ಕನ್ನಡಪ್ರಭ ವಾರ್ತೆ ಮಂಡ್ಯ
ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಆಯೋಜಿಸಿದ್ದ ಜನತಾ ದರ್ಶನ ದೊಂಬಿಯಾಗಿ ಪರಿವರ್ತನೆಗೊಂಡಿತ್ತು. ಅಹವಾಲು ಸಲ್ಲಿಸಲು ಬಂದಿದ್ದ ಜನಸಾಮಾನ್ಯರಿಗಿಂತಲೂ ಕಾರ್ಯಕರ್ತರ ಹಾವಳಿಯೇ ಹೆಚ್ಚಾಗಿತ್ತು. ವೇದಿಕೆ ತುಂಬಾ ತುಂಬಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ದಳಪತಿಗಳಿಂದ ಸಾಧ್ಯವಾಗಲೇ ಇಲ್ಲ. ಸರ್ಕಾರದ ಆದೇಶದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲರೂ ಜನತಾ ದರ್ಶನ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಪರಿಣಾಮ ಜನತಾ ದರ್ಶನ ನಿರೀಕ್ಷೆಯಂತೆ ಯಶಸ್ಸು ಕಾಣಲಿಲ್ಲ.ನಗರದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 11 ಗಂಟೆ ವೇಳೆಗೆ ಶ್ರೀ ಕಾಳಿಕಾಂಬ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಮಧ್ಯಾಹ್ನ 12.15ಕ್ಕೆ ಜನತಾದರ್ಶನ ನಡೆಯುವ ಸ್ಥಳಕ್ಕೆ ಆಗಮಿಸಿದರು.
ಕುಮಾರಸ್ವಾಮಿ ಹಾಗೂ ಮಾಜಿ ಶಾಸಕರೊಂದಿಗೆ ನೂರಾರು ಮಂದಿ ಮುಖಂಡರು- ಕಾರ್ಯಕರ್ತರು ವೇದಿಕೆ ಏರಿದರು. ಕೇಂದ್ರ ಮಂತ್ರಿಗೆ ಹೂ ಗುಚ್ಛಗಳನ್ನು ಕೊಟ್ಟು ಹೂವಿನ ಹಾರ ಹಾಕಿ ಪೋಟೋ ಸೇಷನ್ ನಡೆಸುವುದಕ್ಕೆ ಮುಂದಾದರು. ಸ್ವಲ್ಪ ಸಮಯ ತಾಳ್ಮೆಯಿಂದಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮುಖಂಡರು-ಕಾರ್ಯಕರ್ತರ ವರ್ತನೆ ಕಂಡು ಸಿಡಿಮಿಡಿಗೊಂಡರು.ನಾನಿಲ್ಲಿ ನಿಮ್ಮಿಂದ ಹಾರ ಹಾಕಿಸಿಕೊಂಡು ಪೋಟೋ ತೆಗೆಸಿಕೊಳ್ಳುವುದಕ್ಕೆ ಬಂದಿಲ್ಲ. ಕೇಂದ್ರದಲ್ಲಿ ಎರಡು ಖಾತೆಗಳನ್ನು ನಿಭಾಯಿಸಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಕೇಂದ್ರ ಮಟ್ಟದ ಅಧಿಕಾರಿಗಳೊಂದಿಗೆ ಎರಡು ಸಭೆ ನಡೆಸಬೇಕಿದ್ದನ್ನು ಬಿಟ್ಟು ಕ್ಷೇತ್ರದ ಜನರ ಅಹವಾಲನ್ನು ಆಲಿಸಲು ಇಲ್ಲಿಗೆ ಬಂದಿದ್ದೇನೆ. ಎಲ್ಲರೂ ವೇದಿಕೆಯಿಂದ ಕೆಳಗಿಳಿದು ಜನಸಾಮಾನ್ಯರು ಅಹವಾಲು ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೋರಿದರೂ ಕಾರ್ಯಕರ್ತರು ವೇದಿಕೆಯಿಂದ ಕೆಳಗಿಳಿಯಲೇ ಇಲ್ಲ.
ಪೊಲೀಸರು ಮುಖಂಡರು-ಕಾರ್ಯಕರ್ತರನ್ನು ನಿಯಂತ್ರಿಸಲಾಗದೇ ಅಸಹಾಯಕರಾದರು. ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ತಮ್ಮ ಆಸನಗಳಲ್ಲಿ ಆಸೀನರಾಗಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಮೈಕ್ ಹಿಡಿದು ಹಲವಾರು ಬಾರಿ ಕಾರ್ಯಕರ್ತರನ್ನು ವೇದಿಕೆ ಬಿಟ್ಟು ಕೆಳಗಿಳಿಯುವಂತೆ ಮನವಿ ಮಾಡುತ್ತಿದ್ದರೂ ಅವರ ಮಾತಿಗೆ ಯಾರೊಬ್ಬರೂ ಕಿವಿಗೊಡಲಿಲ್ಲ. ಪರಿಣಾಮ ಜನತಾದರ್ಶನ ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.ಕೊನೆಗೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಲು ಅಂಗ ವಿಕಲ ಹೆಣ್ಣುಮಗಳನ್ನು ಎತ್ತಿಕೊಂಡು ವೇದಿಕೆಗೆ ಬಂದಿದ್ದನ್ನು ಕಂಡು ಅಂಗವಿಕಲರು ವೇದಿಕೆ ಮೇಲೆ ಬರುವುದು ಬೇಡ. ನಾನೇ ಅವರಿರುವಲ್ಲಿಗೆ ಬಂದು ಮನವಿ ಸ್ವೀಕರಿಸುವುದಾಗಿ ಹೇಳಿ ವೇದಿಕೆ ಕೆಳಗಿಳಿದು ಬಂದರು.
ಅದೇ ವೇಳೆಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೇದಿಕೆ ಮೇಲೇರಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೆಳಗಿಳಿದು ಬಂದು ಅಂಗವಿಕಲರಿಂದ ಅಹವಾಲು ಸ್ವೀಕರಿಸುತ್ತಿದ್ದಂತೆ ಮುಖಂಡರು-ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿಗೆ ಹಾರ ಹಾಕುವುದು, ಪೋಟೋ ತೆಗೆಸಿಕೊಳ್ಳುವುದಕ್ಕೆ ಮುಂದಾದರು. ಮಹಿಳಾ ಕಾರ್ಯಕರ್ತರೂ ತಾವು ಏನೂ ಕಡಿಮೆ ಇಲ್ಲವೆಂದು ವೇದಿಕೆ ಮೇಲೇರಿದ್ದರು. ಕೆಳಗಿದ್ದ ಮಹಿಳಾ ಕಾರ್ಯಕರ್ತರನ್ನು ಜೆಡಿಎಸ್ ಮಹಿಳಾ ಮುಖಂಡರು ವೇದಿಕೆ ಮೇಲೆ ಕರೆಸಿಕೊಂಡು ಫೋಟೋ ತೆಗೆಸಿಕೊಳ್ಳುವುದಕ್ಕೆ ಹೆಚ್ಚಿನ ಉತ್ಸಾಹ ತೋರಿದರು.ಅಂಗವಿಕಲರಿಂದ ಅಹವಾಲು ಸ್ವೀಕರಿಸಿದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ವೇದಿಕೆಗೆ ಮೇಲೇರಿದರು. ಆಗಲೂ ಮುಖಂಡರು - ಕಾರ್ಯಕರ್ತರು ವೇದಿಕೆ ಬಿಟ್ಟು ಅಲುಗಾಡಲೇ ಇಲ್ಲ. ಮೊದಲು ಜನಸಾಮಾನ್ಯರ ಅಹವಾಲನ್ನು ಆಲಿಸುತ್ತೇನೆ. ನಂತರ ನಿಮ್ಮ ಸಮಸ್ಯೆಗಳನ್ನು ಕೇಳುವುದಕ್ಕೆ ಸಮಯ ಕೊಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರೂ ಯಾರೊಬ್ಬರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ರೋಸಿಹೋದ ಕುಮಾರಸ್ವಾಮಿ ವೇದಿಕೆ ಕೊನೆಯಲ್ಲೇ ಕುರ್ಚಿ, ಟೇಬಲ್ ಹಾಕಿಸಿಕೊಂಡು ಜನರಿಂದ ಅಹವಾಲು ಸ್ವೀಕರಿಸಲಾರಂಭಿಸಿದರು.
ಅಧಿಕಾರಿಗಳಿಲ್ಲದಿದ್ದರಿಂದ ಮನವಿ ಸ್ವೀಕರಿಸುವುದಕ್ಕಷ್ಟೇ ಜನತಾ ದರ್ಶನ ಕಾರ್ಯಕ್ರಮ ಸೀಮಿತವಾಯಿತು. ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸುವುದಕ್ಕೆ ಸಾಧ್ಯವಾಗಲಿಲ್ಲ. ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾ ಆರ್ಥಿಕ ಸಂಕಷ್ಟವಿದ್ದವರಿಗೆ ನೆರವಿನ ಭರವಸೆ ನೀಡುತ್ತಿದ್ದುದು ಕಂಡುಬಂದಿತು.