ಶ್ರವಣ ದೋಷ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ: ಸಚಿವ ದಿನೇಶ್ ಗುಂಡೂರಾವ್

KannadaprabhaNewsNetwork |  
Published : Mar 13, 2024, 02:05 AM IST
2 | Kannada Prabha

ಸಾರಾಂಶ

ಕಿವಿ ಕೇಳಿಸದೆ ಇರುವ ಕಿವುಡುತನ ಹುಟ್ಟುವಾಗಲೇ ಕೆಲವರಿಗೆ ಬರುತ್ತದೆ. ಇಂತಹ ಮಕ್ಕಳಿಗೆ ಶ್ರವಣ ಸಾಧನಗಳನ್ನು ಅಳವಡಿಸುವ ಮೂಲಕ ಅಲ್ಪ ಸ್ವಲ್ಪ ಕೇಳಿಸುವಂತೆ ಮಾಡಬಹುದಾಗಿದೆ. ಕಿವುಡುತನಕ್ಕೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರುಪಾಯಿ ಬರಿಸಬೇಕಾಗಿತ್ತು. ಇದು ಬಡವರಿಗೆ ಅಸಾಧ್ಯ. ಹೀಗಾಗಿ, ಸರ್ಕಾರದ ವತಿಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.ನಾವು ಒಂದು ವರ್ಷದಲ್ಲಿ ಶ್ರವಣ ದೋಷಕ್ಕೆ 353 ಶಸ್ತ್ರಚಿಕಿತ್ಸೆ ಮಾಡಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯದಲ್ಲಿ 27 ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ವಾಕ್ ಮತ್ತು ಶ್ರವಣ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಶ್ರವಣ ದೋಷ ಇರುವ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಶಸ್ತ್ರಚಿಕಿತ್ಸೆ ಹಾಗೂ ಶ್ರವಣ ಸಾಧನಗಳ ಅಳವಡಿಕೆ ಮೂಲಕ ಗುಣಪಡಿಸಿ ಶ್ರವಣ ದೋಷ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (ಆಯಿಷ್) ಮಂಗಳವಾರ ಆಯೋಜಿಸಲಾಗಿದ್ದ ಶ್ರವಣ ಸಂಜೀವಿನಿ, ಕ್ಲಾಕಿಯರ್ ಇಂಪ್ಲಾಂಟ್ ಯೋಜನೆಯ ಮರು ನಾಮಕರಣ ಹಾಗೂ ಫಲಾನುಭವಿಗಳಿಗೆ ವಾಕ್ ಮತ್ತು ಶ್ರವಣ ತರಬೇತಿ ಕಾರ್ಯಕ್ರಮ, ವಿಶ್ವ ಶ್ರವಣ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಿವಿ ಕೇಳಿಸದೆ ಇರುವ ಕಿವುಡುತನ ಹುಟ್ಟುವಾಗಲೇ ಕೆಲವರಿಗೆ ಬರುತ್ತದೆ. ಇಂತಹ ಮಕ್ಕಳಿಗೆ ಶ್ರವಣ ಸಾಧನಗಳನ್ನು ಅಳವಡಿಸುವ ಮೂಲಕ ಅಲ್ಪ ಸ್ವಲ್ಪ ಕೇಳಿಸುವಂತೆ ಮಾಡಬಹುದಾಗಿದೆ. ಕಿವುಡುತನಕ್ಕೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರುಪಾಯಿ ಬರಿಸಬೇಕಾಗಿತ್ತು. ಇದು ಬಡವರಿಗೆ ಅಸಾಧ್ಯ. ಹೀಗಾಗಿ, ಸರ್ಕಾರದ ವತಿಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ನಾವು ಒಂದು ವರ್ಷದಲ್ಲಿ ಶ್ರವಣ ದೋಷಕ್ಕೆ 353 ಶಸ್ತ್ರಚಿಕಿತ್ಸೆ ಮಾಡಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯದಲ್ಲಿ 27 ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ವಾಕ್ ಮತ್ತು ಶ್ರವಣ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಶಸ್ತ್ರಚಿಕಿತ್ಸೆಗೆ ಮಗುವನ್ನು ಒಳಪಡಿಸಿ ಶ್ರವಣ ಸಾಧನ ಅಳವಡಿಸಿದ ನಂತರ ಅದನ್ನು ಒಂದೆರಡು ವರ್ಷ ವೀಕ್ಷಣೆ ಮಾಡಬೇಕು. ಕಿವಿ ಕೇಳಿಸದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಇಂತಹ ಮಗುವನ್ನು ವಿಶೇಷ ಶಾಲೆಗೆ ಸೇರಿಸಿ ಶಿಕ್ಷಣ ನೀಡಬೇಕು. ಇಂತಹ ಮಗುವಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕಿವಿ ಕೇಳಿಸುವಂತೆ ಮಾಡಿದರೆ ಆ ಮಗುವು ಸಾಮಾನ್ಯ ಮಕ್ಕಳ ಜೊತೆ ಬೆರೆತು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಶ್ರವಣ ದೋಷ ನಿವಾರಣೆಗೆ ವಿಶೇಷ ತಜ್ಞರನ್ನು ನೇಮಿಸಲಾಗಿದೆ. ಶ್ರವಣ ದೋಷ ಹೊಂದಿರುವ ಮಕ್ಕಳ ಪೋಷಕರು ಯಾರು ಆತಂಕ ಪಡಬಾರದು. ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಆರೋಗ್ಯ ಇಲಾಖೆಯ ಮೊದಲ ಆದ್ಯತೆಯಾಗಿದೆ ಎಂದರು.

ಶ್ರವಣ ದೋಷ ಬಗ್ಗೆ ಸಂಶೋಧನೆ ಅಗತ್ಯ

ಶಾಸಕ ತನ್ವೀರ್ ಸೇಠ್ ಮಾತನಾಡಿ, ಶ್ರವಣ ದೋಷಕ್ಕೆ ತುತ್ತಾಗಿರುವುದು ಉತ್ತರ ಕರ್ನಾಟಕದ ಮಕ್ಕಳು ಹೆಚ್ಚು. ಈ ಬಗ್ಗೆ ಸಂಶೋಧನೆ ಮಾಡಬೇಕು. ಬುದ್ಧಿಮಾಂಧ್ಯತೆ ಮಕ್ಕಳು ಹೆಚ್ಚುತ್ತಿರುವುದು ನಾವು ನೋಡುತ್ತಿದ್ದೇವೆ. ಈ ಬಗ್ಗೆ ಅಧ್ಯಯನ ಮಾಡಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ನನಗೆ ಧ್ವನಿ ಇಲ್ಲದ ಸಂದರ್ಭದಲ್ಲಿ ನಾನು ಸಹ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಇಂದು ಧ್ವನಿ ಪಡೆದು ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ. ಸರ್ಕಾರ ಆರೋಗ್ಯ ಸುಧಾರಣೆಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ ಸಮಸ್ಯೆ ಇರುವವರು ಸರ್ಕಾರದ ಆರೋಗ್ಯ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ ಫಲಾನುಭವಿ ಮಕ್ಕಳಿಗೆ ಶ್ರವಣ ಸಾಧನಗಳನ್ನು ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಕಿಟ್ ಗಳನ್ನು ವಿತರಿಸಲಾಯಿತು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಕೆ. ಹರೀಶ್ ಗೌಡ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್, ಆಯಿಷ್ ನಿರ್ದೇಶಕಿ ಡಾ.ಎಂ. ಪುಷ್ಪಾವತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ. ಪುಷ್ಪಲತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ, ಶ್ರವಣ ಶಸ್ತ್ರಚಿಕಿತ್ಸಾ ತಜ್ಞ ಡಾ. ಶಂಕರ್ ಮಡಿಕೇರಿ, ಮೈಸೂರು ವಿಭಾಗೀಯ ಸಹ ನಿರ್ದೇಶಕಿ ರಾಜೇಶ್ವರಿದೇವಿ ಮೊದಲಾದವರು ಇದ್ದರು.

----

ಕೋಟ್...

ಕೆಲವು ಮಕ್ಕಳಿಗೆ ಶ್ರವಣ ದೋಷ ಹುಟ್ಟಿನಿಂದ ಬರುತ್ತದೆ. ಕೆಲವು ಮಕ್ಕಳಿಗೆ ಹಲವು ಕಾರಣಗಳಿಂದ ಬರುತ್ತದೆ. ಯಾವುದೇ ಮಕ್ಕಳು ಶ್ರವಣ ದೋಷ ಸಮಸ್ಯೆಗೆ ಒಳಗಾಗಬಾರದು. ಶ್ರವಣ ದೋಷ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಕಿವಿ ಕೇಳುವ ಹಾಗೆ ಮಾಡಬೇಕು.

- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೂಪಾ ಮೌದ್ಗಿಲ್‌ ಮಾನಹಾನಿ ಕೇಸ್‌: ರೋಹಿಣಿ ಅರ್ಜಿ ವಜಾ
ವಿರೋಧದ ನಡುವೆ ಮದುವೆ : ಸಿಟ್ಟಲ್ಲಿ ಅಳಿಯನ ಮನೆಗೆ ಮಾವನಿಂದ ಬೆಂಕಿ!