ಕನ್ನಡಪ್ರಭ ವಾರ್ತೆ ತಿಪಟೂರು
ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ವೆಚ್ಚಗಳು ಬಹು ದುಬಾರಿಯಾಗಿದ್ದು, ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಯೋಜನಾಧಿಕಾರಿ ಕೆ. ಸುರೇಶ್ ತಿಳಿಸಿದರು.ತಾಲೂಕಿನ ಬಿಳಿಗೆರೆಯ ಶ್ರೀಮದ್ ಬಳ್ಳೆಕಟ್ಟೆ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕುಮಾರ್ ಆಸ್ಪತ್ರೆ, ಮಹಾವೀರ್ ಜೈನ್ ಆಸ್ಪತ್ರೆ, ಸುನಂದ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ನಾವು ಸಂಪತ್ತನ್ನು ಸಂಪಾದಿಸಿದರೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ. ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಅನೇಕ ಸಂಘ ಸಂಸ್ಥೆಗಳು, ಆಸ್ಪತ್ರೆಗಳು ಸಹಕಾರ ನೀಡುತ್ತಿವೆ. ಅದೇ ರೀತಿ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯು ಶಿಬಿರ ಹಮ್ಮಿಕೊಂಡಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರತಾಪ್‌ಸಿಂಗ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಟ್ಟದ ಕಾರ್ಯಕ್ರಮಗಳಿಲ್ಲ. ಆರೋಗ್ಯ, ಸ್ವಚ್ಛತೆ, ಕಾನೂನು ಅರಿವು, ಸ್ವ ಉದ್ಯೋಗ, ಶೈಕ್ಷಣಿಕ, ಆರ್ಥಿಕ ಹೀಗೆ ಹಲವಾರು ಕಾರ್ಯಕ್ರಮ ಆಯೋಜಿಸಿ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದರು. ಮಹಿಳಾ ಜ್ಞಾನ ವಿಕಾಸ, ಮಾಸಾಶನ, ವಾತ್ಸಲ್ಯ ಮನೆ, ಸುಜ್ಞಾನನಿಧಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಹವೀರ ಜೈನ್ ಆಸ್ಪತ್ರೆಯ ಮಂಜುನಾಥ್, ಸುನಂದ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ನವೀನ್, ಗ್ರಾಪಂ ಅಧ್ಯಕ್ಷೆ ಲತಾ ಕಲ್ಯಾಣ್‌ಕುಮಾರ್, ವಲಯ ಮೇಲ್ವಿಚಾರಕಿ ಚೂಡಾರತ್ನ, ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ, ಸೇವಾ ಪ್ರತಿನಿಧಿಗಳು, ವಿಎಲ್‌ಇಗಳು ಭಾಗವಹಿಸಿದ್ದರು. ಶಿಬಿರದಲ್ಲಿ ವಲಯದ ಕೃಷಿ ಹೊನ್ನಮ್ಮ ದೇವಿ ಹಾಗೂ ಜ್ಞಾನ ಜ್ಯೋತಿ ಕೇಂದ್ರದ ೧೫೦ಕ್ಕೂ ಹೆಚ್ಚು ಸದಸ್ಯರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.