ಬಳ್ಳಾರಿ: ಕಲಬೆರಕೆ ರಹಿತ ಮತ್ತು ಆರೋಗ್ಯವಂತರಾಗಿರಲು ಸಿರಿಧಾನ್ಯದಿಂದ ತಯಾರಿಸಿದ ಆಹಾರವನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯವಂತರಾಗಿ ಬದುಕಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ಸಿರಿಧಾನ್ಯ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ರಾಸಾಯನಿಕ ಗೊಬ್ಬರ ಇಲ್ಲದೇ ಬೆಳೆಯುವ ಬೆಳೆ ಅಂದರೆ ಅವು ಸಿರಿಧಾನ್ಯಗಳು. ಹೀಗಾಗಿ ಮನೆಗಳಲ್ಲಿ ಹೆಚ್ಚಾಗಿ ಸಿರಿಧಾನ್ಯಗಳನ್ನು ಉಪಯೋಗಿಸಬೇಕು ಎಂದರು.
ಜಂಕ್‌ಫುಡ್ ಉಪಯೋಗಿಸುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ಕೆಡುತ್ತಲಿದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಬಳಕೆಯಿಂದಾಗುವ ಮಹತ್ವ ಕುರಿತು ಜಾಗೃತಿ ಹೆಚ್ಚಿದ್ದು, ಸಿರಿಧಾನ್ಯ ಬಳಕೆಯೂ ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದರು.ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಮಾತನಾಡಿ, ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಬಗೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯ ಪಾಕಸ್ಪರ್ಧೆ, ಸಿರಿಧಾನ್ಯ ಜಾಥಾ ಹಾಗೂ ಇದೇ ಜನವರಿ 23ರಿಂದ 25 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರಾಷ್ಟ್ರೀಯ ವಾಣಿಜ್ಯ ಮೇಳ, ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದ್ದು, ನಾವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳೋಣ ಎಂದರು.
ಇದಕ್ಕೂ ಮುನ್ನ ಸಿರಿಧಾನ್ಯ ನಡಿಗೆ ಜಾಥಾಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಗಾದೆಪ್ಪ, ರೈತ ಮುಖಂಡ ಪುರುಷೋತ್ತಮ ಗೌಡ, ಐನಾಥ ರೆಡ್ಡಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಚಾಲನೆ ನೀಡಿದರು.
ಜಾಥಾ ನಡಿಗೆ ಉದ್ದಕ್ಕೂ ಸಿರಿಧ್ಯಾನ ಸೇವಿಸಿ ಅನಾರೋಗ್ಯ ದೂರವಿರಿಸಿ, ನವಣೆ ನಮ್ಮ ಆರೋಗ್ಯದ ನಿರ್ವಹಣೆ, ಜೋಳ ಇಲ್ಲದ ಊಟ ಬರೀ ಗೋಳಾಟ, ಸಿರಿಧಾನ್ಯ ಬಳಸು ಬಳ್ಳೆಯ ಜೀವನ ನಡೆಸು, ರಾಗಿ ಬಳಸಿ ಆರೋಗ್ಯ ಉಳಿಸಿ, ಬರಗು ಇದ್ದರೆ ಬರಗಾಲದಲ್ಲೂ ಬದುಕು ಎನ್ನುವ ಫಲಕಗಳನ್ನು ಪ್ರರ್ದಶಿಸಲಾಯಿತು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಕೃಷಿ ಉಪನಿರ್ದೇಶಕ ಮಂಜುನಾಥ ಎಸ್.ಎನ್., ಸಹಾಯಕ ಕೃಷಿ ನಿರ್ದೇಶಕ ದಯಾನಂದ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರು, ಕೃಷಿ ಅಧಿಕಾರಿಗಳು ಹಾಗೂ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.