ಬಳ್ಳಾರಿ: ದೇಶಕ್ಕಾಗಿ ದೇಶದ ರಕ್ಷಣೆಗಾಗಿ ಹುತಾತ್ಮರಾದ ಮತ್ತು ಸಾರ್ವಜನಿಕರ ನೆಮ್ಮದಿಗೆ ಕಾರಣರಾದ ಪೊಲೀಸ್ ಹುತಾತ್ಮರ ಬಗ್ಗೆ ಗೌರವ ಭಾವನೆ ಇರಬೇಕು. ಹುತಾತ್ಮರಾದ ಮಹನೀಯರನ್ನು ಸದಾ ಸ್ಮರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ತಿಳಿಸಿದರು.
ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರ, ಅರೆಸೇನಾ ಪಡೆಗಳಲ್ಲಿ ದೇಶದ ಆಂತರಿಕ ಭದ್ರತೆಗಾಗಿ ಸಮವಸ್ತ್ರಗಳ ಮೂಲಕ ಕರ್ತವ್ಯದಲ್ಲಿ ಹುತಾತ್ಮರಾದವರ ಸ್ಮರಣೆ ಹಿನ್ನೆಲೆಯಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸರು ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಅಪಾರವಾಗಿ ಶ್ರಮಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಜೀವ ಒತ್ತೆಯಿಟ್ಟು ಕಾರ್ಯ ನಿರ್ವಹಿಸಿ, ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಸೇವೆಯನ್ನು ಸ್ಮರಣಾರ್ಹವಾಗಿದೆ. ಪೊಲೀಸರು ನನಗಿಂತ ನನ್ನ ಕರ್ತವ್ಯ ಮೇಲು ಎಂದು ಭಾವಿಸುತ್ತಾರೆ. ಸಮಾಜಕ್ಕಾಗಿ ಅಮೂಲ್ಯ ಜೀವನ ತ್ಯಾಗಕ್ಕೂ ಸಿದ್ಧರಾಗುವ ಪೊಲೀಸರ ಸೇವೆ ಜನಮುಖಿ ಕರ್ತವ್ಯದ ಒಂದು ಮಾನವ ಸಂಪನ್ಮೂಲವಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಬಳ್ಳಾರಿ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ವರ್ತಿಕ ಕಟಿಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಹುತಾತ್ಮರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 21 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಪೊಲೀಸ್ ಸಂಸ್ಮರಣಾ ದಿನ ಎಂದೂ ಕರೆಯುತ್ತೇವೆ. 1958 ರಲ್ಲಿ ಲಡಾಖ್‌ನ ಹಾಟ್ ಸ್ಟ್ರಿಂಗ್ ನಲ್ಲಿ ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ 10 ಪೊಲೀಸ್ ಅಧಿಕಾರಿಗಳನ್ನು ಗೌರವಿಸಲು 1960 ರ ಅಕ್ಟೋಬರ್ 21 ರಂದು, ವೀರ ಪೊಲೀಸರ ತ್ಯಾಗವನ್ನು ಗೌರವಿಸಲು ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ. ಮಾತನಾಡಿ, ಪೊಲೀಸರ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ದೇಶದಲ್ಲಿ 191 ಪೊಲೀಸರು ಮತ್ತು ಕರ್ನಾಟಕದಲ್ಲಿ 8 ಜನ ಪೊಲೀಸರು ಹುತಾತ್ಮರಾಗಿದ್ದರೆ ಎಂದು ಹೇಳಿದರು.
ಪೊಲೀಸ್ ಸೇವೆ ಅತ್ಯಂತ ಪವಿತ್ರವಾದದ್ದು. ಜನರ ಹಿತ ಕಾಯಲು ತಮ್ಮ ಬದುಕನ್ನೇ ಮೀಸಲಿಡುವ ಪೊಲೀಸರು ಈ ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಪೊಲೀಸರು ಕರ್ತವ್ಯದ ವೇಳೆ ಮಾನಸಿಕವಾಗಿ ಕುಗ್ಗಬಾರದು. ಈ ನೆಲದ ಕಾನೂನು ರಕ್ಷಣೆಗೆ ಶ್ರಮಿಸುವವರು ಯಾವುದೇ ಒತ್ತಡಕ್ಕೆ ಮಣಿಯದೇ ಧೈರ್ಯವಾಗಿ ಕಾರ್ಯ ನಿರ್ವಹಿಸಬೇಕು. ಜನಕಲ್ಯಾಣಕ್ಕಾಗಿ ಸದಾ ಸಿದ್ಧರಾಗಿರಬೇಕು. ಇದೇ ವೇಳೆ ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.ಇದಕ್ಕೂ ಮೊದಲು ಆರ್‌ಪಿಎಫ್ ಕಮಾಂಡರ್ ಸಿಕೀಂದ್ರ ಪೊಲೀಸ್ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ನಂತರ ಪಥ ಸಂಚಲನ ಮೂಲಕ ಹುತಾತ್ಮರ ಶಾಂತಿಗಾಗಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ಧ್ವಜವನ್ನು ಅರ್ಧಕ್ಕೆ ಇಳಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ. ರವಿಕುಮಾರ್, ಎಸ್.ನವೀನಕುಮಾರ್, ಡಿವೈಎಸ್ಪಿ ಪ್ರಸಾದ್ ಗೋಖಲೆ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಕುಟುಂಬ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.