ಬೆಂಗಳೂರು : ಸ್ವಂತ ಜ್ಯುವೆಲ್ಲರಿ ಅಂಗಡಿ ಆರಂಭಿಸುವ ಉದ್ದೇಶದಿಂದ ತಾನು ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಅಂಗಡಿಯಲ್ಲೇ ಚಿನ್ನಾಭರಣಗಳು-ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದ ಮಾಜಿ ಕೆಲಸಗಾರನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಪ್ರಮೋದ್ ಕುಮಾರ್(52) ಬಂಧಿತ. ಆರೋಪಿಯಿಂದ ₹20.75 ಲಕ್ಷ ಮೌಲ್ಯದ 300 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 954 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಅಶ್ವತ್ಥನಗರದ ಸ್ವಸ್ತಿಕ್ ಜುವೆಲವರಿ ಮಾಲೀಕ ಕಾಂತಿಲಾಲ್ ನೀಡಿದ ದೂರಿನ ಮೇರೆಗೆ ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್ ಭಾಗ್ಯವತಿ ಕೆ.ಬಂಟಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಕಾಂತಿಲಾಲ್ ಅಶ್ವತ್ಥನಗರದಲ್ಲಿ ಸ್ವಸ್ತಿಕ್ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದಾರೆ. ಒಂದು ವರ್ಷದ ಹಿಂದೆ ರಾಜಸ್ಥಾನ ಮೂಲದ ಪ್ರಮೋದ್ ಕುಮಾರ್‌ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಪ್ರಮೋದ್ ಉತ್ತಮವಾಗಿ ಕೆಲಸ ಮಾಡಿ ಮಾಲೀಕರ ನಂಬಿಕೆ ಗಿಟ್ಟಿಸಿದ್ದ. ಹೀಗಾಗಿ ಮಾಲೀಕ ಕಾಂತಿಲಾಲ್ ಕೆಲಸದ ಮೇಲೆ ಹೊರಗೆ ಹೋಗುವಾಗಲೆಲ್ಲ ಪ್ರಮೋದ್‌ಗೆ ಜ್ಯುವೆಲ್ಲರಿ ಅಂಗಡಿ ಜವಾಬ್ದಾರಿ ವಹಿಸುತ್ತಿದ್ದರು.
ಕಳೆದ ಮಾರ್ಚ್‌ನಲ್ಲಿ ಯಾರಿಗೂ ಹೇಳದೆ ಪ್ರಮೋದ್ ಕೆಲಸ ಬಿಟ್ಟು ನಾಪತ್ತೆಯಾಗಿದ್ದ. ಈ ವೇಳೆ ಮಾಲೀಕ ಕಾಂತಿಲಾಲ್ ಅಂಗಡಿಯ ಆಭರಣಗಳನ್ನು ಪರಿಶೀಲಿಸಿದಾಗ ಕೆಲವು ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಾಗ್ರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಮಾಜಿ ಕೆಲಸಗಾರ ಪ್ರಮೋದ್ ಬಗ್ಗೆ ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದರು.
ಕದ್ದ ಚಿನ್ನಾಭರಣ ಮನೆಯಲ್ಲೇ ಬಚ್ಚಿಟ್ಟಿದ್ದ:
ದೂರಿನ ಮೇರೆಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಮೋದ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿನ್ನಾಭರಣ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಕೊಡಿಗೇಹಳ್ಳಿ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಂತ ಜ್ಯುವೆಲ್ಲರಿ ಅಂಗಡಿ ಕನಸು
ಆರೋಪಿ ಪ್ರಮೋದ್ ಕುಮಾರ್ ಬಹಳ ವರ್ಷಗಳಿಂದ ಸ್ವಂತ ಜ್ಯುವೆಲ್ಲರಿ ಅಂಗಡಿ ತೆರೆಯುವ ಕನಸು ಕಂಡಿದ್ದ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಸುಮ್ಮನಿದ್ದ. ಸ್ವಸ್ತಿಕ್ ಜ್ಯುವೆಲ್ಲರಿ ಅಂಗಡಿಗೆ ಕೆಲಸಕ್ಕೆ ಸೇರಿ ಮಾಲೀಕರ ನಂಬಿಕೆಗಿಟ್ಟಿಸಿದ್ದ ಆರೋಪಿ ಪ್ರಮೋದ್ ಬಳಿಕ ಮಾಲೀಕರು ಕೆಲಸದ ಮೇಲೆ ಹೊರಗೆ ಹೋದಾಗಲೆಲ್ಲಾ ಒಂದೊಂದೇ ಚಿನ್ನಾಭರಣಗಳನ್ನು ಕಳವು ಮಾಡಿ ಮನೆಯಲ್ಲಿ ಸಂಗ್ರಹಿಸಿದ್ದ. ಕಳೆದ ಮಾರ್ಚ್‌ನಲ್ಲಿ ಯಾರಿಗೂ ತಿಳಿಸದೆ ಕೆಲಸ ಬಿಟ್ಟಿದ್ದ. ಶೀಘ್ರದಲ್ಲೇ ಸ್ವಂತ ಜ್ಯುವೆಲ್ಲರಿ ಅಂಗಡಿ ಆರಂಭಿಸಲು ಸಿದ್ಧತೆ ನಡೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.