ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರೆಯುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಾರುತಿ ಅವರನ್ನು ಭೇಟಿ ಮಾಡಿದ ಸದಸ್ಯರು, ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ವೈದ್ಯರು, ನರ್ಸ್ ಸೇರಿದಂತೆ ಸಹಾಯಕರ ವರ್ತನೆ, ರೋಗಿಗಳಿಗೆ ನೀಡುವ ಚಿಕಿತ್ಸೆ, ದೊರೆಯುವ ಮೂಲ ಸೌಕರ್ಯ ಕುರಿತಾಗಿ ಚರ್ಚೆ ನಡೆಸಿದರು.
ರೋಗಿಗಳಿಗೆ ಸರ್ಜರಿ ಸೇರಿದಂತೆ ದೊಡ್ಡ ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಹಣ ಕೇಳುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಚಿಕಿತ್ಸೆ ಪಡೆಯಲು ಬಂದ ರೋಗಿಗಳನ್ನು ಕೆಲ ವೈದ್ಯರು ದೂರದಿಂದಲೇ ಮಾತನಾಡಿಸಿದರು.ಸರಿಯಾಗಿ ಪರೀಕ್ಷೆಯನ್ನೂ ನಡೆಸದೆ ಮಾತ್ರೆ ತೆಗೆದುಕೊಳ್ಳು ಎಂದು ಚೀಟಿ ಬರೆದು ಕಳುಹಿಸುತ್ತಿದ್ದಾರೆ. ಅಲ್ಲದೇ, ಶಸ್ತ್ರಚಿಕಿತ್ಸೆ ಮಾಡಲು ತೆರಳಿದ್ದ ವೈದ್ಯರ ಬಗ್ಗೆ ಅವರ ಕೊಠಡಿ ಬಾಗಿಲ ಮೇಲೆ ನಾಮಫಲಕ ಅಳವಡಿಸಿ ಇದರಿಂದ ಹೊರ ರೋಗಿಗಳಿಗೆ ಗಂಟೆಗಟ್ಟಲು ಕಾಯುವುದು ತಪ್ಪಲಿದೆ. ಜೊತೆಗೆ ರೋಗಿಗಳು ಹಾಗೂ ವೈದ್ಯರ ಕರ್ತವ್ಯಗಳ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ನೇತೃತ್ವದಲ್ಲಿ ಸದಸ್ಯರು ಒತ್ತಾಯಿಸಿದರು.
ಸಂಜೆ ಪಾಳ್ಯದಲ್ಲಿ ಕಾರ್ಯ ನಿರ್ವಹಿಸಿವ ವೈದ್ಯರು ಕಡಿಮೆ ಇದ್ದು, ಅಪಘಾತ ಹಾಗೂ ಅನಾಹುತ ಸಮಸ್ಯೆಗಳಿಗೆ ಬೇಗನೆ ಸ್ಪಂಧಿಸಿವ ಹೆಚ್ಚು ವೈದ್ಯ ಸಿಬ್ಬಂದಿಯನ್ನು ನೇಮಿಸಬೇಕು. ಜೊತೆಗೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗದವರು ತಾಲೂಕಿನ ಪ್ರತಿ ಹಳ್ಳಿಗಳಿಗೆ ಒಂದು ದಿನ ಭೇಟಿ ನೀಡಿ ಡೆಂಘೀ ರೊಗ ಬರಲು ಕಾರಣ ಹಾಗೂ ಹರಿವು ಮೂಡಿಸಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.ನಂತರ ಆಸ್ಪತ್ರೆಯಲ್ಲಿ ದಾಖಲಾಗಿರುವ ಡೆಂಘೀ ರೋಗಿಗಳಿಗೆ ಪ್ರತ್ಯೇಕ ಕೊಠಡಿ, ಮಹಿಳಾ ವಾರ್ಡ್, ಮಕ್ಕಳ ವಾರ್ಡ್, ಡಯಾಲೀಸೆಸ್ ರೋಗಿಗಳ ವಾರ್ಡ್‌ಗಳಿಗೂ ಭೇಟಿ ನೀಡಿದ ಸದಸ್ಯರು ರೋಗಿಗಳನ್ನು ಖುದ್ದ ಭೇಟಿ ಮಾಡಿ ಆಸ್ಪತ್ರೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು.
ಈ ವೇಳೆ ಸಂಸ್ಥೆ ಆರೋಗ್ಯ ಪ್ರಧಾನ ಕಾರ್ಯದರ್ಶಿ ಡಾ.ಆರ್.ಕೆ ನಾಗರಾಜು, ಕೃಷಿ ಪ್ರಧಾನ ಕಾರ್ಯದರ್ಶಿ ವಿಜೇಂದ್ರ (ಪುಟ್ಟ), ರಾಜ್ಯ ಮಹಿಳಾ ಉಪಾಧ್ಯಕ್ಷೆ ರಾಣಿ ಪ್ರಭ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸರಸ್ವತಿ, ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ್, ರಾಜ್ಯ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಎಲ್.ವಿ.ನವೀನ್ ಕುಮಾರ್, ಜಿಲ್ಲಾ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಗಂಜಾಂ ಮಂಜು, ರಾಜ್ಯ ಘಟಕದ ಸದಸ್ಯರಾದ ಶಿವಕುಮಾರ್, ಗೋಪಾಲಗೌಡ ಸೇರಿದಂತೆ ಇತರರು ಇದ್ದರು.