‘ಒಂದು ಜಿಲ್ಲೆ-ಒಂದು ಕ್ರೀಡೆ’ ಪರಿಕಲ್ಪನೆಯಲ್ಲಿ ದ.ಕ.ದಲ್ಲಿ ಅಥ್ಲೆಟಿಕ್ಸ್‌ಗೆ ಪ್ರೋತ್ಸಾಹ: ಸಚಿವ ನಾಗೇಂದ್ರ

KannadaprabhaNewsNetwork | Published : Jan 14, 2024 1:34 AM

ಸಾರಾಂಶ

‘ಒಂದು ಜಿಲ್ಲೆ-ಒಂದು ಕ್ರೀಡೆ’ ಪರಿಕಲ್ಪನೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅಥ್ಲೆಟಿಕ್ಸ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕ್ರೀಡಾ ಸಚಿವ ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ಒಂದು ಜಿಲ್ಲೆ-ಒಂದು ಕ್ರೀಡೆ’ ಪರಿಕಲ್ಪನೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅಥ್ಲೆಟಿಕ್ಸ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ನಾಗೇಂದ್ರ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುವುದು. ದ.ಕ.ದಲ್ಲಿ ಅಥ್ಲೆಟಿಕ್ಸ್‌ಗೆ ಬೇಕಾದ ಮೈದಾನ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.ದ.ಕ. ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದ ಏಳಿಗೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರ ಹಾಡಿಗಳಿಗೆ ತೆರಳಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದೇನೆ. ಅವರ ಕುಂದುಕೊರತೆಗಳನ್ನು ತಿಳಿದುಕೊಂಡು ಪೌಷ್ಠಿಕ ಆಹಾರವೇ ಮೊದಲಾದ ಅಗತ್ಯ ನೆರವು ನೀಡಲಾಗುವುದು. ಇವರಿಗೆ ಆರು ತಿಂಗಳು ಇದ್ದ ಪೌಷ್ಠಿಕ ಆಹಾರ ಪೂರೈಕೆಯನ್ನು ಈಗ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಅವರೆಲ್ಲ ಅರಣ್ಯದಂಚಿನಲ್ಲಿ ವಾಸಿಸುತ್ತಿದ್ದು, ಅವರಿಗೆ ಪಟ್ಟಾ ಜಾಗ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಕ್ರಿಕೆಟ್‌ ಸೇರ್ಪಡೆಗೆ ಪ್ರಯತ್ನ: ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಕ್ರಿಕೆಟ್‌ ಸೇರ್ಪಡೆಯಾಗಿಲ್ಲ. ಅದನ್ನು ಸೇರ್ಪಡೆಗೊಳಿಸಿದರೆ, ಆಗ ಕ್ರಿಕೆಟ್‌ ಸ್ಟೇಡಿಯಂ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಿಸಿಸಿಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ರಾಜ್ಯದಲ್ಲಿ ಕ್ರೀಡಾ ಇಲಾಖೆಗೆ ಇರುವ ಆಸ್ತಿಯನ್ನು ಇಲಾಖೆಯಲ್ಲೇ ಉಳಿಸಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮಂಗಳೂರು ಪಾಲಿಕೆಯ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಸೇರಿದಂತೆ ಯಾವುದೇ ಜಾಗವನ್ನು ಮರಳಿ ಇಲಾಖೆಯಿಂದ ಹೊರಗೆ ನೀಡುವುದಿಲ್ಲ ಎಂದು ಸಚಿವ ನಾಗೇಂದ್ರ ಸ್ಪಷ್ಟಪಡಿಸಿದರು.ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್‌, ಮಾಜಿ ಸದಸ್ಯ ಐವನ್‌ ಡಿಸೋಜಾ, ಮುಖಂಡರಾದ ಪಿ.ವಿ.ಮೋಹನ್‌, ಸಂತೋಷ್‌, ಪ್ರವೀಣ್‌ಚಂದ್ರ, ನಝೀರ್ ಬಜಾಲ್‌ ಮತ್ತಿತರರಿದ್ದರು.

Share this article