ಪ್ರತಿ ತಿಂಗಳು 9ನೇ ತಾರೀಕು ಗರ್ಭಿಣಿಯರ ಆರೋಗ್ಯ ತಪಾಸಣೆ

KannadaprabhaNewsNetwork |  
Published : Nov 18, 2024, 12:00 AM IST
ಬಳ್ಳಾರಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರು, ವೈದ್ಯಾಧಿಕಾರಿಗಳು, ವಿಮ್ಸ್‌ ಪ್ರಸೂತಿ ತಜ್ಞರಿಗೆ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕುರಿತ ವಿಶೇಷ ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ತಾಯಿ ಆರೋಗ್ಯ ನಿರ್ದೇಶನಾಲಯದ ಉಪನಿರ್ದೇಶಕ ಡಾ.ರಾಜ್ ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಗರ್ಭಿಣಿ ಎಂದು ತಿಳಿದ ನಂತರ ಪ್ರತಿ ಮಹಿಳೆಯು ಸುರಕ್ಷಿತ ಹೆರಿಗೆ ಹಾಗೂ ಮುದ್ದಾದ ಮಗುವಿನ ಜನನದ ಬಯಕೆಯಾಗಿರುತ್ತದೆ.

ಬಳ್ಳಾರಿ: ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಪ್ರತಿ ತಿಂಗಳು 9ನೇ ತಾರೀಖಿನಂದು ಗರ್ಭಿಣಿಯರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಖಾಸಗಿ ಕ್ಷೇತ್ರದ ತಜ್ಞ ವೈದ್ಯರು ಆ ದಿನದಂದು ತಪಾಸಣೆಗೆ ಆಗಮಿಸಿ ಗರ್ಭಿಣಿಯರ ಆರೋಗ್ಯದ ಕಾಳಜಿಗೆ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ತಾಯಿ ಆರೋಗ್ಯ ನಿರ್ದೇಶನಾಲಯದ ಉಪನಿರ್ದೇಶಕ ಡಾ.ರಾಜ್ ಕುಮಾರ್ ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರಿಗೆ, ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಮತ್ತು ವಿಮ್ಸ್‌ ಪ್ರಸೂತಿ ತಜ್ಞರಿಗೆ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಕುರಿತು ನಗರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗರ್ಭಿಣಿ ಎಂದು ತಿಳಿದ ನಂತರ ಪ್ರತಿ ಮಹಿಳೆಯು ಸುರಕ್ಷಿತ ಹೆರಿಗೆ ಹಾಗೂ ಮುದ್ದಾದ ಮಗುವಿನ ಜನನದ ಬಯಕೆಯಾಗಿರುತ್ತದೆ. ಪ್ರಸ್ತುತ ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರ ಮೂಲಕ ನಿರಂತರವಾಗಿ ಆರೋಗ್ಯ ತಪಾಸಣೆ ಕೈಗೊಳ್ಳುವ ಮತ್ತು ಆರೋಗ್ಯದಲ್ಲಿ ಕಂಡುಬರಬಹುದಾದ ನ್ಯೂನತೆಗಳನ್ನು ಚಿಕಿತ್ಸೆ ಮೂಲಕ ಸರಿಪಡಿಸಿ ಸುರಕ್ಷಿತ ಹೆರಿಗೆಗೆ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಕ್ಷೇತ್ರದ ತಜ್ಞ ವೈದ್ಯರು ಸಹ ಕೈಜೋಡಿಸಬೇಕು ಎಂದರು.

ಪ್ರತಿ ಮಹಿಳೆಯ ಗೌರವಯುತ ಹೆರಿಗೆಗಾಗಿ 2016ರಲ್ಲಿ ಭಾರತ ಸರ್ಕಾರ ಈ ಅಭಿಯಾನವನ್ನು ಆರಂಭಿಸಿದ್ದು, ಪ್ರತಿ ತಿಂಗಳು 9ನೇ ತಾರೀಖಿನಂದು 2 ಮತ್ತು 3ನೇ ತ್ರೈಮಾಸಿಕ ಅವಧಿಯಲ್ಲಿರುವ ಗರ್ಭಿಣಿಯರ ತೂಕ, ಎತ್ತರ, ರಕ್ತ ಪರೀಕ್ಷೆ, ಹೆಚ್‌ಐವಿ ಪರೀಕ್ಷೆಗಳನ್ನು ಕೈಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಎಂದರು.

ವಿವಾಹದ ನಂತರ ತಡವಾಗಿ ಗರ್ಭಿಣಿಯಾದವರು, ಚೊಚ್ಚಲ ಹೆರಿಗೆ, ಗಿಡ್ಡ ಇರುವವರು, ರಕ್ತದೊತ್ತಡ ಹೆಚ್ಚು ಇರುವವರು, ಹಿಂದಿನ ಹೆರಿಗೆ ಶಸ್ತ್ರಚಿಕಿತ್ಸೆ ಆದಲ್ಲಿ ಇತರೆ ಯಾವುದಾದರು ಗಂಭೀರ ಕಾಯಿಲೆ ಹೊಂದಿದಲ್ಲಿ ಅಂತಹವರನ್ನು ಅದೇ ತಿಂಗಳು 24 ರಂದು ಅದೇ ತಿಂಗಳು ಪುನಃ ತಪಾಸಣೆ ಮಾಡಲಾಗುವುದು. ಖಾಸಗಿ ಕ್ಷೇತ್ರ ಪ್ರಸೂತಿ ತಜ್ಞರು ಆ ದಿನಗಳಂದು ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಆಗಮಿಸಿ ತಪಾಸಣೆಗೆ ಕೈ ಜೋಡಿಸಲು ಅವಕಾಶವಿರುವುದರಿಂದ ಇದಕ್ಕಾಗಿ ಜಾಲತಾಣದ ಮೂಲಕ ನೋಂದಣಿ ಮಾಡಿಸಿಕೊಂಡು ತಪಾಸಣೆಗೆ ಬೆಂಬಲ ನೀಡಲು ಕೋರಿದರು.

ಕಾರ್ಯಾಗಾರದಲ್ಲಿ ಸುರಕ್ಷಿತ ಮಾತೃತ್ವ, ಆಶ್ವಾಸನ್, ಗರ್ಭಿಣಿಯರಲ್ಲಿ ಕಂಡುಬರುವ ರಕ್ತದೊತ್ತಡ ಹಾಗೂ ಗುಣಮಟ್ಟದ ಹೆರಿಗೆ ಕೊಠಡಿ ಮಹತ್ವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು, ವಿಮ್ಸ್ ಪ್ರಸೂತಿ ವಿಭಾಗದ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಪಿಜಿಷಿಯನ್ ಡಾ.ಶ್ರೀಧರ್ ಸೇರಿದಂತೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರು ಹಾಗೂ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!