ಚಿನ್ನದ ಚಮಚ ಇಟ್ಟುಕೊಟ್ಟು ಬಂದವನಲ್ಲ: ಬಿಎಸ್‌ವೈ

KannadaprabhaNewsNetwork |  
Published : May 10, 2026, 02:00 AM IST
Yediyurappa

ಸಾರಾಂಶ

ನಾನು ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ರಾಜಕಾರಣಕ್ಕೆ ಬಂದವನಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದವ ನಾನು. ಮಹಿಳೆಯರಿಗೆ, ರೈತರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಮುಖ್ಯಮಂತ್ರಿ ಆಗುವ ಕನಸು ಕಂಡವನಲ್ಲ. ನಾನು ಪುರಸಭೆಯಿಂದ ಮುಖ್ಯಮಂತ್ರಿ ಹುದ್ದೆಗೆ ಏರಲು ಈ ನಾಡಿನ ಜನತೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

 ಚಿತ್ರದುರ್ಗ:  ನಾನು ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ರಾಜಕಾರಣಕ್ಕೆ ಬಂದವನಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದವ ನಾನು. ಮಹಿಳೆಯರಿಗೆ, ರೈತರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಮುಖ್ಯಮಂತ್ರಿ ಆಗುವ ಕನಸು ಕಂಡವನಲ್ಲ. ನಾನು ಪುರಸಭೆಯಿಂದ ಮುಖ್ಯಮಂತ್ರಿ ಹುದ್ದೆಗೆ ಏರಲು ಈ ನಾಡಿನ ಜನತೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇದೊಂದು ಪರ್ವದಿನ. ಕೃತಜ್ಞತೆ ಹೇಳುವ ಕಾಲದಲ್ಲಿ ನಾನಿದ್ದೇನೆ. ಐತಿಹಾಸಿಕವಾಗಿ ಚಿತ್ರದುರ್ಗ ಹೆಸರಾಗಿದೆ. ಐದು ದಶಕ ನಿಮ್ಮ ಜೊತೆ ಇದ್ದಿದ್ದು ನನಗೆ ಖುಷಿಯಾಗಿದೆ ಎಂದರು.

ವೀರ ಮದಕರಿನಾಯಕರಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಂಗೊಳಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರು ಹೆಗಲು ಕೊಟ್ಟು ದುಡಿಯುವ ಸಾರಥಿಯಾಗಿದ್ದಾರೆ. ಪ್ರಧಾನಿ ಮೋದಿಜೀ ಹಾಗೂ ಅಮಿತ್ ಶಾ ಜೋಡಿ ದೇಶವನ್ನು ಬಿಜೆಪಿಮಯ ಮಾಡಲು ಹೊರಟಿದ್ದಾರೆ. ಹೊರಗಿನ ಶಕ್ತಿಗಳನ್ನು ಸದೆ ಬಡಿಯುತ್ತಿದ್ದಾರೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ದಿಗ್ವಜಯ ಸಾಧಿಸಿದ ವಿಜಯೋತ್ಸವವೂ ಈ ಕಾರ್ಯಕ್ರಮದ ಉದ್ದೇಶ ಎಂದರು.

ಮೋದಿಜೀ ಮತ್ತು ಅಮಿತ್ ಶಾ ಅವರು ದೇಶದಲ್ಲಿ ಶಾಂತಿ, ಸೌಹಾರ್ದತೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಪಕ್ಷ ಕಟ್ಟಿದ ಶ್ಯಾಮ್ ಪ್ರಸಾದ್‌ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಶ್ರಮವನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅರಳಲು ಅಮಿತ್ ಶಾ, ಮೋದಿ ಕಾರಣರು. ಎಷ್ಟೇ ಒತ್ತಡದಲ್ಲಿ ಇದ್ದರೂ ಅಮಿತ್ ಶಾ ಅವರು ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆ ಇಲ್ಲಿಗೆ ಬಂದಿದ್ದು ನನಗೆ ಖುಷಿ ತಂದಿದೆ. ನಾನು ಬದುಕಿರುವವರೆಗೂ ದೇಶ ಸೇವೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. 

ಕರ್ನಾಟಕದ ಏಕ ಮಾತ್ರ ಮಾಸ್ ಲೀಡರ್ ಬಿಎಸ್‌ವೈ: 

ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿ ಮಾಡುವಂತಹ ಬೃಹತ್ ಜನಶಕ್ತಿಗೆ ಪ್ರೇರಣೆ ನೀಡುವ ಕರ್ನಾಟಕದ ಏಕೈಕ ಮಾಸ್ ಲೀಡರ್ ಯಡಿಯೂರಪ್ಪ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.ಬಿಎಸ್‌ವೈ ಅಭಿಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಅಂತ ಭಾಷಣ ಬಿಗಿದವರು, ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಏನು ಮಾಡಿದರು? ಒಳಮೀಸಲು ವಿಚಾರವಾಗಿ ಮೊನ್ನೆ ಅವರು ತೆಗೆದುಕೊಂಡಿರುವ ನಿರ್ಣಯ ದಲಿತ ಸಮೂಹಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ, ಭಕ್ತ ಕನಕದಾಸರ ಜಯಂತಿ ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳ ಪುಣ್ಯಾತ್ಮರನ್ನು ನೆನಪಿಸುವಂತಹ ಜಯಂತಿ ಮಾಡಿದರು. ಕಾಗಿನೆಲೆ ಅಭಿವೃದ್ಧಿ, ಬಂಜಾರ ಅಭಿವೃದ್ಧಿ ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳಿಗೆ ನಿಗಮ ಮಾಡಿ, ಹಣ ಕೊಟ್ಟು ಅಭಿವೃದ್ಧಿ ಮಾಡಿರುವ ನಾಯಕ ಬಿ.ಎಸ್.ಯಡಿಯೂರಪ್ಪ ಎಂದು ಹೇಳಿದರು.ಚಿತ್ರದುರ್ಗದಂತಹ ಬಯಲುಸೀಮೆಯ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ನೀರು ಕೊಟ್ಟ ಭಗೀರಥ ಅವರು. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕಾಲದಿಂದ ಭದ್ರಾ ಮೇಲ್ಡಂಡೆ ಜಾರಿಯಾಗದೆ ಹಾಗೆ ಉಳಿದಿತ್ತು. ಯಡಿಯೂರಪ್ಪ ಅವರು ಸಿಎಂ ಆದ ತಕ್ಷಣ ಯೋಜನೆಗೆ ಹಣ ಬಿಡುಗಡೆ ಮಾಡುವುದರ ಮೂಲಕ ಬಯಲುಸೀಮೆಯ ಜನರ ಬದುಕಿಗೆ ಆಸರೆಯಾಗುವ ಕೆಲಸ ಮಾಡಿದರು. ಮಾರಿಕಣಿವೆ ಜಲಾಶಯಕ್ಕೂ ನೀರು ಹರಿಸಲು ಶ್ರಮಿಸಿದರು ಎಂದು ಅವರು ಶ್ಲಾಘಿಸಿದರು.

ಬೇಡಿಕೆಗಳಿಗೆ, ಆ ಯೋಜನೆಗಳಿಗೆ ಕಾಯಕಲ್ಪ

ಯಡಿಯೂರಪ್ಪನವರು ವಿರೋಧ ಪಕ್ಷದಲ್ಲಿ ಇದ್ದಾಗ ಯಾವ ಉದ್ದೇಶಕ್ಕಾಗಿ ಹೋರಾಟ ಮಾಡಿದ್ದರೋ, ಅಧಿಕಾರಕ್ಕೆ ಬಂದಾಗ ಆ ಹೋರಾಟದ ಬೇಡಿಕೆಗಳಿಗೆ, ಆ ಯೋಜನೆಗಳಿಗೆ ಕಾಯಕಲ್ಪ ಕೊಟ್ಟರು. ಅವರ ಹೋರಾಟದ ಪ್ರಾಮಾಣಿಕತೆಯ ಪ್ರದರ್ಶನ ಮಾಡಿರುವುದು ನಮ್ಮ ಧೀಮಂತ ನಾಯಕ ಯಡಿಯೂರಪ್ಪ. ವಿಜಯಪುರದಲ್ಲಿ ಕೆರೆ ತುಂಬಿಸುವ ಯೋಜನೆ, ಶಿಗ್ಗಾವಿಯಲ್ಲಿ ಕೆರೆ ತುಂಬಿಸುವ ಯೋಜನೆ, ದಾವಣಗೆರೆಯ ರಾಜನಹಳ್ಳಿಯ ಕೆರೆ ತುಂಬಿಸುವ ಯೋಜನೆ, ಉಮ್ರಾಣಿ ಅಮೃತಪುರ ಯೋಜನೆ, ಚನ್ನಗಿರಿ ಯೋಜನೆ, ತುಮಕೂರು ಜಿಲ್ಲೆಯಲ್ಲಿ ಗೂಳೂರು ಹೆಬ್ಬೂರು ಯೋಜನೆ, ಬರಪೀಡಿತ ಚಾಮರಾಜನಗರದಲ್ಲಿ ಕೆರೆ ತುಂಬಿಸುವ ಯೋಜನೆ ಸೇರಿ ರಾಜ್ಯದ ಉದ್ದಗಲಕ್ಕೂ ಗಂಗಾಮಾತೆಯನ್ನು ಭೂಮಿತಾಯಿಗೆ ಉಣಬಡಿಸಿ, ಅದಕ್ಕೆ ರೈತರ ಬೆವರು ಸೇರಿದಾಗ ಅಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶ ಒದಗಿಸಿದ ನಾಯಕ ಬಿ.ಎಸ್.ಯಡಿಯೂರಪ್ಪ ಎಂದು ಶ್ಲಾಘಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ