ಕನ್ನಡಪ್ರಭ ವಾರ್ತೆ ಮಂಡ್ಯ
ಸಿದ್ದರಾಮಯ್ಯರಂತಹ ಹಿರಿಯ ನಾಯಕರಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸತ್ಯ ಹೊರಬರಬೇಕು ಎಂದು ಕುಮಾರಸ್ವಾಮಿ ಅವರು ಧ್ವನಿ ಎತ್ತಿದ್ದು ತಪ್ಪೇ?. ರಾಜಕೀಯ ಎದುರಾಳಿಯ ಗೌರವದ ಪರವಾಗಿ ನಿಲ್ಲುವುದೂ ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಪರಸ್ಪರ ಕಠಿಣ ಟೀಕೆಗಳೂ ನಡೆದಿರಬಹುದು. ಆದರೆ, ರಾಜಕೀಯ ಸ್ಪರ್ಧೆಯ ಕಾರಣಕ್ಕೆ ಯಾರ ವಿರುದ್ಧವಾದರೂ ಅನ್ಯಾಯ ನಡೆದರೆ ಮೌನವಾಗಿರಬೇಕೆಂಬ ನಿಯಮವಿಲ್ಲ. ಎದುರಾಳಿಗೂ ನ್ಯಾಯ ಸಿಗಬೇಕು ಎನ್ನುವ ನಿಲುವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.ಇಂದು ಒಬ್ಬ ನಾಯಕನ ಗೌರವದ ಪ್ರಶ್ನೆಯನ್ನು ಕಡೆಗಣಿಸಿದರೆ, ನಾಳೆ ಇದೇ ಪರಿಸ್ಥಿತಿ ಮತ್ತೊಬ್ಬರಿಗೆ ಎದುರಾಗಬಹುದು. ಆದ್ದರಿಂದ ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ನಿಷ್ಪಕ್ಷಪಾತ ಪರಿಶೀಲನೆಯಿಂದ ಹೊರಬರಲಿ. ಯಾವುದೇ ವ್ಯಕ್ತಿಯನ್ನು ಸಾಕ್ಷ್ಯವಿಲ್ಲದೆ ತಪ್ಪಿತಸ್ಥನೆಂದು ನಿರ್ಧರಿಸಬಾರದು. ಯಾವುದೇ ಪ್ರಭಾವದ ಕಾರಣಕ್ಕೂ ಸತ್ಯವನ್ನು ಮುಚ್ಚಿಡಬಾರದು.
ಯಾರೇ ಆಗಲಿ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕಗ್ಗೊಲೆ ಮಾಡುವಂತಹ ಮಾತುಗಳನ್ನು ಆಡಬಾರದು. ಪ್ರಶ್ನಿಸುವ ಸ್ವಾತಂತ್ರ್ಯದೊಂದಿಗೆ ಉತ್ತರ ಕೇಳುವ ತಾಳ್ಮೆ ಮತ್ತು ಸತ್ಯವನ್ನು ಸಂಪೂರ್ಣವಾಗಿ ತೋರಿಸುವ ಹೊಣೆಗಾರಿಕೆಯೂ ಇರಬೇಕು ಎಂದಿದ್ದಾರೆ.
ಈ ಬೆಳವಣಿಗೆಗಳ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಿರುವ ಯಾವುದೇ ಕಾಣದ ಕೈಗಳು ಇದ್ದರೆ, ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಮ್ಮ ಮತದ ಮೂಲಕ ತಕ್ಕ ರಾಜಕೀಯ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಜನರ ವಿವೇಕಕ್ಕಿಂತ ದೊಡ್ಡ ಪ್ರಭಾವವಿಲ್ಲ. ಜನಾದೇಶಕ್ಕಿಂತ ದೊಡ್ಡ ಅಧಿಕಾರವಿಲ್ಲ. ಆ ವ್ಯಕ್ತಿ ಆಡಿರುವ ಮಾತುಗಳು ನಾಗರೀಕತೆಯ ಎಲ್ಲೆಯನ್ನು ಮೀರಿರುವುದರಿಂದ ತಕ್ಷಣವೇ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.