ಮನೆಯಲ್ಲಿ ಗ್ರಂಥಾಲಯವಿದ್ದರೆ ಪುಸ್ತಕಗಳು ಸ್ನೇಹಿತರಿದ್ದಂತೆ

KannadaprabhaNewsNetwork |  
Published : Mar 04, 2026, 02:00 AM IST
ಕಾಮಣ್ಣನ ದರ್ಶನಕ್ಕೆ ಸರತಿ ಸಾಲಿನಲ್ಲಿ ಭಕ್ತರು ನಿಂತಿರುವುದು. | Kannada Prabha

ಸಾರಾಂಶ

ಮಾಗಡಿ: ಮನೆಯಲ್ಲಿ ಗ್ರಂಥಾಲಯ ಮಾಡಿಕೊಂಡರೆ ಮನಸ್ಸಿಗೆ ಬೇಸರವಾದಾಗ ಪುಸ್ತಕಗಳು ನಿಮಗೆ ಸ್ನೇಹಿತರಾಗಿ ಸ್ಪೂರ್ತಿ ನೀಡುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು

ಮಾಗಡಿ: ಮನೆಯಲ್ಲಿ ಗ್ರಂಥಾಲಯ ಮಾಡಿಕೊಂಡರೆ ಮನಸ್ಸಿಗೆ ಬೇಸರವಾದಾಗ ಪುಸ್ತಕಗಳು ನಿಮಗೆ ಸ್ನೇಹಿತರಾಗಿ ಸ್ಪೂರ್ತಿ ನೀಡುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು.

ಪಟ್ಟಣದ ಮಂಜುನಾಥ ಬಡಾವಣೆಯ ಕಸಾಪ ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾಶಿವಣ್ಣ ಅವರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕ್ರತ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮನೆ ನಿರ್ಮಿಸುತ್ತೇವೆ. ಲಕ್ಷಾಂತರ ಬೆಲೆಬಾಳುವ ಪೀಠೋಪಕರಣ ಮಾಡಿಸುತ್ತೇವೆ. ಆದರೆ ಮನೆಯಲ್ಲೊಂದು ಗ್ರಂಥಾಲಯಕ್ಕೆ ಸ್ಥಳ ಮೀಸಲಿಡಬೇಕೆಂಬುದು ಅರಿವಿಗೆ ಬರುವುದೇ ಇಲ್ಲ. ಮನೆಯಲ್ಲಿ ಹಿರಿಯರು ಪುಸ್ತಕಗಳು ಓದುತ್ತಿದ್ದರೆ ಮಕ್ಕಳಲ್ಲೂ ಓದುವ ಅಭಿರುಚಿ ಹುಟ್ಟುತ್ತದೆ. ಪುಸ್ತಕಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಮನುಷ್ಯನಿಗೆ ಕೋಟಿಗಟ್ಟಲೆ ಹಣವಿದ್ದರೂ ಖಿನ್ನತೆಗೆ ಒಳಗಾದರೆ ಸಾವಿನ ಬಲೆಗೆ ಸಿಲುಕುತ್ತಾರೆ. ಆದರೆ ಪುಸ್ತಕ ಓದುವವರಿಗೆ ಖಿನ್ನತೆ ಕಾಡುವುದಿಲ್ಲ. ಒಳ್ಳೆಯ ಪುಸ್ತಕಗಳು ಓದುವುದರಿಂದ ಖಿನ್ನತೆಯಿಂದ ಹೊರಬಂದು ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಅದಕ್ಕೆ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಲಕ್ಷ ಮನೆ ತಲುಪುವ ಕೆಲಸ ಕನ್ನಡ ಪುಸ್ತಕ ಪ್ರಾಧಿಕಾರ ಮಾಡುತ್ತಿದೆ. ಪ್ರಾಧಿಕಾರದ ಕಚೇರಿಯಿಂದ ಮನೆ ಬಾಗಿಲಿಗೆ ಬರುವ ಕೆಲಸವನ್ನು ಪುಸ್ತಕ ಪ್ರಾಧಿಕಾರ ಮಾಡುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಡಾ.ಎಚ್.ಎಲ್.ಪುಷ್ಪ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಮನೆಯಲ್ಲೇ ಗ್ರಂಥಾಲಯ ಸ್ಥಾಪನೆ ಯೋಜನೆ ತುಂಬಾ ಅರ್ಥಪೂರ್ಣವಾದುದು. ಇದರಿಂದ ಪ್ರತಿಯೊಬ್ಬರಲ್ಲೂ ಓದುವ ಅಭಿರುಚಿಯನ್ನು ಬೆಳೆಸುತ್ತದೆ. ಮನೆಯ ಸದಸ್ಯರು ಬಿಡಿವಿನ ವೇಳೆ ಪುಸ್ತಕವನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಪುಸ್ತಕ ಓದುವುದು ಸಾಹಿತಿಗಳು, ಲೇಖಕರು, ನಗರ ಪ್ರದೇಶದವರು ಎಂಬ ಕಲ್ಪನೆ ಹೋಗಲಾಡಿಸಿ, ಗ್ರಾಮೀಣ ಭಾಗಕ್ಕೂ ಓದುವ ಉದ್ದೇಶ ತಲುಪಿಸಬೇಕು, ನಾವು ಉತ್ತಮ ಪುಸ್ತಕಗಳನ್ನ ಉಡುಗೊರೆಯಾಗಿ ಕೊಟ್ಟು ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಬೆಳಸಬೇಕು ಎಂದು ತಿಳಿಸಿದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿ, ಪುಸ್ತಕಗಳು ಓದುವುದರಿಂದ ಜ್ಞಾನ ವೃದ್ಧಿಸುತ್ತದೆ. ನನ್ನ ರಾಜಕೀಯ ಭಾಷಣಗಳಿಗೆ ಉತ್ತಮ ಲೇಖಕರ ತುಣುಕುಗಳು ಸಹಕಾರಿಯಾಗಿದೆ. ನಮ್ಮ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನಕ್ಕೆ ಕನ್ನಡ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿದ್ದಕ್ಕೆ ಖುಷಿಯಾಗುತ್ತಿದೆ. ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಜಾಗೃತಿ ಸಮಿತಿ ಅಧ್ಯಕ್ಷರಾದ ಕವಿತಾರಾವ್ ಮಾತನಾಡಿ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್.ಅಂಬೇಡ್ಕರ್ ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳಲು ಅವರ ಜೊತೆ ಪ್ರತಿನಿತ್ಯ ಒಂದು ಪುಸ್ತಕವಾದರೂ ಇರುತ್ತಿತ್ತು. 32 ಪದವಿಗಳು, ಪಿಎಚ್‌ಟಿ ಪಡೆದಿರುವ ಡಾ. ಬಿ.ಆರ್.ಅಂಬೇಡ್ಕರ್‌ ಎಷ್ಟು ಪುಸ್ತಕಗಳನ್ನು ಓದಿರಬೇಕು. ಅವರು 50 ಸಾವಿರ ಪುಸ್ತಕ ಸಂಗ್ರಹಿಸಿದ್ದರು. ಅವರು ಅಷ್ಟು ಪುಸ್ತಕ ಓದಿದ ಪರಿಣಾಮ ದೇಶಕ್ಕೆ ಶ್ರೇ಼ಷ್ಠ ಸಂವಿಧಾನ ರಚಿಸಲು ಸಾಧ್ಯವಾಯಿತು. ಜ್ಞಾನವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ವಾಯುಸೇನೆ ಅಧಿಕಾರಿ ಶಿವಲಿಂಗಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಆಪ್ತ ಸಹಾಯಕ ಶ್ರೀನಿವಾಸ ಕರಿಯಪ್ಪ, ಜಾಗೃತ ಸಮಿತಿ ಸದಸ್ಯ ಎಸ್.ರುದ್ರೇಶ್ವರ, ಮುಖಂಡರಾದ ಡಿ.ಸಿ.ಶಿವಣ್ಣ, ಬಸವರಾಜು, ಶಿಕ್ಷಕ ವಿದ್ಯಾಸಾಗರ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನ ಮಾನವನ ಏಳಿಗೆಯ ರಹದಾರಿ: ಎಸ್‌ಪಿ ಶೇಖರ್
ಎಸ್‌ಸಿ, ಎಸ್‌ಟಿಗೆ ವರ್ಗಕ್ಕೆ ಸರ್ಕಾರ ಘೋರ ಅನ್ಯಾಯ