ಹಾವೇರಿ ಹಾಲು ಒಕ್ಕೂಟದ ಚುಕ್ಕಾಣಿ ಹಿಡಿಯಲು ಕಸರತ್ತು

KannadaprabhaNewsNetwork |  
Published : Jan 17, 2025, 12:47 AM IST
ಹಾವೇಮುಲ್ | Kannada Prabha

ಸಾರಾಂಶ

ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಹಾವೇಮುಲ್‌) ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಇದರ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಭಾರಿ ಕಸರತ್ತು ಶುರುವಾಗಿದೆ. 8 ನಿರ್ದೇಶಕ ಸ್ಥಾನಗಳಿಗೆ ಮಾ. 2ರಂದು ಚುನಾವಣೆ ನಡೆಯಲಿದ್ದು, ಸ್ಪರ್ಧಿಸಲು ಹಲವರು ಉತ್ಸುಕತೆ ತೋರುತ್ತಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಹಾವೇಮುಲ್‌) ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಇದರ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಭಾರಿ ಕಸರತ್ತು ಶುರುವಾಗಿದೆ. 8 ನಿರ್ದೇಶಕ ಸ್ಥಾನಗಳಿಗೆ ಮಾ. 2ರಂದು ಚುನಾವಣೆ ನಡೆಯಲಿದ್ದು, ಸ್ಪರ್ಧಿಸಲು ಹಲವರು ಉತ್ಸುಕತೆ ತೋರುತ್ತಿದ್ದಾರೆ.

ಹಾವೇರಿ ಹಾಲು ಒಕ್ಕೂಟ ರಚನೆಗೊಂಡು ಮೂರು ವರ್ಷಗಳು ಕಳೆಯುತ್ತಿದ್ದು, ಇದೀಗ ಮೊದಲ ಬಾರಿಗೆ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡು ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆಯಾದರೂ ವಿವಿಧ ಕಾರಣಗಳಿಂದ ಚುನಾವಣೆ ವಿಳಂಬವಾಗಿತ್ತು. ಈಗ ಚುನಾವಣಾ ಪ್ರಕ್ರಿಯೆ ಶುರುವಾಗಿದ್ದು, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿದ್ದಾರೆ. ಹಾವೇಮುಲ್‌ ರಚನೆಯಾದರೂ ಜಿಲ್ಲೆಯ ಹಾಲು ಉತ್ಪಾದಕರ ನಿರೀಕ್ಷೆಗೆ ತಕ್ಕಂತೆ ಕೆಲಸವಾಗಿಲ್ಲ ಎಂಬ ಕೊರಗು ಅನೇಕರಲ್ಲಿದೆ. ಸ್ಥಳೀಯವಾಗಿಯೇ ಹಾಲು ಶೇಖರಣೆ, ಪ್ಯಾಕೇಜ್‌ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳುಳ್ಳ ಘಟಕ ಸ್ಥಾಪನೆಯಾಗಿ ನಷ್ಟ ಕಡಿಮೆಯಾದರೂ ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭಾಂಶ ಸಿಗುತ್ತಿಲ್ಲ ಎಂಬುದು ಉತ್ಪಾದಕರ ನೋವಾಗಿದೆ. ಆದ್ದರಿಂದ ಈ ಸಲ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರಿದ್ದರೆ, ಮತದಾರರನ್ನು ಸೆಳೆಯಲು ಈಗಾಗಲೇ ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ.

8 ನಿರ್ದೇಶಕ ಸ್ಥಾನ: ತಾಲೂಕಿಗೆ ಒಬ್ಬರಂತೆ ಜಿಲ್ಲೆಯ ಎಂಟು ತಾಲೂಕಿಗೆ 8 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 378 ಮತದಾರರಿದ್ದಾರೆ. ಹಾನಗಲ್ಲ ತಾಲೂಕಿ ಅತಿಹೆಚ್ಚು 58 ಮತದಾರರಿದ್ದರೆ, ರಾಣಿಬೆನ್ನೂರು 56, ಸವಣೂರು 37, ಹಾವೇರಿ 54, ಶಿಗ್ಗಾಂವಿ 38, ರಟ್ಟೀಹಳ್ಳಿ 44, ಹಿರೇಕೆರೂರು 51 ಹಾಗೂ ಬ್ಯಾಡಗಿ ತಾಲೂಕಿನಲ್ಲಿ 38 ಮತದಾರರಿದ್ದಾರೆ. ಪ್ರತಿ ಹಾಲು ಉತ್ಪಾದಕರ ಸಂಘಕ್ಕೆ ಒಂದು ಮತಕ್ಕೆ ಅವಕಾಶವಿದ್ದು, ಈಗಾಗಲೇ ಸ್ಪರ್ಧಿಸಲು ಮತ್ತು ಮತದಾನಕ್ಕೆ ಆಯಾ ಸಂಘಗಳು ಡೆಲಿಗೇಟ್‌ ಸಲ್ಲಿಸಿವೆ. ಇದರ ಆಧಾರದ ಮೇಲೆ ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗೆ ಫೆ. 8ರ ವರೆಗೆ ಕಾಲವಕಾಶ ನೀಡಲಾಗಿದೆ. ಫೆ.10ಕ್ಕೆ ಅರ್ಹ ಮತ್ತು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ.

ಮಾ. 2ಕ್ಕೆ ಚುನಾವಣೆ: ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅರ್ಹ ಮತದಾರರ ಪಟ್ಟಿ ಪ್ರಕಟಗೊಂಡ ಆನಂತರ ಫೆ. 11ರಂದು ಕ್ಯಾಲೆಂಡರ್‌ ಆಫ್‌ ಇವೆಂಟ್‌ ಬಿಡುಗಡೆಯಾಗಲಿದೆ.

ಬಹುತೇಕ ಮಾ. 2ರಂದು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು ಅದೇ ದಿನ ಎಣಿಕೆ ಕೂಡ ನಡೆಯಲಿದೆ. ಅದಕ್ಕಾಗಿ ಈಗಿನಿಂದಲೇ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಮತದಾರರನ್ನು ಸೆಳೆಯುವ ಪ್ರಯತ್ನ ಶುರು ಮಾಡಿದ್ದಾರೆ. ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸಿ ಹಾವೇಮುಲ್‌ ಹಿಡಿತ ತೆಗೆದುಕೊಳ್ಳುವ ಪ್ರಯತ್ನವೂ ಅನೇಕರಿಂದ ನಡೆದಿದೆ. ಆಯ್ಕೆಯಾಗುವ 8 ನಿರ್ದೇಶಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದು, ತುರುಸು ಜೋರಾಗಿ ಸಾಗಿದೆ.

ನಿರ್ದೇಶಕ ಸ್ಥಾನಗಳ ಫಲಿತಾಂಶ ಬಂದ 15 ದಿನದೊಳಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿದೆ. ಸದ್ಯ ಬಸವರಾಜ ಅರಬಗೊಂಡ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ ಒಕ್ಕೂಟದಲ್ಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹಾಗೂ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅರಬಗೊಂಡ ಅವರು ಮತ್ತೊಮ್ಮೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಹಾವೇರಿಗೆ ಪ್ರತ್ಯೇಕ ಒಕ್ಕೂಟ ರಚನೆಯಲ್ಲೂ ಇವರು ಶ್ರಮಿಸಿದ್ದಾರೆ. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದ್ದು, ಚುನಾವಣೆಯೊಂದಿಗೆ ರಾಜಕೀಯವೂ ಬೆರೆಯುತ್ತಿರುವುದರಿಂದ ಮತದಾರರ ನಿಲುವು ಏನು ಎಂಬುದು ಕುತೂಹಲ ಕೆರಳಿಸಿದೆ.

ಅಪೇಕ್ಷೆಪಟ್ಟರೆ ನಿಲ್ಲುತ್ತೇನೆ: ಸಂಘದ ಪ್ರತಿನಿಧಿಗಳ ಸಭೆ ಕರೆದು ಅವರೆಲ್ಲ ನಾನು ಸ್ಪರ್ಧಿಸಬೇಕು ಎಂದು ಅಪೇಕ್ಷೆ ಪಟ್ಟರೆ ಚುನಾವಣೆಗೆ ನಿಲ್ಲುತ್ತೇನೆ. ಅಲ್ಲದೇ ಅವರ ಅಭಿಪ್ರಾಯವನ್ನು ನಮ್ಮ ಪಕ್ಷದ ನಾಯಕರ ಗಮನಕ್ಕೆ ತಂದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹಾವೇಮುಲ್‌ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!