ಮಂಡ್ಯ ಮಂಜುನಾಥ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ದರ್ಜೆಯ ಸ್ಥಾನಮಾನ ದೊರಕಿದೆ. ಜಿಲ್ಲೆಯಿಂದ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವವರ ಪೈಕಿ ಎಚ್.ಡಿ.ಕುಮಾರಸ್ವಾಮಿ ನಾಲ್ಕನೆಯವರಾಗಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಎಸ್.ಎಂ.ಕೃಷ್ಣ, ಸಂಸದರಾಗಿದ್ದ ಅಂಬರೀಶ್ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಕೆ.ರೆಹಮಾನ್‌ಖಾನ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ನಂತರ ಮಂಡ್ಯ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಎಚ್.ಡಿ.ಕುಮಾರಸ್ವಾಮಿ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ.ಮೊದಲ ಬಾರಿ ಕೇಂದ್ರ ಕ್ಯಾಬಿನೇಟ್ ಸಚಿವ:ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಡಳಿತ ನಡೆಸಿರುವ ಎಚ್.ಡಿ.ಕುಮಾರಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರಕುತ್ತಿರುವುದು ಇದೇ ಮೊದಲು. 1996ರಿಂದ 2024ರವರೆಗೆ ಆರು ಬಾರಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಲೋಕಸಭೆಗೆ ಸ್ಪರ್ಧಿಸಿ ಮೂರು ಬಾರಿ ವಿಜೇತರಾಗಿರುವ ಕುಮಾರಸ್ವಾಮಿಗೆ ನಿರೀಕ್ಷೆಯಂತೆಯೇ ಕೇಂದ್ರದಲ್ಲಿ ಸಂಪುಟ ದರ್ಜೆಯ ಸ್ಥಾನ ಲಭಿಸಿದೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗುವ ಮೊದಲೇ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಅವರ ಮಂತ್ರಿ ಮಂಡಲಗಳಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಎಸ್.ಎಂ.ಕೃಷ್ಣ ಮತ್ತೆ 2008ರಲ್ಲಿ ಯುಪಿಎ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನ ಪಡೆದು ವಿದೇಶಾಂಗ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದ್ದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಮಂಡ್ಯ ಜಿಲ್ಲೆ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಜಿಲ್ಲೆಯ ಜನರು ಕೇಂದ್ರದಲ್ಲಿ ಮಂತ್ರಿಯಾಗುವ ಯೋಗವನ್ನೂ ದೊರಕಿಸಿಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಕುಮಾರಸ್ವಾಮಿ, ಕೇಂದ್ರ ಸಂಪುಟದಲ್ಲಿ ಕೃಷಿ ಖಾತೆ ಜವಾಬ್ದಾರಿ ನಿರ್ವಹಿಸುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡ ಕಾರಣದಿಂದಲೇ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿದೆ. ಹಾಗಾಗಿ, ಕುಮಾರಸ್ವಾಮಿಗೆ ಸಂಪುಟದಲ್ಲಿ ಸ್ಥಾನ ಅಲಂಕರಿಸುವ ಅವಕಾಶ ದೊರಕಿದೆ.ದೇವೇಗೌಡರ ಪ್ರಭಾವ:
ಕೃಷಿ ಖಾತೆಯ ಮೇಲೆ ಕುಮಾರಸ್ವಾಮಿ ಅವರು ಕಣ್ಣಿಟ್ಟಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಗಮನ ಸೆಳೆಯುವಂತಹ ಕಾರ್ಯವನ್ನು ಮಾಡುವುದರ ಜೊತೆಗೆ ತಮ್ಮ ರಾಜಕೀಯ ಬದ್ಧ ವೈರಿಯಾಗಿರುವ ಎನ್.ಚಲುವರಾಯಸ್ವಾಮಿ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿರುವುದರಿಂದ ಅವರನ್ನು ಹತೋಟಿಗೆ ತೆಗೆದುಕೊಳ್ಳುವುದು ಇದರ ಹಿಂದಿರುವ ಎಚ್‌ಡಿಕೆ ಅಜೆಂಡಾವಾಗಿದೆ ಎಂದು ಹೇಳಲಾಗುತ್ತಿದೆ.ಕಾವೇರಿ ಸಮಸ್ಯೆಗೆ ಸೂಚಿಸುವರೇ ಪರಿಹಾರ?:
ಮಂಡ್ಯ ಲೋಕಸಭಾ ಚುನಾವಣೆಯ ಗೆಲುವಿನಿಂದ ಕುಮಾರಸ್ವಾಮಿಯವರು ಜಿಲ್ಲೆಯೊಳಗೆ ಕಳೆದುಹೋಗುತ್ತಿದ್ದ ಜೆಡಿಎಸ್‌ಗೆ ಸುಭದ್ರ ನೆಲಗಟ್ಟು ಒದಗಿಸಿದ್ದಾರೆ. ಇದೀಗ ಲೋಕಸಭೆಯಲ್ಲಿ ಕುಮಾರಸ್ವಾಮಿ ಗೆಲುವು ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವಂತೆ ಮಾಡಿದ್ದರೆ, ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ನ ನೂತನ ಅಧಿಪತ್ಯವನ್ನು ಪುತ್ರ ನಿಖಿಲ್ ಹೆಗಲಿಗೆ ವಹಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಜಿಲ್ಲಾ ಕಾಂಗ್ರೆಸ್‌ನೊಳಗೆ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಫಲಿತಾಂಶ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಶಾಸಕರನ್ನು ಬೆಚ್ಚಿ ಬೀಳಿಸಿದೆ. ಇನ್ನೇನು ಜೆಡಿಎಸ್ ಕತೆ ಜಿಲ್ಲೆಯಲ್ಲಿ ಮುಗಿದೇ ಹೋಯಿತು ಎಂದುಕೊಳ್ಳುತ್ತಿರುವಾಗಲೇ ಮಂಡ್ಯದಲ್ಲಿ ಕುಮಾರಸ್ವಾಮಿಯ ಗೆಲುವು, ನಂತರದಲ್ಲಿ ಕೇಂದ್ರದಲ್ಲಿ ಸಿಕ್ಕಿರುವ ಮಂತ್ರಿಸ್ಥಾನ ಇವೆಲ್ಲವೂ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಮುಂದೆ ಕುಮಾರಸ್ವಾಮಿಯನ್ನು ರಾಜಕೀಯವಾಗಿ ಹೇಗೆ ಎದುರಿಸುವುದು, ಒಂದೊಮ್ಮೆ ತೀವ್ರವಾಗಿ ವಿರೋಧಿಸಿದರೆ ಜನರ ಕೆಂಗಣ್ಣಿಗೆ ಗುರಿಯಾಗಬಹುದೇನೋ ಎಂಬ ಭಾವ ಅವರನ್ನು ಕಾಡುತ್ತಿದೆ.