- ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗೇಂದ್ರಪ್ಪ ಚಾಲನೆ । “ವೈವಿಧ್ಯತೆಯಲ್ಲಿ ಏಕತೆ” ಧ್ಯೇಯವಾಕ್ಯದಡಿ ಕ್ಯಾನ್ಸರ್ ಅರಿವು ಜಾಗೃತಿ ಜಾಥಾ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡದೇ ಇರುವುದು, ಕಲುಷಿತ ವಾತಾವರಣ, ನಿತ್ಯ ಬಳಸುವ ವಾಹನಗಳು ಹೊರ ಸೂಸುವ ವಿವಿಧ ಬಗೆಯ ಗ್ಯಾಸ್ ಮೂಲಕವೂ ಕ್ಯಾನ್ಸರ್ ಬರುವ ಸಾಧ್ಯತೆಗಳು ಇದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ, ಸನ್ ಶೈನ್ ಪುರವಂತರ್ ಆಸ್ಪತ್ರೆ ಮುಖ್ಯಸ್ಥ ಡಾ.ಬಿನಯಕುಮಾರ ಸಿಂಗ್ ಹೇಳಿದರು.ಬುಧವಾರ ಬೆಳಿಗ್ಗೆ ನಗರದ ಕುಂದವಾಡ ಕೆರೆ ಆವರಣದಿಂದ ಗುಂಡಿ ಸರ್ಕಲ್‌ವರೆಗೆ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ವೈವಿಧ್ಯತೆಯಲ್ಲಿ ಏಕತೆ” ಧ್ಯೇಯವಾಕ್ಯದಡಿ ಕ್ಯಾನ್ಸರ್ ಅರಿವು ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿಸ್ಟ್ ಡಾ.ಅಜಯ್ ಮಾತನಾಡಿ, ಯಾವುದೇ ಕಾಯಿಲೆಗಳಿಗೆ ಆರಂಭದಲ್ಲಿಯೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದರೆ ರೋಗ ನಿವಾರಣೆ ಸಾಧ್ಯ. ಕೆಲವರು 10-20 ವರ್ಷಗಳಿಂದ ಕ್ಯಾನ್ಸರ್ ಎದುರಿಸುತ್ತಿದ್ದಾರೆ. ಆರಂಭದ ಹಂತದಲ್ಲಿಯೇ ಪರೀಕ್ಷೆ ಮಾಡಿಸಿದಲ್ಲಿ ಗುಣಪಡಿಸಲು ಸಾಧ್ಯ. ಅತ್ಯುತ್ತಮವಾದ ರಾಡಿಕ್ಯಾಕ್ಟ್ ಟೊಮೋಥೆರಪಿ ಚಿಕಿತ್ಸೆ ಲಭ್ಯವಿದೆ. ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ. ಈಗ ಕ್ಯಾನ್ಸರ್ ಬಾರದೇ ಇರುವಂತೆ ತಡೆಗಟ್ಟಲು ಮ್ಯಾಮೋಗ್ರಾಮ್ ಮೂಲಕ ಕಂಡುಹಿಡಿಯಬಹುದು. ಇವು ಬಹಳ ಸರಳ ಪರೀಕ್ಷೆ, ಬೇಗ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ನಮ್ಮ ವಿಶ್ವಾರಾಧ್ಯ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ಬಾರದೇ ಇರಲು ಲಸಿಕೆಯನ್ನು ರಿಯಾಯಿತಿ ದರದಲ್ಲಿ ಈ ತಿಂಗಳು ಕೊಡುತ್ತೇವೆ. 10 ರಿಂದ 21 ವರ್ಷದೊಳಗಿನವರು ಈ ಲಸಿಕೆ ಪಡೆಯಬಹುದು. ಇದರಿಂದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಹುದು. ಕ್ಯಾನ್ಸರ್ ಪರೀಕ್ಷೆಗೆ ಮೊದಲು ಮಂಗಳೂರು, ಬೆಂಗಳೂರು, ಶಿವಮೊಗ್ಗಕ್ಕೆ ತೆರಳುತ್ತಿದ್ದರು. ಆದರೆ, ಈಗ ನಮ್ಮ ದಾವಣಗೆರೆಯಲ್ಲಿಯೇ ಕಿಮಿಯೋ ಥೆರಪಿ ರೇಡಿಯೇಷನ್, ಸರ್ಜರಿ ಎಲ್ಲ ರೀತಿಯ ಸವಲತ್ತುಗಳಿವೆ. ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದರು.
ಕುಂದವಾಡ ಕೆರೆ ಅಂಗಳದಿಂದ ಹೊರಟ ಜಾಥಾಗೆ ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಚಾಲನೆ ನೀಡಿ ಶುಭ ಕೋರಿದರು. ಡಾ.ವಿಘ್ನೇಶ, ಡಾ.ರೇವಂತ್ ಸೇರಿದಂತೆ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು, ಸಿಬ್ಬಂದಿ, ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷ ಡಾ.ಹಾಲಸ್ವಾಮಿ ಕಂಬಾಳಿಮಠ, ಪದಾಧಿಕಾರಿಗಳು, ರಾಘವೇಂದ್ರ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.- - -
- ಡಾ.ಅಮಿತ್, ವೈದ್ಯ, ದಾವಣಗೆರೆ.
- - --4ಕೆಡಿವಿಜಿ37, 38.ಜೆಪಿಜಿ: