ಕನ್ನಡಪ್ರಭ ವಾರ್ತೆ ಮಂಡ್ಯ
ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಪೇಟೆ ಬೀದಿ, ಹಳೆಯ ಎಂಸಿ.ರಸ್ತೆ, ಹೊಸಹಳ್ಳಿ ವೃತ್ತ, ವಿ.ವಿ.ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆಗಳಲ್ಲಿ ಜನಜಂಗುಳಿ ತುಂಬಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ಜನರು ಹಬ್ಬದ ಸಾಮಾನುಗಳ ಖರೀದಿಯಲ್ಲಿ ನಿರತರಾಗಿದ್ದರು. ರೈತರು ಜಾನುವಾರುಗಳಿಗೆ ಹೊಸ ಹಗ್ಗ, ಕರಿದಾರ, ಗೆಜ್ಜೆ, ಕೊರಳಿಗೆ ಕಟ್ಟುವ ಗಂಟೆ, ಗೊಂಡದ ಹಾರ, ಚಗರೆಯಿಂದ ಮಾಡಿದ ಹಗ್ಗ ಸೇರಿದಂತೆ ಅವುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಎಳ್ಳು-ಬೆಲ್ಲ ಖರೀದಿ ಭರಾಟೆ ಜೋರು:ಪೇಟೆ ಬೀದಿಯ ಪ್ರಮುಖ ಸ್ಥಳಗಳಲ್ಲಿ ಎಳ್ಳು- ಬೆಲ್ಲ ವ್ಯಾಪಾರದ ಭರಾಟೆ ಜೋರಾಗಿತ್ತು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣಸೇವೆಗೆ ಹೆಚ್ಚಿನ ಬೇಡಿಕೆ ಇತ್ತು. ಮಿಕ್ಸ್ ಎಳ್ಳು- ಬೆಲ್ಲ ಪ್ರತಿ ಕೆಜಿಗೆ ೧೦೦ ರು., ಹುರಿಗಡಲೆ -೧೨೦ ರು., ಕಡಲೆಬೀಜ -೧೪೦ ರು., ಬಿಳಿ ಎಳ್ಳು-೨೦೦ ರು., ಸಕ್ಕರೆ ಅಚ್ಚು-೧೦೦ ರಿಂದ ೧೨೦ ರು., ಬೆಲ್ಲದ ಅಚ್ಚು-೭೦ ರಿಂದ ೮೦ ರು., ಕಲ್ಯಾಣಸೇವೆ-೧೦೦ ರು.ಗೆ ಮಾರಾಟವಾಗುತ್ತಿತ್ತು.
ಹೂವು- ಹಣ್ಣಿನ ಬೆಲೆ ದುಬಾರಿ:
ನಗರ ಪ್ರದೇಶದಲ್ಲಿ ಮಹಿಳೆಯರು ಎಳ್ಳು- ಬೆಲ್ಲ ತಯಾರಿಯಲ್ಲಿ ತೊಡಗಿಸಿಕೊಂಡು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಕ್ಕಳು ಹೊಸಬಟ್ಟೆಯನ್ನು ತೊಟ್ಟು, ಎಳ್ಳು- ಬೆಲ್ಲ ವಿನಿಮಯ ಮಾಡುವ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಸಡಗರದ ತಯಾರಿ ನಡೆಸಿದ್ದರು.
ವರ್ಷದಿಂದ ವರ್ಷಕ್ಕೆ ರಾಸುಗಳನ್ನು ಸಾಕುವವರ ಸಂಖ್ಯೆ ಕ್ಷೀಣಿಸುತ್ತಿದೆ. ರಾಸುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹಬ್ಬ ಕಳೆಗಟ್ಟುತ್ತಿಲ್ಲ. ರಾಸುಗಳಿಗಿಂತಲೂ ಹಾಲು ಕೊಡುವ ಹಸುಗಳ ಸಂಖ್ಯೆ ಹೆಚ್ಚಿದೆ. ಜಮೀನು ಉಳುಮೆಗೂ ರಾಸುಗಳನ್ನು ಬಳಸುವುದು ಕಡಿಮೆಯಾಗಿದೆ. ಆಧುನಿಕ ಕೃಷಿ ಯಂತ್ರೋಪಕರಣಗಳು ಬಂದ ನಂತರದಲ್ಲಿ ರಾಸುಗಳು ರೈತರಿಂದ ದೂರವಾಗುತ್ತಿವೆ. ಹಿಂದೆಲ್ಲಾ ಗ್ರಾಮೀಣ ಪ್ರದೇಶದ ಜನರು ಹಬ್ಬದ ಮುನ್ನಾ ದಿನವೇ ರಾಸುಗಳ ಮೈ ತೊಳೆದು, ಕೊಂಬುಗಳನ್ನು ಸವರಿ ನುಣುಪಾಗಿಸಿ ವಿಶೇಷ ಮೆರುಗು ಬರುವಂತೆ ಮಾಡುವ ಕಾರ್ಯ ನಡೆಸುತ್ತಿದ್ದರು. ದನ- ಕರುಗಳ ಸಿಂಗಾರಕ್ಕೆ ಸಿದ್ಧತೆ ನಡೆಸುತ್ತಾ, ಕಿಚ್ಚು ಹಾಯಿಸುವ ಕ್ಷಣಕ್ಕೆ ಎದುರು ನೋಡುತ್ತಿದ್ದರು. ಈಗ ಆ ಸಂಭ್ರಮದ ದೃಶ್ಯಗಳು ಮರೆಯಾಗಿವೆ. ಸಂಕ್ರಾಂತಿ ಎಳ್ಳು- ಬೆಲ್ಲ ಹಂಚುವುದಕ್ಕಷ್ಟೇ ಸೀಮಿತವಾಗಿದೆ.