ಘಾಟಿ ಸುಬ್ರಹ್ಮಣ್ಯಕ್ಕೆ ಆರೋಗ್ಯ ಜಾಗೃತಿಗಾಗಿ ಪಾದಯಾತ್ರೆ

KannadaprabhaNewsNetwork |  
Published : Dec 16, 2025, 01:15 AM IST
ದೊಡ್ಡಬಳ್ಳಾಪುರದ ನಾಗದಳದ ನೇತೃತ್ವದಲ್ಲಿ ಘಾಟಿ ಕ್ಷೇತ್ರಕ್ಕೆ ನಡೆದ 30ನೇ ವರ್ಷದ ಪಾದಯಾತ್ರೆಯಲ್ಲಿ ಹಲವು ಪಾದಯಾತ್ರಿಗಳು ಭಾಗವಹಿಸಿದ್ದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಅಂಗವಾಗಿ, ಬ್ರಹ್ಮರಥೋತ್ಸವಕ್ಕೆ ಮುನ್ನ ಪ್ರತಿವರ್ಷ ಇಲ್ಲಿನ ನಾಗದಳದಿಂದ ನಡೆಯುವ ಆರೋಗ್ಯ ಜಾಗೃತಿಗಾಗಿ ಸ್ವಯಂಪ್ರೇರಿತ ಪಾದಯಾತ್ರೆ 30ನೇ ವರ್ಷವೂ ಯಶಸ್ವಿಯಾಗಿ ಸಂಪನ್ನಗೊಂಡಿತು.

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಅಂಗವಾಗಿ, ಬ್ರಹ್ಮರಥೋತ್ಸವಕ್ಕೆ ಮುನ್ನ ಪ್ರತಿವರ್ಷ ಇಲ್ಲಿನ ನಾಗದಳದಿಂದ ನಡೆಯುವ ಆರೋಗ್ಯ ಜಾಗೃತಿಗಾಗಿ ಸ್ವಯಂಪ್ರೇರಿತ ಪಾದಯಾತ್ರೆ 30ನೇ ವರ್ಷವೂ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಿತಿಯ ಪಾದಯಾತ್ರಿಗಳು ಅತ್ಯುತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಸರ್ಕಾರಿ ಶಾಲೆ ಬಳಿಯಿಂದ ಆರಂಭವಾದ ಪಾದಯಾತ್ರೆ ಪ್ರವಾಸಿ ಮಂದಿರ ವೃತ್ತ, ಕಂಟನಕುಂಟೆ, ವಡ್ಡರಹಳ್ಳಿ, ಹಾಡೋನಹಳ್ಳಿ, ಪಾಲ್ ಪಾಲ್ ದಿನ್ನೆ ಮಾರ್ಗವಾಗಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ತಲುಪಿತು. ನೂರಕ್ಕೂ ಹೆಚ್ಚು ಪಾದಯಾತ್ರಿಗಳಿದ್ದ ತಂಡದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರೂ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರತಿವರ್ಷದಂತೆ ಪಾದಯಾತ್ರಿಗಳಿಗಾಗಿ ಘಾಟಿ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಾಗದಳ ಸಂಚಾಲಕ ಸಿ.ನಟರಾಜ್, ಆಧುನಿಕ ಜೀವನಶೈಲಿಯಲ್ಲಿ ದೈಹಿಕ ಚಲನೆಯ ಕೊರತೆಯಿಂದಲೇ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಮೋಟಾರು ವಾಹನಗಳ ಬಳಕೆಯಿಂದ ಸಹಜ ವ್ಯಾಯಾಮಗಳಿಂದ ಜನರು ವಂಚಿತರಾಗುತ್ತಿದ್ದಾರೆ. ಜಂಕ್‌ ಫುಡ್‌ ಗಳ ಅತಿಯಾದ ಸೇವನೆ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತಿದೆ. ಜಿಮ್‌ ಗೆ ಹೋಗುವ ಯುವಕರಲ್ಲೂ ಬಹುಪಾಲು ಕಾಲಿನ ವ್ಯಾಯಾಮಗಳಿಗೆ ಮಹತ್ವ ಕೊಡದೆ ತೋರಿಕೆ ವ್ಯಾಯಾಮಗಳನ್ನಷ್ಟೇ ಹೆಚ್ಚಾಗಿ ಮಾಡುತ್ತಿರುವುದು ಕೂಡ ದೇಹಕ್ಕೆ ಹಾನಿಯೊದಗಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಡಿಗೆಯ ಮಹತ್ವವನ್ನು ಅರಿತಿದ್ದ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ದೇವಾಲಯಗಳಿಗೆ ಪಾದಯಾತ್ರೆಯಲ್ಲಿ ಹೋಗುವುದು ಶ್ರೇಷ್ಠವೆಂದು ಸಾರಿ ಹೇಳಿದ್ದರು. ಆರೋಗ್ಯ ಕಾಪಾಡಿಕೊಳ್ಳಲು ಕಾಲ್ನಡಿಗೆ ದಿವ್ಯಔಷಧಿಯೆಂದು ಮನಗಂಡಿದ್ದ ಜನ ದೇವರ ಹೆಸರಲ್ಲಿ ದೂರದ ಪವಿತ್ರ ಕ್ಷೇತ್ರಗಳಿಗೆ ನಡೆದೇ ಹೋಗುತ್ತಿದ್ದರು. ದೇವರ ದರ್ಶನದ ನೆಪದಲ್ಲಾದರೂ ಜನರು ನಡಿಗೆಯ ಮಹತ್ವವನ್ನು ಅರಿಯುವಂತಾಗಲಿ ಎಂಬ ಆಶಯದಿಂದ ಜನ ಜಾಗೃತಿಗಾಗಿ ಪಾದಯಾತ್ರೆಯನ್ನು ಪ್ರತಿವರ್ಷವೂ ನಮ್ಮ ನಾಗದಳದಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ನಾಗದಳದ ಹಿರಿಯ ಸದಸ್ಯ ಎ.ವಿ.ರಘು ಮಾತನಾಡಿ, ತಾವು ಪ್ರತಿದಿನ ತಪ್ಪದೆ ನಿಯಮಿತ ನಡಿಗೆಯ ಹವ್ಯಾಸವನ್ನು ಚಿಕ್ಕಂದಿನಿಂದಲೂ ಪಾಲಿಸಿಕೊಂಡು ಬಂದಿರುವುದರಿಂದ ಯಾವುದೇ ಕಾಯಿಲೆ ಕಸಾಲೆಗಳು ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಪ್ರತಿಯೊಬ್ಬರು ಪ್ರತಿನಿತ್ಯ ಬೆಳಗ್ಗೆ ಅಥವಾ ಸಂಜೆ ನಡಿಗೆಯನ್ನು ರೂಢಿಸಿಕೊಳ್ಳಬೇಕು. ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಕನಿಷ್ಠ ಸಮೀಪದ ದೇವಸ್ಥಾನಗಳಿಗಾದರೂ ಈ ರೀತಿಯ ಪಾದಯಾತ್ರೆಯಲ್ಲಿ ಹೋದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾಗದಳದ ‌ಎ.ವೆಂಕಟೇಶ್, ನುನ್ನ ನಾಗರಾಜ್, ನಂಜುಂಡಮೂರ್ತಿ, ರಾಘವೇಂದ್ರ, ವೆಂಕಟೇಶ್‌, ನರಸಿಂಹ, ಡಿ.ಶ್ರೀಕಾಂತ್‌, ಗೋಪಿ ಮತ್ತಿತರರು ಸೇರಿದಂತೆ ಅನೇಕ ಪಾದಯಾತ್ರಿಗಳು ಭಾಗವಹಿಸಿದ್ದರು.

15ಕೆಡಿಬಿಪಿ1-

ದೊಡ್ಡಬಳ್ಳಾಪುರದ ನಾಗದಳದ ನೇತೃತ್ವದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ 30ನೇ ವರ್ಷದ ಪಾದಯಾತ್ರೆಯಲ್ಲಿ ಹಲವು ಪಾದಯಾತ್ರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!