ಆರೋಗ್ಯ ತಪಾಸಣಾ ಶಿಬಿರಗಳು ಗ್ರಾಮೀಣರಿಗೆ ವರದಾನ

KannadaprabhaNewsNetwork |  
Published : Nov 24, 2026, 12:45 AM IST
ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಸರ್ಕಾರಿ ಶಾಲಾ ಆವರಣದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಮಿತಿಯ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾಗಡಿ: ಕಳೆದ ಬಾರಿ ಕುದೂರಿನಲ್ಲಿ ನಡೆಸಿದ ಆರೋಗ್ಯ ಶಿಬಿರದಲ್ಲಿ ಗುರುತಿಸಿದ್ದ ಬಹುತೇಕ ರೋಗಿಗಳಿಗೆ ಈಗಾಗಲೇ ಯಶಸ್ವಿ ಶಸ್ತ್ರಚಿಕಿತ್ಸೆ ನೆಡೆಸಲಾಗಿದೆ. ಕೇವಲ ಒಂದೆರಡು ಹೃದಯ ಸಂಬಂಧಿ ಹಾಗೂ ಇತರೆ ಶಸ್ತ್ರಚಿಕಿತ್ಸೆಗಳು ಮಾತ್ರ ಬಾಕಿಯಿದ್ದು, ಮುಂದಿನ ವಾರ ಅವುಗಳೂ ಪೂರ್ಣಗೊಳ್ಳಲಿವೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಹೇಳಿದರು

ಮಾಗಡಿ: ಕಳೆದ ಬಾರಿ ಕುದೂರಿನಲ್ಲಿ ನಡೆಸಿದ ಆರೋಗ್ಯ ಶಿಬಿರದಲ್ಲಿ ಗುರುತಿಸಿದ್ದ ಬಹುತೇಕ ರೋಗಿಗಳಿಗೆ ಈಗಾಗಲೇ ಯಶಸ್ವಿ ಶಸ್ತ್ರಚಿಕಿತ್ಸೆ ನೆಡೆಸಲಾಗಿದೆ. ಕೇವಲ ಒಂದೆರಡು ಹೃದಯ ಸಂಬಂಧಿ ಹಾಗೂ ಇತರೆ ಶಸ್ತ್ರಚಿಕಿತ್ಸೆಗಳು ಮಾತ್ರ ಬಾಕಿಯಿದ್ದು, ಮುಂದಿನ ವಾರ ಅವುಗಳೂ ಪೂರ್ಣಗೊಳ್ಳಲಿವೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ತಿಪ್ಪಸಂದ್ರದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಬಿರಕ್ಕೆ ಬರುವ ರೋಗಿಗಳನ್ನು ತಮ್ಮ ಸ್ವಂತ ವಾಹನಗಳಲ್ಲಿ ಕರೆದೊಯ್ದು, ಚಿಕಿತ್ಸೆ ಕೊಡಿಸಿ, ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಯಾವುದೇ ಹಣ ಪಡೆಯದೆ, ರೋಗಿಗಳಿಗೆ ಯಾವುದೇ ಮಾನಸಿಕ ಅಥವಾ ದೈಹಿಕ ಹಿಂಸೆಯಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಮುಂದಿನ ಉಚಿತ ಆರೋಗ್ಯ ತಪಾಸಣೆ ಶಿಬಿರ ನ. 29ರಂದು ಮಾಗಡಿಯಲ್ಲಿ ನಡೆಯಲಿದ್ದು, ಬಳಿಕ ತಾಲೂಕಿನ ಇತರೆ ಹೋಬಳಿಗಳಲ್ಲಿಯೂ ಶಿಬಿರಗಳನ್ನು ಆಯೋಜಿಸಲಾಗುವುದು. ಕಳೆದ 22 ವರ್ಷಗಳಿಂದಲೂ ಈ ಸೇವಾ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾಗಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವಾಹನ ನಿಲುಗಡೆಗೆ ಅಥವಾ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಕೊರತೆಯಿದೆ. ಈ ಕಾರಣಕ್ಕಾಗಿ ಹೋಬಳಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆಯೇ ಹೊರತು, ಯಾರೂ ಕೆಂಪೇಗೌಡರ ಕಾರ್ಯಕ್ರಮಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ಮನೆಮನೆಗೆ ತೆರಳಿ ಕೆಂಪೇಗೌಡ ಜಯಂತ್ಯುತ್ಸವ ಹಾಗೂ ಆರೋಗ್ಯ ಶಿಬಿರಗಳನ್ನು ನಡೆಸುವುದಾಗಿ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

ತಾಲೂಕಿನಲ್ಲಿ ನಿಮ್ಮನ್ನು ಪ್ರೀತಿಸುವ ದೊಡ್ಡ ಅಭಿಮಾನಿ ವರ್ಗವಿದ್ದು, ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾವುದೇ ಕೆಟ್ಟ ಕೆಲಸ ಮಾಡಿಲ್ಲ, ಯಾರಿಗೂ ತೊಂದರೆ ಕೊಟ್ಟಿಲ್ಲ. ಹಾಗಾಗಿ ನಮ್ಮನ್ನು ಪ್ರೀತಿಸುವ ಜನರಿದ್ದಾರೆ. ಆದರೆ ಆರೋಗ್ಯ ಶಿಬಿರದಂತಹ ಧರ್ಮ ಕಾರ್ಯದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಕಾಲ ಬಂದಾಗ ಏನಾಗಬೇಕೋ ಅದು ನಡೆಯುತ್ತದೆ. ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ಸಪ್ತಗಿರಿ ವೈದ್ಯಕೀಯ ಕಾಲೇಜು ಮತ್ತು ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ, ರೋಟರಿ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವಿವಿಧ ಕಾಯಿಲೆಗಳ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಅಗತ್ಯ ಇದ್ದವರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದು, ತಿಪ್ಪಸಂದ್ರ ಹೋಬಳಿಯ ನೂರಾರು ಸಾರ್ವಜನಿಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.

ಸಭೆಯಲ್ಲಿ ಡಾ.ಶಾಮ್ ಸುಂದರ್, ತಾಪಂ ಮಾಜಿ ಸದಸ್ಯ ಸಿ.ಜಯರಾಂ, ಸುಹೇನ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಆನಂದ್, ದೊಡ್ಡಿ ಗೋಪಿ, ಗೌಡರಪಾಳ್ಯ ಗಂಗಾಧರ್, ಎನ್ಇಎಸ್ ಆನಂದ್, ಮೋಹನ್ ಮತ್ತಿತರರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ತಿಪ್ಪಸಂದ್ರ ಸರ್ಕಾರಿ ಶಾಲಾ ಆವರಣದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿತೆಗಳು ಜೀವಪರ ಸಂದೇಶ ಸಾರುವಂತಿರಲಿ
ಶುಂಠಿ ಕಣ ಬಂದ್ ಮಾಡಿದರೆ ಶಾಸಕರು ಖರೀದಿಸ್ತಾರಾ?