ಮಹಾನಗರ ಪಾಲಿಕೆಯಾಗಿ ಹಾಸನ ನಗರಸಭೆ

KannadaprabhaNewsNetwork |  
Published : Oct 29, 2024, 12:57 AM ISTUpdated : Oct 29, 2024, 12:58 AM IST
28ಎಚ್ಎಸ್ಎನ್14 : ಹಾಸನಾಂಬೆಯ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ. | Kannada Prabha

ಸಾರಾಂಶ

ಹಾಸನ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ನಗರ ಪಾಲಿಕೆಯನ್ನಾಗಿ ಮಾಡಬೇಕೆಂದು ನನಗೆ ಹೇಳಿದ್ದರು. ನಾನು ಹಾಸನಾಂಬೆ ಜಾತ್ರೆಗೆ ಬರುವ ಮುಂಚಿತವಾಗಿ ಕ್ಯಾಬಿನೆಟ್ ಇತ್ತು. ಸಭೆಯಲ್ಲಿ ಪ್ರಸ್ತಾಪಕ್ಕೆ ತರಲಾಯಿತು. ಈ ವೇಳೆ ಇದಕ್ಕೆ ಸಂಪುಟದ ಒಪ್ಪಿಗೆ ದೊರೆತಿದೆ. ಈಗ ಹಾಸನ ನಗರಸಭೆ ಪಾಲಿಕೆ ಆಗಿದೆ ಎಂದು ಹಾಸನಾಂಬೆ ದೇವಸ್ಥಾನದಲ್ಲಿ ಸಿಹಿ ಸುದ್ದಿ ಹೇಳುವ ಮೂಲಕ ನೆರೆದಿದ್ದವರಲ್ಲಿ ಸಿಎಂ ಸಂತೋಷ ತಂದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ಜಾತ್ರೋತ್ಸವದ ಐದನೇ ದಿನವಾದ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು. ನಂತರ ಹಾಸನ ನಗರಸಭೆಯು ಮಹಾನಗರಪಾಲಿಕೆಯಾಗಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎನ್ನುವ ಸಿಹಿ ಸುದ್ದಿಯನ್ನೂ ನೀಡಿದರು.

ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಿದ್ದರಾಮಯ್ಯ ಅವರು, ನಗರದ ಹೊರವಲಯದ ಬೂವನಹಳ್ಳಿ ಉದ್ದೇಶಿತ ವಿಮಾನ ನಿಲ್ದಾಣದಲ್ಲಿ ಇಳಿದು ದೇವಾಲಯಕ್ಕೆ ಆಗಮಿಸಿದರು. ಮೊದಲು ಹಾಸನಾಂಬೆ ದರ್ಶನ ಮಾಡಿ ಅಲ್ಲೆ ಇರುವ ದರ್ಬಾರ್‌ ಗಣಪತಿ ದೇವಸ್ಥಾನಕ್ಕೆ ತೆರಳಿದರು. ನಂತರ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನದೊಂದಿಗೆ ಗೌರವ ಸ್ವೀಕರಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಹಾಸನಾಂಬೆ ದೇವಿ ದರ್ಶನ ಮಾಡಿ ಗಣಪತಿಯ ದರ್ಶನ ಪಡೆದಿದ್ದೇನೆ. ಎಲ್ಲಾ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದಂತೆ ೨೦೨೪-೨೮ನೇ ವರ್ಷದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ರೈತರು ಸುಭೀಕ್ಷೆಯಿಂದ ಇರಲಿ ಎಂದುಕೊಂಡಂತೆ ನೆರವೇರಿದೆ. ಎಲ್ಲಾ ಜಲಾಶಯಗಳು ಕೂಡ ತುಂಬಿವೆ. ಎಲ್ಲಾ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜನರಲ್ಲಿರುವ ಅಸಮಾನತೆ ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ. ನೂರು ಕೋಟಿ ಜನರಿಗೆ ಒಳ್ಳೆಯದಾದರೇ ನಮಗೂ ಒಳ್ಳೆಯದಾಗುತ್ತದೆ. ನಾವೆಲ್ಲಾ ಸಮಾನ ಸಮಾಜದಲ್ಲಿ ಇರುವವರು. ನಾವುಗಳೆಲ್ಲಾ ಪರಸ್ಪರ ಪ್ರೀತಿಸಬೇಕೆ ಹೊರತು ಯಾವ ಕಾರಣಕ್ಕೂ ಪರಸ್ಪರ ದ್ವೇಷಿಸಬಾರದು. ದ್ವೇಷವನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಯಾರೆ ಪಟ್ಟಭದ್ರ ಹಿತಾಸಕ್ತಿಗಳು ದ್ವೇಷವನ್ನು ಬೆಳೆಸುವ ಕೆಲಸ ಮಾಡಿದರೇ ಅವರಿಗೆ ತಕ್ಕ ಶಾಸ್ತಿ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಹೇಳಿದರು.

ಇನ್ನು ಹಾಸನ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ನಗರ ಪಾಲಿಕೆಯನ್ನಾಗಿ ಮಾಡಬೇಕೆಂದು ನನಗೆ ಹೇಳಿದ್ದರು. ನಾನು ಹಾಸನಾಂಬೆ ಜಾತ್ರೆಗೆ ಬರುವ ಮುಂಚಿತವಾಗಿ ಕ್ಯಾಬಿನೆಟ್ ಇತ್ತು. ಸಭೆಯಲ್ಲಿ ಪ್ರಸ್ತಾಪಕ್ಕೆ ತರಲಾಯಿತು. ಈ ವೇಳೆ ಇದಕ್ಕೆ ಸಂಪುಟದ ಒಪ್ಪಿಗೆ ದೊರೆತಿದೆ. ಈಗ ಹಾಸನ ನಗರಸಭೆ ಪಾಲಿಕೆ ಆಗಿದೆ ಎಂದು ಹಾಸನಾಂಬೆ ದೇವಸ್ಥಾನದಲ್ಲಿ ಸಿಹಿ ಸುದ್ದಿ ಹೇಳುವ ಮೂಲಕ ನೆರೆದಿದ್ದವರಲ್ಲಿ ಸಂತೋಷ ತಂದರು.

ಈ ಒಂದು ಕನಸಿಗೆ ರೆಕ್ಕೆ ಕಟ್ಟಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಜೆ ಗೌಡರು. ಹಾಸನ ನಗರಸಭೆಯನ್ನು ನಗರ ಪಾಲಿಕೆಯನ್ನಾಗಿ ಮಾಡುವ ಉದ್ದೇಶದಿಂದ ಹೆಜ್ಜೆ ಇಟ್ಟು ನಗರಪಾಲಿಕೆ ಮಾಡಲು ಅಗತ್ಯವಾದಷ್ಟು ಜನಸಂಖ್ಯೆಯನ್ನು ಹೊಂದಿಸಲು ನಗರದ ಸುತ್ತಮುತ್ತಲ ಹಲವಾರು ಹಳ್ಳಿಗಳನ್ನು ನಗರ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಇತ್ತೀಚಿನ ಕೆಲ ತಿಂಗಳುಗಳಿಂದ ಈ ಹಳ್ಳಿಗಳ ಆಸ್ತಿಗಳ ಇ ಖಾತೆಯನ್ನೂ ಮಾಡಲು ಶುರು ಮಾಡಲಾಗಿತ್ತು. ಇದೀಗ ನಗರ ಪಾಲಿಕೆಯನ್ನಾಗಿಸಲು ಸಂಪುಟ ಅನುಮೋದನೆ ನೀಡಿರುವುದರಿಂದ ಈ ಪ್ರಕ್ರಿಯೆಗಳಿಗೆ ಇನ್ನಷ್ಟು ವೇಗ ಸಿಗಲಿದೆ.

ಹಾಸನಾಂಬೆ ದೇವಿ ದರ್ಶನದ ನಂತರ ಮುಖ್ಯಮಂತ್ರಿಗಳು ಇಲ್ಲಿನ ಭಕ್ತರ ಸಂಖ್ಯೆ ನೋಡಿ ಹಾಗೂ ಅಚ್ಚುಕಟ್ಟಾಗಿ ದೇವಾಲಯ ಇಟ್ಟಿರುವ ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವರಾದ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ