- ಸಚಿವ ಸ್ಥಾನ ರಾಜೀನಾಮೆಗೆ ಮೊಹಮ್ಮದ್ ಒತ್ತಾಯ - - - ದಾವಣಗೆರೆ: ಹಣ ಕೊಟ್ಟು ಚುನಾವಣೆ ಎದುರಿಸುವಂತೆ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ಅವರಿಗೆ ₹50 ಕೋಟಿ ಹಣಕ್ಕೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಡಿಕೆಯಿಟ್ಟು, ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ಹೆಚ್‌ಡಿಕೆ ಅವರನ್ನು ಬಂಧಿಸಬೇಕು. ಕೂಡಲೇ ಸಚಿವ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಜವಾಹರ್ ಲಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿ ಅವರದು ಎಲುಬಿಲ್ಲದ ನಾಲಗೆ. ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ, ₹150 ಕೋಟಿ ಗಣಿ ಹಗರಣದ ಲಂಚದ ಹಣ ಪಡೆದಿದ್ದಾರೆ. ಲೋಕಾಯುಕ್ತ ವರದಿ ನೀಡಿದ್ದರೂ ಪ್ರಾಮಾಣಿಕ ರಾಜಕಾರಣಿಯಂತೆ ವರ್ತನೆ ಮಾಡುತ್ತಿದ್ದಾರೆ. ಇದು ರಾಜಕಾರಣದ ದುರಂತ. ಚನ್ನಪಟ್ಟಣ ಚುನಾವಣೆಗೆ ಹಣ ನೀಡುವಂತೆ ಉದ್ಯಮಿಗೆ ಬೆದರಿಕೆ ಹಾಕಿರುವ ಕುಮಾರಸ್ವಾಮಿಗೆ ನೈತಿಕತೆ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಇಲ್ಲ ಎಂದು ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿದ್ದರು. ಮೋದಿ ಮುಖ ನೋಡಿ ಮತ ನೀಡಿದರೆ ಭಾರತಕ್ಕೆ ಶ್ರೀಲಂಕಾ ಪರಿಸ್ಥಿತಿ ಬರುತ್ತದೆ ಎಂದಿದ್ದರು. ಲೋಕಸಭೆ ಚುನಾವಣೆ ಬಂದಾಕ್ಷಣ ಮೋದಿ ಎಚ್‌ಡಿಕೆಗೆ ವಿಶ್ವಗುರು ಆಗಿದ್ದೇ ದೊಡ್ಡ ಹಾಸ್ಯಾಸ್ಪದ ವಿಚಾರ. ರಾಜಕಾರಣದಲ್ಲಿ ಬದ್ಧತೆ ಉಳಿಸಿಕೊಳ್ಳದೇ, ಸಿದ್ದರಾಮಯ್ಯರ ಜನಪ್ರಿಯತೆ, ಇಮೇಜ್, ಕಾಂಗ್ರೆಸ್ ಗ್ಯಾರಂಟಿ ಸಹಿಸಲು ಆಗದೇ ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮಾನ, ಮರ್ಯಾದೆ ಇದ್ದರೆ ಹೆಣ್ಣುಮಕ್ಕಳ ಬಾಳು ಹಾಳು ಮಾಡಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಗಂಡು ಮಕ್ಕಳಿಗೆ ಕಾಟ ಕೊಟ್ಟ ಸೂರಜ್ ರೇವಣ್ಣರಿಂದ ಸಂತ್ರಸ್ತರಾದವರ ಬಗ್ಗೆ ಧ್ವನಿ ಎತ್ತುತ್ತಿಲ್ಲವೇಕೆ? ಕುಮಾರಸ್ವಾಮಿ ಅಣ್ಣನ ಮಕ್ಕಳಿಗೆ ಒಂದು ನ್ಯಾಯ ಬೇರೆಯೊಬ್ಬರಿಗೆ ಮತ್ತೊಂದು ನ್ಯಾಯನಾ ಎಂದು ಮೊಹಮ್ಮದ್ ಜಿಕ್ರಿಯಾ ಪ್ರಶ್ನಿಸಿದ್ದಾರೆ.- - -
-8ಕೆಡಿವಿಜಿ46ಃ: ಮೊಹಮ್ಮದ್ ಜಿಕ್ರಿಯಾ