ಇದು ಮಹಾನಾಯಕನ ಕೈವಾಡ: ಎಚ್‌ಡಿಕೆ ಕಿಡಿ

KannadaprabhaNewsNetwork | Published : May 1, 2024 2:02 AM

ಸಾರಾಂಶ

ನಮ್ಮ ಬಳಿಯೂ ಪೆನ್‌ಡ್ರೈವ್‌ಗಳಿವೆ. ಹಾಗಂತ ಅವು ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್‌ಗಳಲ್ಲ, ಬದಲಾಗಿ ಭ್ರಷ್ಟಾಚಾರದ ವಿಡಿಯೋಗಳಿರುವ ಪೆನ್‌ ಡ್ರೈವ್‌. ಅದನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಹಂಚಿಕೆ ಹಿಂದೆ ಮಹಾನ್‌ ನಾಯಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಕಾಂಗ್ರೆಸ್‌ ಸರ್ಕಾರದ ನೇರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪೆನ್‌ಡ್ರೈವ್‌ ಹಂಚುವುದು ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಎಂದು ಕಿಡಿಕಾರಿರುವ ಅವರು, ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ಎಸ್‌ಐಟಿ ಸಮಗ್ರವಾಗಿ ತನಿಖೆ ನಡೆಸಬೇಕು. ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಮನಸ್ಥಿತಿ ರೀತಿಯಲ್ಲೇ ಪೈನ್‌ಡ್ರೈವ್‌ ಹಂಚಿಕೆ ಮನಸ್ಥಿತಿ ಕುರಿತೂ ತನಿಖೆಯಾಗಲಿ. ನಮ್ಮ ಐದೂ ಬೆರಳು ಸಮನಾಗಿರುವುದಿಲ್ಲ. ವಿಕೃತ ಮನಸ್ಸಿನವರೂ ಭೂಮಿ ಮೇಲಿದ್ದಾರೆ. ವಿಡಿಯೋ ಅಸಲಿಯೋ, ನಕಲಿಯೋ ಗೊತ್ತಿಲ್ಲ. ನೀವು ಪ್ರಜ್ವಲ್‌ ಎಂದು ಹೇಳಿದ್ದೀರಿ. ಆ ವಿಡಿಯೋ ಹಂಚಿಕೆ ಮಾಡಿದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಂದು ವಕೀಲ ದೇವರಾಜೇಗೌಡ ತಿಳಿಸಿದ್ದಾರೆ. ಹೀಗಾಗಿ ಎಲ್ಲವೂ ತನಿಖೆಯಾಗಲಿ. ಆ ವಿಡಿಯೋ ಮಾಡಿದ್ದು ಯಾರು? ಹಂಚಿಕೆ ಮಾಡಿದ್ದು ಯಾರು? ಎಂಬುದೂ ಬಹಿರಂಗಗೊಳ್ಳಲಿ ಎಂದರು.

ಡಿ.ಕೆ.ಶಿವಕುಮಾರ್‌ ಹೆಸರು ಕೇಳಿ ಬಂದಿರುವುದರಿಂದ ಸರ್ಕಾರಕ್ಕೆ ಮಾನ ಮಾರ್ಯದೆಯಿದ್ದರೆ ತಕ್ಷಣವೇ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡಲಿ ಎಂದೂ ಕುಮಾರಸ್ವಾಮಿ ಆಗ್ರಹಿಸಿದರು.

ಡಿಕೆಶಿ ವಿಕೃತಿ ಮನಸು:

ಪ್ರಜ್ವಲ್‌ಗೆ ಸಂಬಂಧಿಸಿದ್ದೆನ್ನಲಾದ ಲಕ್ಷಾಂತರ ಪೆನ್‌ಡ್ರೈವ್‌ಗಳನ್ನು ಹಂಚಿದ್ದಾರೆ. ಕನಿಷ್ಠ ಪಕ್ಷ ಆ ವಿಡಿಯೋದಲ್ಲಿರುವ ಹೆಣ್ಣುಮಕ್ಕಳ ಮುಖವನ್ನಾದರೂ ಮರೆಮಾಚಬಹುದಿತ್ತು. ವಿಡಿಯೋದಲ್ಲಿರುವ ಮಹಿಳೆಯರ ಖಾಸಗಿತನ ಪ್ರದರ್ಶಿಸಿದ್ದು ಸರಿಯೇ? ಇದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಎಂಬ ಅರಿವಿಲ್ಲವೇ? ಆ ಮಹಿಳೆಯ ಕುಟುಂಬಗಳ ಸ್ಥಿತಿ ಏನಾಗಬಹುದು ಎಂದು ಯೋಚಿಸಿದ್ದೀರಾ? ಅವರ ಜೀವನಕ್ಕೆ ಹೆಚ್ಚು ಕಮ್ಮಿಯಾದರೆ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.

ಹೆಣ್ಣುಮಕ್ಕಳ ಬಗ್ಗೆ ಮಹಾ ನಾಯಕರಿಗೆ ಎಷ್ಟೊಂದು ಗೌರವವಿದೆ ಎಂಬುದು ಚೆನ್ನಾಗಿ ಗೊತ್ತು. ಹಿಂದೆ ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ತಾಯಿ, ಮಗಳು, ಹೆಂಡ್ತಿ ಯೌವ್ವನದಲ್ಲಿದ್ದಾಗ ಒಂದು ಕಣ್ಣಿಟ್ಟಿರಬೇಕು ಎಂದು ಹೇಳಿದ ವ್ಯಕ್ತಿ ಇವರು. ಅಂಥ ನೀಚ ಹಾಗೂ ವಿಕೃತ ಮನಸ್ಸಿನವರು ಡಿ.ಕೆ.ಶಿವಕುಮಾರ್‌. ಇವರಿಂದ ಹೆಣ್ಮಕ್ಕಳಿಗೆ ಗೌರವ ಕೊಡುವುದನ್ನು ನಾವು ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ನ 6ನೇ ಗ್ಯಾರಂಟಿ?:

ಅಶ್ಲೀಲ ವಿಡಿಯೋಗಳನ್ನು ಹರಿಬಿಡುವುದು ಸರ್ಕಾರದ 6ನೇ ಗ್ಯಾರಂಟಿ ಎಂದು ಕಿಡಿಕಾರಿದ ಕುಮಾರಸ್ವಾಮಿ, ಈ ಪ್ರಕರಣದ ಹೊಸ ಅಧ್ಯಾಯ ಆರಂಭವಾಗಿದ್ದು, ಉಪಮುಖ್ಯಮಂತ್ರಿ ಹೊಸ ಅಪಾಯವನ್ನು ತಂದುಕೊಳ್ಳುವಂತೆ ಮಾಡಿದ್ದಾರೆ. 2 ಸಾವಿರ ಪೆನ್‌ಡ್ರೈವ್‌ ಯಾವ ಫ್ಯಾಕ್ಟರಿಯಲ್ಲಿ ರೆಡಿ ಮಾಡಿದ್ದೀರಿ? 2 ಸಾವಿರ ಮಹಿಳೆಯರ ಕುಟುಂಬಗಳ ಕಥೆ ಏನು? ಎಂದರು.

ನಮ್ಮ ಮನೆ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್‌ ಕುಮ್ಮಕ್ಕು ಕೊಡುತ್ತಿದ್ದಾರೆ. ನಾನೂ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರೆ ನಿಮ್ಮನ್ನು ಬೀದಿಯಲ್ಲಿ ಓಡಾಡಲು ಬಿಡುವುದಿಲ್ಲ. ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದರು.

ಚುನಾವಣೆ ಗೆಲ್ಲಲು ಹುನ್ನಾರ:

ಅಶ್ಲೀಲ ವಿಡಿಯೋ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಗೆಲ್ಲಲು ಹುನ್ನಾರ ನಡೆಸಿದೆ. ಮೊದಲ ಹಂತದ ಮತದಾನದ ಕೆಲ ದಿನಗಳ ಮುನ್ನ ಪೆನ್‌ಡ್ರೈವ್ ಹಂಚಿಕೆ ಫಲ ಕೊಡಲಿಲ್ಲ. 14 ಸೀಟುಗಳೂ ಮೈತ್ರಿಕೂಟಕ್ಕೆ ಬರಲಿವೆ ಎಂಬುದು ಗೊತ್ತಾಗಿದೆ. ಹೀಗಾಗಿ ಎರಡನೇ ಹಂತದ ಚುನಾವಣೆಯಲ್ಲಾದರೂ 4-5 ಸೀಟು ಗೆಲ್ಲಲು ಪ್ರಕರಣವನ್ನು ದೊಡ್ಡದಾಗಿ ಬಿಂಬಿಸುತ್ತಿದೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗಲ್ಲ ಎಂದರು.

ಈ ಪೆನ್‌ಡ್ರೈವ್‌ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಮೊದಲೇ ಗೊತ್ತಿತ್ತು. ಅದಕ್ಕಾಗಿಯೇ ಕುಮಾರಸ್ವಾಮಿ ಮಂಡ್ಯದಲ್ಲಿ ಗೆಲ್ಲುವುದಿಲ್ಲ, ಜೆಡಿಎಸ್‌ ಮೂರು ಕಡೆಯೂ ಸೋಲುತ್ತದೆ ಎಂದು ಕನಿಷ್ಠ 10 ಬಾರಿ ಹೇಳಿದ್ದಾರೆ. ಪೆನ್‌ಡ್ರೈವ್‌ ಮುಂದಿಟ್ಟುಕೊಂಡು ಅಪಪ್ರಚಾರ ನಡೆಸಿ ಸೋಲಿಸಲು ಅವರೆಲ್ಲ ಸಂಚು ರೂಪಿಸದ್ದರು ಎಂದು ಆಕ್ರೋಶ ಹೊರಹಾಕಿದರು.

ಪ್ರಜ್ವಲ್ ಪ್ರಕರಣಕ್ಕೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಕುಟುಂಬಗಳಿಗೆ ಸಂಬಂಧವಿಲ್ಲದಿದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಲು ಪ್ರಯತ್ತಿಸುತ್ತಿದ್ದಾರೆ. ಇಂಥ ನೀಚ ರಾಜಕಾರಣಕ್ಕೆ ನಾವೆಲ್ಲ ಹೆದರುವುದಿಲ್ಲ. ಧೈರ್ಯದಿಂದ ಎದುರಿಸುತ್ತೇವೆ ಎಂದು ಹೇಳಿದರು.

ವಿಡಿಯೋದಲ್ಲಿರುವ ಮಹಿಳೆಯರನ್ನು ಬಲವಂತವಾಗಿ ಬಳಸಿಕೊಂಡಿದ್ದರೆ, ಅತ್ಯಾಚಾರ ಮಾಡಿದ್ದರೆ, ಬೆದರಿಸಿ ಬಳಸಿಕೊಂಡಿದ್ದರೆ ಅಂಥ ಮಹಿಳೆಯರ ಜೊತೆ ನಾವಿದ್ದೇವೆ. ಸಂತ್ರಸ್ತ ಮಹಿಳೆಯರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

Share this article