ಜೆಡಿಎಸ್ ಮಡಿಲಿಗೆ ಹಾಸನ ಲೋಕಸಭಾ ಟಿಕೆಟ್: ಶಾಸಕ ಸ್ವರೂಪ್

KannadaprabhaNewsNetwork | Published : Feb 9, 2024 1:49 AM

ಸಾರಾಂಶ

ಹಾಸನ ಜಿಲ್ಲೆಯಿಂದ ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯ ದೇವೇಗೌಡರು ಪ್ರತಿನಿಧಿಸಿ ರಾಜ್ಯ, ರಾಷ್ಟ್ರ ಮಾತ್ರವಲ್ಲ, ವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಹಾಗಾಗಿ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ನಮ್ಮ ಪಕ್ಷಕ್ಕೇ ಕೊಡುತ್ತಾರೆ

ಕನ್ನಡಪ್ರಭ ವಾರ್ತೆ ಹಾಸನ

ಮುಂದಿನ ಲೋಕಾಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸರಕಾರಿ ಕಚೇರಿಯೊಂದರಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಜೆಡಿಎಸ್ ಬೆಂಬಲಿತ ಕ್ಷೇತ್ರವಾಗಿರುವುದರಿಂದ ಮೈತ್ರಿಯಾಗಿದ್ದರೂ ಜೆಡಿಎಸ್ ಗೆ ಟಿಕೆಟ್ ಸಿಗುತ್ತದೆ. ಹಾಸನ, ಮಂಡ್ಯ ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ ಸಿಗಲಿವೆ ಎಂಬ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರ ಹೇಳಿಕೆಗೆ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಹಾಸನ ಜಿಲ್ಲೆ, ಜೆಡಿಎಸ್ ನ ಭದ್ರಕೋಟೆ. ಈಗಲೂ ಹೆಚ್ಚಿನ ಶಾಸಕರು ನಮ್ಮ ಪಕ್ಷದಿಂದಲೇ ಆಯ್ಕೆಯಾಗಿದ್ದಾರೆ. ಹಾಸನ ಜಿಲ್ಲೆಯಿಂದ ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯ ದೇವೇಗೌಡರು ಪ್ರತಿನಿಧಿಸಿ ರಾಜ್ಯ, ರಾಷ್ಟ್ರ ಮಾತ್ರವಲ್ಲ, ವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಹಾಗಾಗಿ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ನಮ್ಮ ಪಕ್ಷಕ್ಕೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಹಿರಿಯರಾದ ದೇವೇಗೌಡರೂ ಹಲವು ಬಾರಿ ಇದನ್ನೇ ಹೇಳಿದ್ದಾರೆ. ಯಾವುದೇ ಪಕ್ಷದ ಜೊತೆ ದೇವೇಗೌಡರು, ಕುಮಾರ ಸ್ವಾಮಿ, ರೇವಣ್ಣನವರು ಸೇರಿ ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುವೆ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ರಾಜ್ಯ ರಾಜಕೀಯಕ್ಕೆ ಹೋಗಿಲ್ಲ. ಹಾಸನಕ್ಕೆ ಮಾತ್ರ ಸೀಮಿತವಾಗಿದ್ದೇನೆ. ವೈಯಕ್ತಿಕವಾಗಿ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲಬೇಕು ಎಂದು ಬಯಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ಯಾರಂಟಿಗಾಗಿ ಶಾಸಕರ ಅನುದಾನ ಕಡಿತ

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಿಂದ ಶಾಸಕರ ನಿಧಿಗೆ ಅನುದಾನ ಬಹಳಷ್ಟು ಕಡಿಮೆ ಬರುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ ಸ್ವರೂಪ್, ಈವರೆಗೆ ಕೇವಲ ಒಂದು ಕೋಟಿ ಅನುದಾನ ಕೊಟ್ಟಿದ್ದಾರೆ. ಶಾಸಕರಿಗೆ ಅನುದಾನ ಬರುವುದು ಕುಂಠಿತವಾಗಿದೆ. ಲೋಕಸಭಾ ಚುನಾವಣೆ ನಂತರ ಅನುದಾನ ಬರಬಹುದು ಎಂದು ಭಾವಿಸಿದ್ದೇನೆ. ಅದೇ ನಿರೀಕ್ಷೆಯಲ್ಲಿ ಇದ್ದೇನೆ ಎಂದರು.

Share this article