ಕನ್ನಡಪ್ರಭ ವಾರ್ತೆ ತುಮಕೂರು
ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ರಕ್ತ ರಹಿತ ಕ್ರಾಂತಿಯ ಮೂಲಕ ಈ ದೇಶದ ಎಲ್ಲಾ ವರ್ಗಗಳಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಯ ಸವಲತ್ತುಗಳನ್ನು ಸಂವಿಧಾನದ ಮೂಲಕ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ. ಬಾಲಕೃಷ್ಣ ಹೇಳಿದರು.ನಗರದ ಟಿಎಪಿಎಂಎಸ್ ಕಟ್ಟಡದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಡೀ ವಿಶ್ವದಲ್ಲಿಯೇ ದೇಶದ ಎಲ್ಲಾ ವರ್ಗದ ಜನರನ್ನು ಒಳಗೊಂಡ ಸಂವಿಧಾನವಿದ್ದರೆ, ಅದು ಭಾರತದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವಾಗಿದೆ. ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದರು.
ಭಾರತದ ಸಂವಿಧಾನ ಜಾತಿ, ವರ್ಗ, ವರ್ಣ, ಲಿಂಗಭೇಧವಿಲ್ಲದೆ ಎಲ್ಲರಿಗೂ ಸಮಾನತೆಯನ್ನು ಕಲ್ಪಿಸುವ ಸಮ ಸಮಾಜದ ಪರಿಕಲ್ಪನೆ ಹೊಂದಿರುವ ಸಂವಿಧಾನವಾಗಿದೆ. ಇದರ ಅಡಿಯಲ್ಲಿ ಭಾರತ ಸಧೃಢವಾಗಿ ಮುನ್ನೆಡೆಯಲು ಹಾಕಿಕೊಟ್ಟ ಮಾರ್ಗವಾಗಿದೆ. ಇಡೀ ವಿಶ್ವದಲ್ಲಿ ಬಾಬಾ ಸಾಹೇಬರಷ್ಟು ಪದವಿಗಳನ್ನು ಪಡೆದ ಜ್ಞಾನವಂತರು ಮೊತ್ತಬ್ಬರಿಲ್ಲ. ಹಾಗಾಗಿ ಬಾಬಾ ಸಾಹೇಬರು ಹುಟ್ಟಿದ ದಿನವನ್ನು ವಿಶ್ವಸಂಸ್ಥೆ ಜ್ಞಾನದ ದಿನವಾಗಿ ಘೋಷಿಸಿದೆ ಎಂದರುಹಿಂದೂ ನಾವೆಲ್ಲ ಒಂದು ಎಂದು ಹೇಳುತ್ತಿರುವ ನಮ್ಮ ನಾಡಿನಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಒರ್ವ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ, ಕೊಲೆ ನಡೆಯತ್ತಿದೆ. ದಲಿತರು ದೇವಾಲಯ ಪ್ರವೇಶಿಸಿದರು ಎಂಬ ಕಾರಣಕ್ಕೆ ಬೇರೆ ದೇವಾಲಯ ನಿರ್ಮಿಸಿದಾಗ, ದೇವರನ್ನು ಗುಡಿಯಿಂದ ಹೊರತಂದಾಗ ಬಾಯಿ ಬಿಡದ, ತಪ್ಪು ಮಾಡಿದವರಿಗೆ ಜಾಗೃತಿ ಮೂಡಿಸಿದ ಜನರು, ಬಾಬಾ ಸಾಹೇಬರ ಹುಟ್ಟಿದ ದಿನ, ಪರಿನಿರ್ವಾಣ ದಿನವನ್ನು ಆಚರಿಸಿ, ಕಣ್ಣೀರು ಹರಿಸಿ, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತಿದ್ದಾರೆ ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ನಾಗರಾಜು ಉಪಾಧ್ಯಕ್ಷ ಹನುಮಂತರಾಜು, ಪದಾಧಿಕಾರಿಗಳಾದ ಹೆಚ್.ಗೋಪಿನಾಥ್,ಪ್ರಕಾಶ್, ಗಿರೀಶ್, ಚಂದ್ರಶೇಖರ್, ರವಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.