ಗಂಗೇನಹಳ್ಳಿ ಸರ್ಕಾರಿ ಜಾಗದ ಡಿನೋಟಿಫಿಕೇಷನ್‌ : ಸಿಎಂ ಸಿದ್ದರಾಮಯ್ಯ Vs ಎಚ್‌ಡಿಕೆ ಭೂ ಸಮರ!

KannadaprabhaNewsNetwork | Updated : Sep 21 2024, 07:42 AM IST

ಸಾರಾಂಶ

ಬೆಂಗಳೂರಿನ ಗಂಗೇನಹಳ್ಳಿ ಸರ್ಕಾರಿ ಜಾಗದ ಡಿನೋಟಿಫಿಕೇಷನ್‌ಗೆ ಸಂಬಂಧಿಸಿ ತಮ್ಮ ವಿರುದ್ಧ ಕೃಷ್ಣ ಬೈರೇಗೌಡ ಮತ್ತಿತರ ಸಚಿವರು ಮಾಡಿರುವ ಆರೋಪವನ್ನು ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ನಿರಾಕರಿಸಿದ್ದಾರೆ.

 ಮೈಸೂರು/ಮಂಡ್ಯ :  ಬೆಂಗಳೂರಿನ ಗಂಗೇನಹಳ್ಳಿ ಸರ್ಕಾರಿ ಜಾಗದ ಡಿನೋಟಿಫಿಕೇಷನ್‌ಗೆ ಸಂಬಂಧಿಸಿ ತಮ್ಮ ವಿರುದ್ಧ ಕೃಷ್ಣ ಬೈರೇಗೌಡ ಮತ್ತಿತರ ಸಚಿವರು ಮಾಡಿರುವ ಆರೋಪವನ್ನು ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ನಿರಾಕರಿಸಿದ್ದಾರೆ. ನನಗೂ ಆ ಡಿನೋಟಿಫಿಕೇಷನ್‌ಗೂ ಯಾವುದೇ ಸಂಬಂಧವಿಲ್ಲ. ಡಿನೋಟಿಫಿಕೇಷನ್‌ ನಾನು ಮಾಡಿಸಿದ್ದೇನಾ ಎಂದು ಪ್ರಶ್ನಿಸಿದ ಅವರು, ಆ ಜಮೀನು ತೆಗೆದುಕೊಂಡಿರುವುದು ನನ್ನ ಅತ್ತೆ ಎಂಬುದು ನಿಜ. ಆದರೆ ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೀತಿ ಹೇಳುವುದಿಲ್ಲ ಎಂದು ತಿರುಗೇಟು ನೀಡಿದರು.

ಮಂಡ್ಯ ಮತ್ತು ಮೈಸೂರಲ್ಲಿ ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ಡಿನೋಟಿಫಿಕೇಷನ್ ವಿಚಾರವಾಗಿ ತಮ್ಮ ರಾಜೀನಾಮೆಗೆ ಕಾಂಗ್ರೆಸ್ ಸಚಿವರು ಒತ್ತಾಯಿಸುತ್ತಿರುವ ಕುರಿತು ತೀವ್ರ ಹರಿಹಾಯ್ದರು. ರಾಜೀನಾಮೆ ಕೇಳುವವರಿಗೆ ಕನ್ನಡ, ಇಂಗ್ಲಿಷ್‌ ಓದಲು ಬರುತ್ತೋ ಇಲ್ವೋ ಒಮ್ಮೆ ಕೇಳಿನೋಡಿ. ಅವರು ಪ್ರದರ್ಶಿಸಿದ ದಾಖಲೆಗಳಲ್ಲಿ ಏನಿದೆ ಎಂಬುದನ್ನು ಸರಿಯಾಗಿ ಕೂತು ಓದಲು ಹೇಳಿ. ನನ್ನ ರಾಜೀನಾಮೆ ಕೇಳಲು ಅವರೇನು ಹುಚ್ಚರಾ? ಅಥವಾ ಅವರು ಕೇಳಿದರು ಅಂತ ನಾನು ರಾಜೀನಾಮೆ ಕೊಡಬೇಕಾ? ತಪ್ಪೇ ಮಾಡದ ಮೇಲೆ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದರು.

ಕೃಷ್ಣ ಬೈರೇಗೌಡ ವಿರುದ್ಧ ಗರಂ: ‘ಮಿಸ್ಟರ್ ಕೃಷ್ಣ ಭೈರೇಗೌಡ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡಬೇಡಿ. ನೀನೇನು ಸತ್ಯ ಹರಿಶ್ಚಂದ್ರನಾ? ಕಂದಾಯ ಇಲಾಖೆಯಲ್ಲಿ ಏನೇನು ಮಾಡಿದ್ಯಾ ಗೊತ್ತಿದೆ’ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ನೀವು ಏನೇ ಮಾಡಿದರೂ ನನ್ನ ವಿರುದ್ಧ ಏನೂ ಸಿಗುವುದಿಲ್ಲ. ಕೃಷ್ಣ ಬೈರೇಗೌಡ ವಿದೇಶದಲ್ಲಿ ಓದಿದ್ದವರು, ಬಹಳ ಮೇಧಾವಿ ಎಂದು ಅಂದುಕೊಂಡಿದ್ದೆ. ಆದರೆ ಕೃಷ್ಣ ಬೈರೇಗೌಡ ಹೆಬ್ಬೆಟ್ಟು ಎಂದು ಅಂದುಕೊಂಡಿರಲಿಲ್ಲ. ಯಾವನೋ ಏನೋ ಬರೆದು ಕೊಟ್ಟ, ಅದನ್ನು ಇವರು ತಂದು ಓದಿದ್ದಾರೆ ಎಂದು ಕಿಡಿಕಾರಿದರು.

ಗೋಗರೆಯುವ ಕೆಲಸ ಮಾಡಿಲ್ಲ: ನಾನು ಎಲ್ಲೂ ಕದ್ದು ಓಡಿ ಹೋಗಲ್ಲ. ನನ್ನ ರಕ್ಷಣೆ ಮಾಡಿ ಎಂದು ಯಾರ ಮುಂದೆಯೂ ಗೋಗರೆಯುವುದಿಲ್ಲ. ಗೋಗರೆಯುವ ಕೆಲಸವನ್ನು ನಾನು ಮಾಡಿಲ್ಲ. ಡಿನೋಟಿಫಿಕೇಷನ್ ಆಗಿದೆ. ಆದರೆ ಅದನ್ನು ನಾನು ಮಾಡಿದ್ದೇನಾ ಎಂದು ಪ್ರಶ್ನಿಸಿದ ಅವರು, ನನ್ನ ಉಳಿಸಿ ಎಂದು ಕೈಕಟ್ಟುವ ಸ್ಥಿತಿ ಬಂದರೆ ನಾನು 5 ಸೆಕೆಂಡ್‌ ಕೂಡ ರಾಜಕಾರಣದಲ್ಲಿ ಇರುವುದಿಲ್ಲ. 2015 ರಲ್ಲೇ ಈ ಸಂಬಂಧ ಕೇಸ್ ಆಗಿತ್ತು. ನಂತರ ತನಿಖೆ ಮಾಡಿ ಬಿ ರಿಪೋರ್ಟ್ ಸಹ ಹಾಕಿದ್ದಾರೆ. ಈಗ ಅದಕ್ಕೆ ಜೀವ ಕೊಡಲು ಪ್ರಯತ್ನಿಸುತ್ತಿದ್ದಾರೆ. ಮುಡಾ ಹಗರಣವನ್ನು ಮುಚ್ಚಿ ಹಾಕಲು ಆ ಪ್ರಕರಣವನ್ನು ಥಳುಕು ಹಾಕುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ನಾನೇ ಫೈಲ್‌ ರಿಜೆಕ್ಟ್ ಮಾಡಿದ್ದೆ: ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ. ನಾನೇ ಆ ಕುರಿತ ಫೈಲ್ ಅನ್ನು ನನ್ನ ಅವಧಿಯಲ್ಲಿ ತಿರಸ್ಕರಿಸಿದ್ದೇನೆ. ನನಗೂ ಯಡಿಯೂರಪ್ಪನವರಿಗೂ ರಾಜಕೀಯ ಸಂಘರ್ಷ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿದ್ದಾಗ ಅವರೇಕೆ ನನಗೆ ಈ ವಿಚಾರದಲ್ಲಿ ಸಹಾಯ ಮಾಡುತ್ತಾರೆ? ಕಳೆದ ಮೂರು ತಿಂಗಳಿನಿಂದಲೂ ಈ ಸರ್ಕಾರ ನನ್ನ ವಿರುದ್ಧ ದಾಖಲೆ ಹುಡುಕಿಸುತ್ತಿದೆ. ಯಾವುದೂ ಸಿಗದ ಕಾರಣ ಹಳೇ ‌ಕೇಸ್ ಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ‌ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ಸಚಿವರು ನಮ್ಮ ವಿರುದ್ಧ ಮಾಡಿರುವ ಪತ್ರಿಕಾಗೋಷ್ಠಿ ಕಾಂಗ್ರೆಸ್‌ನ ಟೂಲ್ ಕಿಟ್. ಯಾರೋ ಅವರಿಗೆ ಸರಿಯಾಗಿ ಸ್ಕ್ರೀಪ್ಟ್ ಕೂಡ ಬರೆದುಕೊಟ್ಟಿಲ್ಲ. ಅದರಲ್ಲೇ ಅವರು ಸಿಕ್ಕಿ ಬೀಳುತ್ತಾರೆ ಎಂದರು.

ಜತೆಗೆ ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಪಡೆದು ಜಮೀನು ಹೊಡೆದಿದ್ದು ಯಾರು? ಡಿ.ಕೆ.ಶಿವಕುಮಾರ್‌ಗೆ ಅಂಥದ್ದೆಲ್ಲ ಗೊತ್ತಿದೆ. ಬೆನಗಾನಹಳ್ಳಿ ಜಮೀನು ವಿಚಾರದಲ್ಲಿ ಏನೇನಾಗಿದೆ ಎಂಬುದು ಡಿ.ಕೆ.ಸುರೇಶ್‌ಗೆ ಮರೆತು ಹೋಯಿತಾ? ನನಗೆ ಅಂತಹ ಯಾವ ವ್ಯವಹಾರಗಳು ಗೊತ್ತಿಲ್ಲ ಎಂದು ಅವರು ಡಿ.ಕೆ.ಸೋದರರಿಗೆ ಕುಟುಕಿದರು.

Share this article