ಪ್ರಯಾಗರಾಜ್‌, ಗೋವಾದಿಂದ ಹಾವೇರಿ ನಂದಿನಿ ಹಾಲು ತಿರಸ್ಕೃತ!

KannadaprabhaNewsNetwork | Published : Apr 3, 2025 12:30 AM

ಸಾರಾಂಶ

ಕೆಲ ಶೀತಲೀಕರಣ ಘಟಕಗಳಲ್ಲಿ ಹಾಲಿಗೆ ರಾತ್ರೋರಾತ್ರಿ ನೀರು, ಸಕ್ಕರೆ, ಯುರಿಯಾ ಕಲಬೆರಕೆ ಮಾಡಿ ಒಕ್ಕೂಟಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ.

ನಾರಾಯಣ ಹೆಗಡೆ

ಹಾವೇರಿ: ಗುಣಮಟ್ಟದ ಕೊರತೆ, ಯುಎಚ್‌ಟಿ (ಅಲ್ಟ್ರಾ ಹೀಟ್‌ ಟ್ರೀಟ್‌ಮೆಂಟ್‌) ಘಟಕದಲ್ಲಿನ ತಾಂತ್ರಿಕ ಸಮಸ್ಯೆಯಿಂದ ಹಾವೇರಿಯ ಹಾಲು ಒಕ್ಕೂಟದ ನಂದಿನಿ ಹಾಲಿಗೆ ಕೆಟ್ಟ ಹೆಸರು ಬಂದಿದೆ. ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ಗೆ ಕಳುಹಿಸಿದ್ದ 12 ಸಾವಿರ ಲೀಟರ್‌ ಹಾಗೂ ಈ ಹಿಂದೆ ಗೋವಾಕ್ಕೆ ಕಳುಹಿಸಿದ್ದ ನಂದಿನಿ ಹಾಲು ಗುಣಮಟ್ಟದ ಕೊರತೆ ಕಾರಣಕ್ಕೆ ತಿರಸ್ಕೃತಗೊಂಡಿರುವುದು ತಿಳಿದುಬಂದಿದೆ.

ಇಲ್ಲಿಯ ಜಂಗಮನಕೊಪ್ಪದಲ್ಲಿ ಎರಡು ವರ್ಷಗಳ ಹಿಂದೆ ಪಿಪಿಪಿ (ಪಬ್ಲಿಕ್‌ ಪ್ರೈವೇಟ್‌ ಪಾರ್ಟನರ್‌ಶಿಪ್‌) ಮಾದರಿಯಲ್ಲಿ ಸ್ಥಾಪನೆಯಾದ ಯುಎಚ್‌ಟಿ ಘಟಕದಲ್ಲಿ ನಂದಿನಿ ಹಾಲಿನ ಗುಡ್‌ ಲೈಫ್‌ ಟೆಟ್ರಾ ಪ್ಯಾಕೆಟ್‌ ಘಟಕ ಆರಂಭವಾಗಿದೆ. ಖಾಸಗಿ ಸಂಸ್ಥೆಯು ಈ ಘಟಕವನ್ನು ನಿರ್ವಹಿಸುತ್ತಿದ್ದು, ಈಗ ಅಲ್ಲಿ ತಯಾರಾದ ನಂದಿನಿ ಹಾಲಿನ ಟೆಟ್ರಾ ಪ್ಯಾಕೆಟ್‌ ತಿರಸ್ಕೃತಗೊಂಡಿರುವ ಮಾಹಿತಿ ಬಹಿರಂಗವಾಗಿದೆ. ಪ್ರಯಾಗ್‌ರಾಜ್‌ ಕುಂಭಮೇಳದ ಸಂದರ್ಭದಲ್ಲಿ 12 ಸಾವಿರ ಲೀಟರ್‌ ಗುಡ್ ಲೈಫ್‌ ಹಾಲು ಪೂರೈಸುವಂತೆ ಬೇಡಿಕೆ ಬಂದಿತ್ತು. ಅದರಂತೆ 4 ಸಾವಿರ ಲೀಟರ್‌ ಹಾಲು ಪೂರೈಸಲಾಗಿತ್ತು.

ಆದರೆ, ಗುಣಮಟ್ಟದ ಕೊರತೆ ಕಾರಣಕ್ಕೆ ಕಳುಹಿಸಿದ್ದ 4 ಸಾವಿರ ಲೀ. ಸೇರಿದಂತೆ ಬೇಡಿಕೆ ಸಲ್ಲಿಸಿದ್ದ 12 ಸಾವಿರ ಲೀಟರ್‌ ಹಾಲು ತಿರಸ್ಕೃತಗೊಂಡಿತ್ತು. ಈ ಹಿಂದೆ ಇದೇ ಘಟಕದಿಂದ ಗೋವಾಕ್ಕೆ ಪೂರೈಸಿದ್ದ ಹಾಲು ಕೂಡ ತಿರಸ್ಕೃತಗೊಂಡಿದ್ದವು ಎಂದು ಹಾವೆಮುಲ್‌ ಆಡಳಿತ ಮಂಡಳಿಯವರೇ ಹೇಳುತ್ತಿದ್ದಾರೆ. ಖಾಸಗಿ ಕಂಪನಿಯ ಘಟಕದಲ್ಲಿನ ತಾಂತ್ರಿಕ ಸಮಸ್ಯೆಯಿಂದ ನಂದಿನಿ ಬ್ರ್ಯಾಂಡ್‌ಗೆ ಕಳಂಕ ಬರುವಂತಾಗಿದೆ.

ಘಟಕದಲ್ಲಿನ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕಳೆದ 15 ದಿನಗಳಿಂದ ಹಾವೆಮುಲ್‌ನಿಂದ ಯುಎಚ್‌ಟಿ ಘಟಕಕ್ಕೆ ಹಾಲು ಪೂರೈಕೆ ಬಂದ್‌ ಆಗಿದೆ. ನಿತ್ಯ ಹಾವೆಮುಲ್‌ನಿಂದ ಯುಎಚ್‌ಟಿ ಘಟಕಕ್ಕೆ 30 ಸಾವಿರ ಲೀಟರ್‌ ಹಾಲು ಪೂರೈಕೆಯಾಗುತ್ತಿತ್ತು.

ಹಾವೇರಿ ಹಾಲಿಗೆ ಕೆಟ್ಟ ಹೆಸರು: ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾದರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಧಾರವಾಡ ಒಕ್ಕೂಟದಿಂದ ವಿಭಜಿಸಿ ಹಾವೆಮುಲ್‌ ರಚಿಸಲಾಗಿತ್ತು. ಜಿಲ್ಲೆಯ ಹೈನುಗಾರರು ಕಷ್ಟಪಟ್ಟು ಹೆಚ್ಚು ಹಾಲು ಉತ್ಪಾದನೆಗೆ ಒತ್ತು ನೀಡುತ್ತಿದ್ದರೆ. ಕಾಣದ ಕೈಗಳು ಹಾಲಿಗೆ ಕಲಬೆರಕೆ ಮಾಡುತ್ತಿರುವ ಪರಿಣಾಮ ರಾಜ್ಯಮಟ್ಟದಲ್ಲಿ ಹಾವೇರಿ ಹಾಲಿಗೆ ಕೆಟ್ಟ ಹೆಸರು ಬಂದಿದೆ. ಕಾರಣ ಜಿಲ್ಲೆಯಲ್ಲಿ 1.35 ಲಕ್ಷ ಲೀ. ಹಾಲು ಉತ್ಪಾದನೆಯಾದರೆ, ಕೇವಲ 20 ಸಾವಿರ ಲೀ. ಮಾತ್ರ ಪ್ಯಾಕೇಟ್ ಹಾಲು ಮಾರಾಟವಾಗುತ್ತಿದೆ.ಜಿಲ್ಲೆಯಲ್ಲಿ 445 ಹಾಲು ಉತ್ಪಾದಕ ಸಹಕಾರಿ ಸಂಘಗಳಿವೆ. ಅವುಗಳಲ್ಲಿ 240 ಸಂಘಗಳಲ್ಲಿ ಸ್ವಯಂಚಾಲಿತ ಹಾಲು ಪರೀಕ್ಷಾ ಕೇಂದ್ರಗಳಿವೆ. ಇಲ್ಲಿ ಗುಣಮಟ್ಟದ ಹಾಲು ಮಾತ್ರ ಸ್ವೀಕರಿಸಲಾಗುತ್ತಿದೆ. ಸ್ವಯಂಚಾಲಿತ ಹಾಲು ಪರೀಕ್ಷಾ ವ್ಯವಸ್ಥೆ ಇಲ್ಲದ ಕೆಲ ಸಂಘಗಳು ಕಲಬೆರಕೆ ಹಾಲು ಕಳುಹಿಸಿದರೆ, ಜಿಲ್ಲೆಯ 32 ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ 3 ಸಾವಿರ ಲೀ. ಸಾಮರ್ಥ್ಯದ ಹಾಲು ಶೀತಲೀಕರಣ ಘಟಕಗಳಿವೆ.

ಇದರಲ್ಲಿ ಕೆಲ ಶೀತಲೀಕರಣ ಘಟಕಗಳಲ್ಲಿ ಹಾಲಿಗೆ ರಾತ್ರೋರಾತ್ರಿ ನೀರು, ಸಕ್ಕರೆ, ಯುರಿಯಾ ಕಲಬೆರಕೆ ಮಾಡಿ ಒಕ್ಕೂಟಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಹೊಸ ಆಡಳಿತ ಮಂಡಳಿ ಇಂತಹ ಕಲಬೆರಕೆ ಘಟಕಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ಕಲಬೆರಕೆ ವಿರುದ್ಧ ಕಠಿಣ ಕ್ರಮ: ಯುಎಚ್‌ಟಿ ಘಟಕದಿಂದ ಪ್ರಯಾಗ್‌ರಾಜ್‌ಗೆ ಕಳುಹಿಸಿದ್ದ 12 ಸಾವಿರ ಲೀಟರ್‌ ನಂದಿನಿ ಹಾಲು ರಿಜೆಕ್ಟ್‌ ಆಗಿದೆ. ಗೋವಾದಿಂದಲೂ ಈ ಹಿಂದೆ ತಿರಸ್ಕೃತಗೊಂಡಿತ್ತು. ಘಟಕದಲ್ಲಿನ ಸಮಸ್ಯೆಯಿಂದ ಕಳೆದ 15 ದಿನಗಳಿಂದ ಹಾಲು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗೆ ಕೆಎಂಎಫ್‌ಗೆ ತೆರಳಿ ಹಿರಿಯ ಅಧಿಕಾರಿಗಳನ್ನು ಭೇಟಿ ನೀಡಿದ್ದ ವೇಳೆ, ಹಾವೇರಿ ಹಾಲಿಗೆ ಕೆಟ್ಟ ಹೆಸರು ಬಂದಿದೆ. ಗುಣಮಟ್ಟ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕಲಬೆರಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.

Share this article