ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ : ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Dec 08, 2025, 02:00 AM IST
Siddaramaiah

ಸಾರಾಂಶ

‘ನಿಮಗೆ ಜಾಸ್ತಿ ಮಕ್ಕಳು ಬೇಡ, ನೀವು ಎರಡೇ ಮಕ್ಕಳನ್ನು ಮಾಡಿಕೊಳ್ಳಿ. ಏಕೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿಯಾಗಿ ಹೆಚ್ಚಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಇಂದಿನ ಅಗತ್ಯ’. ಇದು ನೂತನ ದಂಪತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸಲಹೆ.

 ನವಲಗುಂದ :  ‘ನಿಮಗೆ ಜಾಸ್ತಿ ಮಕ್ಕಳು ಬೇಡ, ನೀವು ಎರಡೇ ಮಕ್ಕಳನ್ನು ಮಾಡಿಕೊಳ್ಳಿ. ಏಕೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿಯಾಗಿ ಹೆಚ್ಚಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಇಂದಿನ ಅಗತ್ಯ’. ಇದು ನೂತನ ದಂಪತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸಲಹೆ.

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಶಾಸಕ ಎನ್.ಎಚ್.ಕೋನರಡ್ಡಿಯವರು ತಮ್ಮ ಪುತ್ರ ನವೀನಕುಮಾರ ಅವರ ಆರತಕ್ಷತೆ ಅಂಗವಾಗಿ ಆಯೋಜಿಸಿದ್ದ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೂತನ ವಧು-ವರರಿಗೆ ಶುಭಾಶಯ ಕೋರಿದ ಸಿಎಂ, ಸರಳ, ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿ ಎಂದರು. ‘ಇಲ್ಲಿ ಮದುವೆಯಾದ ನೂತನ ದಂಪತಿಗಳು ಎರಡೇ ಮಕ್ಕಳನ್ನು ಮಾಡಿಕೊಳ್ಳಬೇಕು. ಏಕೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಾಗುತ್ತಾ ಹೋಗುತ್ತಿದೆ’ ಎಂದು ಸಲಹೆ ನೀಡಿದರು.

ಇಲ್ಲಿ ನಡೆದ 75 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜದವರೂ ಮದುವೆಯಾಗುತ್ತಿರುವುದು ಸಂತೋಷದ ಕ್ಷಣ. ಸಮಾಜದಲ್ಲಿನ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ...ಎಲ್ಲರೂ ಮನುಷ್ಯರೇ. ಎಲ್ಲರೂ ಸಹಬಾಳ್ವೆಯಿಂದ ಬದುಕು ನಡೆಸಬೇಕು. ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಬೇಕು. ಜಾತಿ ವ್ಯವಸ್ಥೆ ಹೋಗಬೇಕೆಂದರೆ ಅಂತರ್ಜಾತಿಯ ವಿವಾಹಗಳು ಹೆಚ್ಚೆಚ್ಚು ಆಗಬೇಕು ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಕೆಳಜಾತಿಯವರೊಂದಿಗೆ ಮೇಲ್ಜಾತಿಯವರ ಮದುವೆ ಮಾಡಿಸಿ, ಅಂದೇ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದರು. ಸರ್ವ ಧರ್ಮಗಳ ವಧು-ವರರು ಸಾಮೂಹಿಕ ವಿವಾಹ ಆಗುವುದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು. ಇದರಿಂದ ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯವಾಗುತ್ತದೆ ಎಂದು ಹೇಳಿದರು.

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆ ಆಗುತ್ತದೆ ಕಲ್ಲು: ಡಿಕೆಶಿ

ಶಾಸಕ ಕೋನರೆಡ್ಡಿಯವರು ಸರ್ವಧರ್ಮದ ಮದುವೆಯ ಕಾರ್ಯಕ್ರಮ ಮಾಡಿದ್ದಾರೆ. ತಮ್ಮ ಮಗನ ಮದುವೆಯ ಸಂದರ್ಭದಲ್ಲಿ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ಇದೊಂದು ಆದರ್ಶನೀಯ ಕಾರ್ಯಕ್ರಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಶ್ಲಾಘಿಸಿದರು.ನವಲಗುಂದದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರಿಗೆ ಅಕ್ಷತೆ ಹಾಕಿ ಅವರು ಮಾತನಾಡಿದರು. ಉಳಿ ಪೆಟ್ಟು ಬಿದ್ದಾಗಲೇ ಕಲ್ಲು ಶಿಲೆಯಾಗಲು ಸಾಧ್ಯ. 

ಇಲ್ಲಿ ನಿಮ್ಮೆಲ್ಲರ ಆಶೀರ್ವಾದ ಇಲ್ಲದೆ ಈ ಕಾರ್ಯಕ್ರಮ ಸಾಧ್ಯವಾಗುತ್ತಿರಲಿಲ್ಲ. ಹೆಣ್ಣು ಒಂದು ಕಡೆ, ಗಂಡು ಒಂದು ಕಡೆ ಇತ್ತು. ಅವರಿಬ್ಬರೂ ಸೇರಿ ವಧು-ವರರಾದರೆ, ಅಕ್ಕಿ ಒಂದು ಕಡೆ, ಅರಿಶಿನ ಸೇರಿ ಮಂತ್ರಾಕ್ಷತೆಯಾಯಿತು. ಮದುವೆಯ ಖರ್ಚಿನ ಹಣದಿಂದ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಹೊಸ ಜಗತ್ತಿನಲ್ಲಿ ಮತ್ತೊಬ್ಬರಿಗೆ ಉದ್ಯೋಗ ಕೊಡುವ ರೀತಿಯಲ್ಲಿ ಬೆಳೆಯಿರಿ ಎಂದು ಸಲಹೆ ನೀಡಿದರು. 

ಇದು ಐತಿಹಾಸಿಕ ಕಾರ್ಯಕ್ರಮ. ಇದು ಸರ್ವಧರ್ಮ ಕಾರ್ಯಕ್ರಮ. ಶಾಂತಿಯ ತೋಟ, ಇದೇ ನಮ್ಮ ತತ್ವ. ಕೋನರೆಡ್ಡಿಯವರು ಅವರ ಮಗನ ಮದುವೆಯ ಸಂದರ್ಭದಲ್ಲಿ 75 ಜೋಡಿಗಳ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ನಿಮ್ಮ ಕುಟುಂಬಗಳಿಗೆ ಒಳ್ಳೆಯದಾಗಲಿ. ನೀವೆಲ್ಲರೂ ಆದರ್ಶ ದಂಪತಿಯಾಗಿ ಸುಖದಿಂದ ಬಾಳಿ. ಇಡೀ ಸರಕಾರವೇ ನಿಮ್ಮೆಲ್ಲರಿಗೆ ಆಶೀರ್ವಾದ ಮಾಡಿದೆ ಎಂದರು. 

ಸಾಮೂಹಿಕ ವಿವಾಹದಲ್ಲಿ ಶಾಸಕ ಕೋನರೆಡ್ಡಿ ಪುತ್ರ ನವೀನ್‌ ಮದುವೆ 

ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿಯವರು ತಮ್ಮ ಪುತ್ರನ ಮದುವೆಯನ್ನು ಜನಸಾಮಾನ್ಯರಂತೆ ಸಾಮೂಹಿಕ ವಿವಾಹದಲ್ಲಿ ನೆರವೇರಿಸುವ ಮೂಲಕ ಸರಳತೆ ಮೆರೆದಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಮಾಡೆಲ್ ಸ್ಕೂಲ್ ಮೈದಾನದಲ್ಲಿ ಭಾನುವಾರ ಈ ಸರ್ವ ಧರ್ಮ ಸಾಮೂಹಿಕ ವಿವಾಹ ನಡೆಯಿತು.

ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಅವರಿಂದ ಆಯೋಜನೆಯಾಗಿದ್ದ ಈ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕೋನರೆಡ್ಡಿಯವರ ಪುತ್ರ ನವೀನ್ ಮದುವೆ‌ ಕೂಡಾ‌ ನಡೆಯಿತು. ಸಮಾರಂಭದಲ್ಲಿ ಒಟ್ಟು 75 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಸೇರಿ ವಿವಿಧ ಧರ್ಮಗಳ-ವಿವಿಧ ಜಾತಿಗಳ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ,ಶಿವಕುಮಾರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಕೃಷ್ಣ ಬೈರೇಗೌಡ, ರಾಮಲಿಂಗಾರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತಿತರ ಗಣ್ಯರು ಭಾಗಿಯಾಗಿ, ನೂತನ ವಧು-ವರರಿಗೆ ಶುಭ ಕೋರಿದರು.

ಸಿದ್ದು ಮತ್ತು ಡಿಕೆಶಿಯವರು ಹುಬ್ಬಳ್ಳಿವರೆಗೆ ಒಂದೇ ಹೆಲಿಕಾಪ್ಟರ್‌ನಲ್ಲಿ ಬಂದು ನಂತರ, ಬೇರೆ, ಬೇರೆ ಕಾರಲ್ಲಿ ತೆರಳಿ, ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌