ಜಿಲ್ಲೆಯ ದೇವಸ್ಥಾನಗಳ ಉದ್ಘಾಟನೆಗೆ ಆಗಮಿಸುತ್ತಿರುವ ಕುಮಾರಸ್ವಾಮಿ । ಲೋಕಸಭೆ ಚುನಾವಣೆಗೆ ಜನರ ಭಾವನೆ ಅರಿಯಲು ಈ ತಂತ್ರ?
ಕನ್ನಡಪ್ರಭ ವಾರ್ತೆ ಹಾಸನಜಿಲ್ಲೆಯಲ್ಲಿ ದೇವಾಲಯಗಳ ಉದ್ಘಾಟನೆ ಎಂದರೆ ಎಚ್.ಡಿ. ದೇವೇಗೌಡ ಇರುತ್ತಿದ್ದರು ಇಲ್ಲವೇ ಎಚ್.ಡಿ. ರೇವಣ್ಣ ಹಾಗೂ ಅವರ ಕುಟುಂಬ ಇರುತ್ತಿತ್ತು. ಆದರೆ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ದೇವಾಲಯಗಳ ಉದ್ಘಾಟನೆಗಾಗಿ ವಾರ ವಾರ ಆಗಮಿಸುತ್ತಿರುವುದು ಕುತೂಹಲ ಮೂಡಿಸಿದೆ.ಕಳೆದ ವಾರ ಹಾಸನ ತಾಲೂಕಿನ ಚನ್ನಂಗಿಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆಗೆ ಕುಮಾರಸ್ವಾಮಿ ಆಗಮಿಸಿದ್ದರು. ಈ ವಾರ ಹಾಸನ ತಾಲೂಕು ಕಟ್ಟಾಯ ಹೋಬಳಿಯ ಮಾರನಾಯಕನಹಳ್ಳಿಯ ವೀರಾಂಜನೇಯಸ್ವಾಮಿ ದೇಗುಲ ಪುನರ್ ಪ್ರತಿಷ್ಠಾಪನೆ, ಅರಕಲಗೂಡು ತಾಲೂಕಿನ ಬಸವನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ, ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಮೇಳನಹಳ್ಳಿ ಗೊಲ್ಲರಹಟ್ಟಿ ದೇವಾಲಯ, ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿನ ದೇವಾಲಯಗಳ ಉದ್ಘಾಟನೆಗೆ ಕುಮಾರಸ್ವಾಮಿ ಭಾನುವಾರ ಆಗಮಿಸಿದ್ದಾರೆ.ಕುತೂಹಲ ಮೂಡಿಸಿದ ಎಚ್ಡಿಕೆ ನಡೆಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರದಲ್ಲಿ ಜಿಲ್ಲೆಯೊಳಗಿನ ರಾಜಕೀಯ ಲೆಕ್ಕಾಚಾರಗಳೇ ತಲೆಕೆಳಗಾಗಿವೆ. ಪ್ರಧಾನಿ ಮೋದಿ ಅವರನ್ನು ಸದಾ ತೆಗಳುತ್ತಿದ್ದ ದೇವೇಗೌಡರು ಹಾಗೂ ಕುಮಾರಸ್ವಾಮಿ ಇದೀಗ ಅದೇ ಮೋದಿ ಅವರನ್ನು ಹಾಡಿ ಹೊಗಳುವುದನ್ನು ನೋಡಿದ ಕಾಂಗ್ರೆಸ್ ನಾಯಕರು ದಿಗ್ಭ್ರಾಂತರಾಗಿದ್ದಾರೆ. ಅಪ್ಪ ಮಕ್ಕಳ ಲೆಕ್ಕಾಚಾರ ಏನು ಎನ್ನುವುದನ್ನು ಅರಿಯಲಾಗದೆ ಗೊಂದಲಕ್ಕೀಡಾಗುತ್ತಿದ್ದಾರೆ. ಈಗ ಜಿಲ್ಲೆಯ ದೇವಾಲಯಗಳ ಉದ್ಘಾಟನೆಗೆ ಪ್ರತಿ ವಾರ ಕುಮಾರಸ್ವಾಮಿ ಬರುತ್ತಿರುವುದನ್ನು ನೋಡಿದರೆ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಒಲವು ಯಾವ ಕಡೆ ಇದೆ ಎನ್ನುವುದನ್ನು ಅರಿಯಲಿಕ್ಕಾಗಿ ಆಗಮಿಸುತ್ತಿರಬಹುದು ಎನ್ನುವ ವದಂತಿ ಹರಡಿದೆ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ಅಭ್ಯರ್ಥಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ ಜಿಲ್ಲೆಯ ಬಿಜೆಪಿ ನಾಯಕ ಪ್ರೀತಂ ಗೌಡ ಹಾಗೂ ಅವರ ಬೆಂಬಲಿಗರು ಪ್ರಜ್ವಲ್ ಮೈತ್ರಿ ಒಕ್ಕೂಟದ ಒಮ್ಮತದ ಅಭ್ಯರ್ಥಿ ಅಲ್ಲ. ಅವರು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರು ಬಿಜೆಪಿ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ. ಅವರು ತಮ್ಮನ್ನು ಬೆಂಬಲಿಸುತ್ತಾರೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲೇ ಕೆಲ ಬಿಜೆಪಿ ನಾಯಕರು ತಾವು ಪ್ರಜ್ವಲ್ ಅವರನ್ನು ಬೆಂಬಲಿಸುವುದಿಲ್ಲ. ಅವರನ್ನು ಬೆಂಬಲಿಸಿ ಎಂದು ತಮಗೆ ಪಕ್ಷದಿಂದ ಯಾವ ನಿರ್ದೇಶನವೂ ಬಂದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಪ್ರಜ್ವಲ್‌ಗೆ ಮುಖಭಂಗ ಉಂಟು ಮಾಡಿದ್ದರು.ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಸಹ ಹಾಸನ, ಮೈಸೂರು, ಮಂಡ್ಯ ಕ್ಷೇತ್ರಗಳು ಬಿಜೆಪಿಗೆ ಸಿಗಲಿವೆ ಎನ್ನುವ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದ್ದರು. ಹಾಗೆಯೇ ಪ್ರಜ್ವಲ್ ಮುಂದಿನ ಅಭ್ಯರ್ಥಿ ಎಂದು ದೇವೇಗೌಡರು ಹೇಳಿದ ನಂತರದಲ್ಲಿ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರಲ್ಲಿ ಹೊಸ ಉತ್ಸಾಹ ಪುಟಿದೆದ್ದಿದೆ. ಇದನ್ನೆಲ್ಲಾ ಗಮನಿಸಿರುವ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ಜನರ ಅಭಿಪ್ರಾಯ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಗೆ ಪ್ರತಿ ವಾರ ಭೇಟಿ ನೀಡುತ್ತಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ರೇವಣ್ಣ ಗಪ್‌ಚುಪ್:ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಬಾರಿ ಬಂದಿದ್ದಕ್ಕೆ ಅವರ ಸಹೋದರ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಸಣ್ಣಪುಟ್ಟ ದೇವಾಲಯಗಳ ಉದ್ಘಾಟನೆಗೆ ಕುಮಾರಸ್ವಾಮಿ ಬಂದು ಹೋಗುತ್ತಿದ್ದರೂ ರೇವಣ್ಣ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.ರಾಜ್ಯ ದಿವಾಳಿ ಆಗಿಲ್ಲ, ಇನ್ನಷ್ಟು ಗ್ಯಾರಂಟಿ ಕೊಡಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟುಕನ್ನಡಪ್ರಭ ವಾರ್ತೆ ಹಾಸನಬೇಕಾದರೆ ಇನ್ನೂ ಐದು ಗ್ಯಾರಂಟಿ ಕೊಡಲಿ, ರಾಜ್ಯ ಇನ್ನೂ ದಿವಾಳಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಹಾಸನ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದ ಶ್ರೀ ವೀರಾಂಜನೆಯಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.‘ಜೆಡಿಎಸ್ ಬಿಜೆಪಿಯವರಿಗೆ ಬಜೆಟ್ ಬಗ್ಗೆ ಗೊತ್ತಿಲ್ಲ ಎಂಬ ರೀತಿ ಮಾತನಾಡಿದ್ದಾರೆ. ಪ್ರತಿನಿತ್ಯ ಸುಳ್ಳು ಹೇಳಿ ಅದನ್ನೇ ಸತ್ಯ ಎಂಬಂತೆ ಬಿಂಬಿಸುತ್ತಿದ್ದಾರೆ. ಐದರ ಜೊತೆ ಇನ್ನೂ ಐದು ಗ್ಯಾರಂಟಿ ಕಾರ್ಯಕ್ರಮ ಕೊಡಲಿ, ಇನ್ನು ರಾಜ್ಯ ದಿವಾಳಿ ಆಗಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ೪೫ ಸಾವಿರ ಕೋಟಿ ರು. ಸಾಲ ಇರಬಹುದು. ಇಂದು ೬.೬೫ ಲಕ್ಷ ಕೋಟಿ ರು. ಸಾಲ ಆಗಿದೆ’ ಎಂದು ಕುಹಕವಾಡಿದರು.
‘ಗ್ಯಾರಂಟಿಗಳಿಗೆ ೧.೦೫ ಲಕ್ಷ ರು. ಸಾಲ ಮಾಡಿದ್ದೀರಿ. ನೀವು ಮಹಾ ಪ್ರವೀಣರು ಎಂಬುದು ಗೊತ್ತಿದೆ. ನಿಮ್ಮ ಬಜೆಟ್ ನೋಡಿದರೆ ಯಾರೇ ಆದ್ರೂ ನಗುತ್ತಾರೆ. ಬಿಜೆಪಿಯವರು ಏನಿಲ್ಲ ಎಂದಿದ್ದಕ್ಕೆ ನಗುತ್ತಿದ್ದೀರಲ್ಲಾ. ಈ ಸಾಲ ತೀರಿಸೋರು ಯಾರು? ಒಂದು ಲಕ್ಷ ಕೋಟಿ ರು. ಸಾಲ ಮಾಡಿ ೫೨ ಸಾವಿರ ಕೋಟಿ ರು. ಗ್ಯಾರಂಟಿಗೆ ನೀಡುತ್ತಿದ್ದೀರಿ. ಈ ಸಾಲವನ್ನು ಬಡವರ ಮೇಲೆ ಹೇರುತ್ತಾರೆ. ಇದಕ್ಕೆ ಬಡವರ ಬಜೆಟ್ ಎಂದು ಹೇಳುತ್ತಾರಾ?’ ಎಂದು ವ್ಯಂಗ್ಯವಾಡಿದರು.‘ಪ್ರಧಾನಿ ಮೋದಿಯವರು ಐದು ವರ್ಷ ಅಧಿಕಾರ ಮಾಡು ಅಂದ್ರು. ನಾನು ಇವರ ಸಂಬಂಧ ಮಾಡಿದೆ, ನಮ್ಮ ಕತ್ತು ಕುಯ್ದರಲ್ಲಾ’ ಎಂದು ಸಿಡಿಮಿಡಿಗೊಂಡರು.
ಇದೇ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಇದ್ದರು.ಹಾಸನ ತಾಲೂಕಿನ ಮಾರನಾಯಕನಹಳ್ಳಿಯ ವೀರಾಂಜನೇಯಸ್ವಾಮಿ ದೇಗುಲದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.