ಮುಂಡರಗಿ: ಯೋಗದಿಂದ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಜ. ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ತಾಲೂಕು ಆಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಷ್ ಇಲಾಖೆ, ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸ ಸಮಿತಿ, ಪತಂಜಲಿ ಯೋಗ ಸಮಿತಿ, ಅನ್ಮೋಲ್ ಯೋಗ ಹಾಗೂ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರ ಮೊದಲಾದ ಯೋಗ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯೋಗ, ಪ್ರಾಣಾಯಾಮದಿಂದ ಏಕಾಗ್ರತೆ ಬರುತ್ತದೆ. ದುಡ್ಡಿನಿಂದ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಮನುಷ್ಯ ಆರೋಗ್ಯ ಕೆಡುವ ವರೆಗೂ ಆರೋಗ್ಯದ ಬಗ್ಗೆ ವಿಚಾರ ಮಾಡುವುದಿಲ್ಲ. ಆರೋಗ್ಯ ರಕ್ಷಣೆಗೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ರೋಗವನ್ನು ದೂರ ಮಾಡುವುದು ಔಷಧ. ಆದರೆ ರೋಗವೇ ಬರದಂತೆ ಕಾಯುವುದು ಯೋಗ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯವಾಗಿರಲು ನಿತ್ಯ ಒಂದಿಷ್ಟು ಸಮಯವನ್ನು ನಿಗದಿ ಮಾಡಿಕೊಂಡು ಯೋಗಾಭ್ಯಾಸ ಮಾಡಬೇಕು ಎಂದರು.ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶಿ ಮಾತನಾಡಿ, ಮಕ್ಕಳು ಸದೃಢವಾಗಿರಬೇಕಾದರೆ ಆರೋಗ್ಯ ಅತಿ ಅವಶ್ಯ. ಅಂತಹ ರೋಗ ನಿರೋಧಕ ಶಕ್ತಿಯನ್ನು ಹೊಂದುವ ಆರೋಗ್ಯವನ್ನು ಪಡೆದುಕೊಳ್ಳಬೇಕಾದರೆ ನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ, ವಾಯುವಿಹಾರ ಅವಶ್ಯ. ರೋಗ ಬಂದಾಗ ಚಿಕಿತ್ಸೆಗಾಗಿ ಪರದಾಡುವ ಮೊದಲೇ ರೋಗ ಬರದಂತೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.
ಅನ್ಮೋಲ್ ಯೋಗ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರದ ನಿರ್ದೇಶಕಿ ಡಾ. ಮಂಗಳಾ ಇಟಗಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶ್ರೀ ಚನ್ನಬಸವ ದೇವರು, ಡಾ. ಬಿ.ಜಿ. ಜವಳಿ, ಮಂಜುನಾಥ ಅಳವಂಡಿ, ವೀಣಾ ಪಾಟೀಲ, ಮಂಜುನಾಥ ಇಟಗಿ, ಡಾ. ಚಂದ್ರಕಾಂತ ಇಟಗಿ, ಕಾಶೀನಾಥ ಶಿರಬಡಗಿ ಉಪಸ್ಥಿತರಿದ್ದರು.ಮಂಜುಳಾ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ವೀಣಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.