ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬುದನ್ನು ಇಲ್ಲಿನ ಶಾಸಕರೇ ತೋರಿಸಿದ್ದಾರೆ : ಡಿಕೆ ಶಿವಕುಮಾರ್

KannadaprabhaNewsNetwork |  
Published : Apr 23, 2024, 12:57 AM ISTUpdated : Apr 23, 2024, 10:52 AM IST
DK Shivakumar

ಸಾರಾಂಶ

 ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬುದನ್ನು ಇಲ್ಲಿನ ಶಾಸಕರೇ ತೋರಿಸಿದ್ದಾರೆ. ಇವತ್ತು ಅವರ ಭಾವಮೈದನನ್ನ ಅಂದರೆ ದೇವೇಗೌಡರ ಅಳಿಯನನ್ನು ಬೇರೆ ಪಕ್ಷದಿಂದ ಚುನಾವಣೆಗೆ ನಿಲ್ಲಿಸಿದ್ದಾರೆ. 

ಚನ್ನಪಟ್ಟಣ: ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬುದನ್ನು ಇಲ್ಲಿನ ಶಾಸಕರೇ ತೋರಿಸಿದ್ದಾರೆ. ಇವತ್ತು ಅವರ ಭಾವಮೈದನನ್ನ ಅಂದರೆ ದೇವೇಗೌಡರ ಅಳಿಯನನ್ನು ಬೇರೆ ಪಕ್ಷದಿಂದ ಚುನಾವಣೆಗೆ ನಿಲ್ಲಿಸಿದ್ದಾರೆ. ತಮ್ಮ ಕುಟುಂದವರನ್ನು ಮುಖ್ಯಮಂತ್ರಿ ಮಾಡಿದ, ಪ್ರಧಾನಿ ಮಾಡಿದ ಜಿಲ್ಲೆಯನ್ನು ತೊರೆದು ಬೇರೆ ಜಿಲ್ಲೆಗೆ ಹೋಗಿ ಸ್ಪರ್ಧಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ಧೈರ್ಯವಿದ್ದರೆ, ತಮ್ಮ ಕರ್ಮಭೂಮಿ ಎಂದು ಹೇಳುವ ಅವರು ಇಲ್ಲಿಂದಲೇ ಸ್ಪರ್ಧಿಸಬೇಕಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೇವೇಗೌಡರ ಅಳಿಯ ಡಾ.ಮಂಜುನಾಥ್, ಹಾಸನದಿಂದ ಅವರ ಮೊಮ್ಮಗ, ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ನನ್ನ ಸಮೀಕ್ಷೆ ಪ್ರಕಾರ ಈ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ೨೦೧೩ರಲ್ಲೂ ಇದೇ ರೀತಿ ಮಾಡಿದ್ದರು: ೨೧೦೩ರಲ್ಲೂ ಸಹ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ-ಜೆಡಿಎಸ್ ಸೇರಿ ಅನಿತಾ ಕುಮಾರಸ್ವಾಮಿಯನ್ನು ನಿಲ್ಲಿಸಿದರು. ಆದರೂ, ಜನಬೆಂಬಲದಿಂದ ನಾವು ಗೆಲುವು ಸಾಧಿಸಿದೆವು ಎಂದರು.

ಚುನಾವಣೆ ನಂತರ ಮೈತ್ರಿ ಪಕ್ಷದಲ್ಲಿ ಜಗಳ:

ಇಂದು ಇವರು ಮೈತ್ರಿ ಮಾಡಿಕೊಂಡಿರಬಹುದು. ಆದರೆ, ಇಬ್ಬರಿಗೂ ಪರಸ್ಪರ ಪಕ್ಷಗಳ ನಡುವೆ ನಂಬಿಕೆ ಇಲ್ಲ. ಚುನಾವಣೆ ಮುಗಿದ ನಂತರ ಹಳ್ಳಿಹಳ್ಳಿಗಳಲ್ಲಿ ಜೆಡಿಎಸ್-ಬಿಜೆಪಿ ನಡುವೆ ಜಗಳ ಆರಂಭಗೊಳ್ಳುತ್ತದೆ. ಇದು ಅಕ್ಷರಶ ಸತ್ಯ ಎಂದರು.

ಎಚ್‌ಡಿಕೆಯನ್ನು ಸಿಎಂ ಮಾಡಿದೆವು: ಹಾಸನದಿಂದ ಬಂದವರಿಗೆ ನಮ್ಮ ಜಿಲ್ಲೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ೨೦೧೮ರಲ್ಲಿ ನಾನೇ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದೆ. ೩೮ ಸ್ಥಾನ ಇದ್ದವರಿಗೆ ನಾವು ಅವಕಾಶ ಮಾಡಿಕೊಟ್ಟು ಅವರನ್ನು ಸಿಎಂ ಮಾಡಿದೆವು. ಆದರೆ ಇಂದು ಕುಮಾರಸ್ವಾಮಿ ಅವರು ಅವರನ್ನು ಅಧಿಕಾರದಿಂದ ಇಳಿಸಿದ ಯೋಗೇಶ್ವರ್, ಯಡಿಯೂರಪ್ಪ ಅವರನ್ನೇ ತಬ್ಬಾಡುತ್ತಿದ್ದಾರೆ. ಅವರಿಗೆ ನೀತಿ ಇಲ್ಲ, ಸಿದ್ದಾಂತವಿಲ್ಲ ಎಂದು ಕಿಡಿಕಾರಿದರು.

ಸಾಕ್ಷಿಗುಡ್ಡೆ ತೋರಿಸಿ:  ಕುಮಾರಸ್ವಾಮಿ ಅವರೇ ಎರಡು ಬಾರಿ ಸಿಎಂ ಆಗಿದ್ದೀರಿ. ಈ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿದ್ದೀರಿ? ನಿಮ್ಮ ಕೈಯಲ್ಲಿ ಕಾರ್ಯರ್ತರನ್ನು ಕಾಪಾಡಲು ಆಗಲಿಲ್ಲ. ಅವರಿಗೆ ಸಣ್ಣ ಅಧಿಕಾರ ನೀಡಲಿಲ್ಲ. ಆದರೆ ಇಂದು ಭಾಮೈದನನ್ನು ಬೇರೆ ಪಕ್ಷದಿಂದ ನಿಲ್ಲಿಸುತ್ತಿರುವುದು ಅವಮಾನ. ಜಿಲ್ಲೆಯ ಅಭಿವೃದ್ಧಿಗೆ ನೀವು ಮಾಡಿರುವ ಸಾಕ್ಷಿಗುಡ್ಡೆ ಏನಾದರೂ ಇದ್ದರೆ ತೋರಿಸಿ ಎಂದರು.

ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಾಂಗಲ್ಯಸೂತ್ರ ಕಿತ್ತು ಮುಸ್ಲಿಮರಿಗೆ ನೀಡುತ್ತದೆ ಎಂದು ದೇಶದ ಪ್ರಧಾನಿ ಹೇಳುತ್ತಿದ್ದಾರೆ. ಮೋದಿಯವರಿಗೆ ಸೋಲುತ್ತೇನೆ ಎನ್ನುವ ಭಯ ಉಂಟಾಗಿದೆ. ಅದಕ್ಕೆ ಹೀಗೆಲ್ಲಾ ಮಾತಾಡ್ತಿದ್ದಾರೆ ಎಂದರು.

ಚನ್ನಪಟ್ಟಣದಿಂದ ಸ್ಪರ್ಧಿಸುವ ಆಸೆ:  ಚನ್ನಪಟ್ಟಣ ನನಗೆ ತಾಯಿಯಂತೆ ಸಲುಹಿದೆ. ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದ ಜನ ನನ್ನನ್ನು ಗೆಲ್ಲಿಸಿ ಕಳುಹಿಸಿದ್ದೀರಿ. ಈ ಕ್ಷೇತ್ರ ವಿಂಗಡಣೆಯಾಗಿ ನಾನು ಅನಿವಾರ್ಯವಾಗಿ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂಕಟ ಅನುಭವಿಸಿದ್ದೆ. ಮತ್ತೊಮ್ಮೆ ಅವಕಾಶ ಸಿಕ್ಕರೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಆಸೆ. ಈ ಕ್ಷೇತ್ರದ ಜಾತ್ಯತೀತ ತತ್ವ, ಸಹಬಾಳ್ವೆಗೆ ಮಾದರಿ. ಜಾತಿ, ಪಂಗಡಗಳ ಜನರು ಅತ್ಯಂತ ಅನ್ಯೋನ್ಯವಾಗಿ ಇಲ್ಲಿ ಜೀವನ ಮಾಡುತ್ತಿದ್ದಾರೆ ಎಂದರು.

ಚುನಾವಣಾ ಖರ್ಚಿನ ಎಲ್ಲಾ ಲೆಕ್ಕಗಳನ್ನು ಸುರೇಶ್ ಹೆಸರಿಗೆ ಆಯೋಗದವರು ಬರೆಯುತ್ತಿದ್ದಾರೆ. ಅದರೆ, ಬಿಜೆಪಿಯವರ ಲೆಕ್ಕಕ್ಕೆ ಏನನ್ನೂ ಬರೆಯುತ್ತಿಲ್ಲ ಎಂದರು.

ಕರ್ನಾಟಕದ ಹೋರಾಟಕ್ಕೆ ಜಯ ಸಿಕ್ಕಿದೆ: ಡಿಕೆಶಿ

ಬರ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಹೋರಾಟಕ್ಕೆ ಜಯ ಸಿಕ್ಕಿದೆ. ನಮ್ಮ ಪಾಲಿನ ಹಣ ಸಿಗಲೇಬೇಕು ಎಂದು ನ್ಯಾಯಲಯದ ಮೊರೆ ಹೋಗಿದ್ದೆವು. ಇವತ್ತು ಸುಪ್ರೀಂಕೋರ್ಟ್ ನಲ್ಲಿ ಬರಗಾಲ ಹಣದ ಬಗ್ಗೆ ವಾದ ನಡೆದಿದೆ. ಕೇಂದ್ರ ಸರ್ಕಾರ ಒಂದು ವಾರದಲ್ಲಿ ತೀರ್ಮಾನ ಮಾಡ್ತೀವಿ ಅಂತ ಒಪ್ಪಿಕೊಂಡಿದೆ. ನಮ್ಮ ಪಾಲಿನ ತೆರಿಗೆ, ಬರ ಪರಿಹಾರ ಸಿಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತೆರಿಗೆ, ನಮ್ಮ ಹಕ್ಕು ಅಂತ ಹೋರಾಟ ಮಾಡ್ತಿದ್ದೆವು. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಡಿ.ಕೆ.ಸುರೇಶ್ ಅವರು ದನಿ ಎತ್ತಿದ್ದರು. ಎಲ್ಲಾ ಹೋರಾಟಗಳಿಂದ ನಮಗೆ ನ್ಯಾಯ ಸಿಕ್ಕಿದೆ ಎಂದರು.

ಮೇಕೆದಾಟು ಹೋರಾಟಕ್ಕೆ ಪ್ರತಿಕ್ರಿಯಿಸಿ, ಕಾವೇರಿ ಜಲಾನಯನದ ಜನರು, ಬೆಂಗಳೂರಿನ ಜನರನ್ನು ಉಳಿಸಲೆಂದೇ ನಾವು ಹೋರಾಟ ಮಾಡಿದ್ದೆವು. ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಕರೆಯುತ್ತಿದ್ದಾರೆ. ಇಂತಹ ಬರಗಾಲದಲ್ಲೂ ನಾವು ಟ್ಯಾಂಕರ್ ಮೂಲಕವಾದರೂ ನೀರು ಕೊಡುತ್ತಿದ್ದೇವಲ್ಲಾ. ೭ ಸಾವಿರ ಕೊಳವೆಬಾವಿ ಆಗಿದೆ. ಸಮರ್ಪಕವಾಗಿ ಬರಗಾಲ ನಿಭಾಯಿಸಿದ್ದೇವೆ. ಜನ ಸ್ನಾನ ಮಾಡದೆ, ನೀರು ಕುಡಿಯದೇ ಇದ್ದಾರೆಯೇ? ಇದಕ್ಕಾದರೂ ಪ್ರಧಾನಿ ನಮ್ಮನ್ನು ನೆನೆಪಿಸಿಕೊಂಡಿದ್ದಾರಲ್ಲ ಅವರಿಗೆ ಧನ್ಯವಾದಗಳು ಎಂದರು.

ಬಿಜೆಪಿಗೆ ಹತಾಶೆಯಾಗಿದೆ:

ಹಿಂದೂಗಳ ಮಂಗಳ ಸೂತ್ರ ಮುಸ್ಲಿಮರ ಪಾಲಾಗಲಿದೆ ಎಂಬ ಪ್ರಧಾನಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಭಾರತೀಯರು, ಸಂವಿಧಾನದಲ್ಲಿ ಸಮಾನತೆ ಅಂತ ಹೇಳಿದ್ದಾರೆ. ಮಂಗಳ ಸೂತ್ರ ಕಳೆದುಕೊಳ್ತಾರೆ ಅಂದ್ರೆ ಏನ್ ಅರ್ಥ? ಈ ಮಾತುಗಳನ್ನ ನೋಡಿದರೆ ಬಿಜೆಪಿ ಹತಾಶೆ ಕಾಣುತ್ತೆ ಎಂದು ತಿರುಗೇಟು ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ