಮಿತಿಯ ಗ್ರಾಮಸ್ಥರಾದ ಮಹೆಂದ್ರ, ಚಂದ್ರೇಗೌಡ, ರಮೇಶ್, ಶಶಿಧರ್, ಲೋಕೇಶ್, ಜಯಣ್ಣ, ರಾಧಮ್ಮ, ರಂಗಯ್ಯ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ