ಮನುಷ್ಯನಿಗೆ ಸಂಪತ್ತಿಗಿಂತ ಆರೋಗ್ಯ ಮುಖ್ಯ

KannadaprabhaNewsNetwork |  
Published : Jun 23, 2025, 12:33 AM IST
ಬೈಲಹೊಂಗಲದಲ್ಲಿ ಮಲಪ್ರಭಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಆಹಾರ, ನೀರು, ನಿದ್ರೆ, ಆರೋಗ್ಯ ಸರಿ ಇದ್ದಾಗ ಮಾತ್ರ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ದಾನಮ್ಮದೇವಿ ದೇವಸ್ಥಾನದ ಹತ್ತಿರ ಮಲಪ್ರಭಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಆಹಾರ, ನೀರು, ನಿದ್ರೆ, ಆರೋಗ್ಯ ಸರಿ ಇದ್ದಾಗ ಮಾತ್ರ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ. ವ್ಯತ್ಯಾಸವಾದರೇ ಆರೋಗ್ಯ ಕ್ಷೀಣವಾಗುತ್ತದೆ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಇದು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಮನುಷ್ಯನಿಗೆ ಸಂಪತ್ತಿಗಿಂತ ಆರೋಗ್ಯ ಮುಖ್ಯವಾಗಿದೆ. ಈ ಆಸ್ಪತ್ರೆ ಅತ್ಯಾಧುನಿಕ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಜನತೆಯ ಎಲ್ಲ ರೀತಿಯ ಆರೋಗ್ಯ ಸಮಸ್ಯೆ ದೂರವಾಗಲಿ ಎಂದು ಹಾರೈಸಿದರು.

ಮುರಗೋಡದ ನೀಲಕಂಠ ಸ್ವಾಮೀಜಿ, ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಹಾಗೂ ಮೌಲಾನಾ ಶೌಕತಅಲಿ ಬಾದಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯಲ್ಲಿ ಆಸ್ಪತ್ರೆಯು ಮಾದರಿಯಾಗಲಿ. ಜನತೆಯ ನಂಬಿಕೆಯನ್ನು ವೈದ್ಯರು ಪ್ರಾಮಾಣಿಕತೆಯಿಂದ ನಿರ್ವಹಿಸಲಿ. ವೈದ್ಯರು ದೇವರ ರೂಪವಾಗಿದ್ದು, ಜನತೆಗೆ ನೆಮ್ಮದಿ ಬದುಕು ನೀಡಲು ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಮಾತನಾಡಿ, ಭವ್ಯವಾದ ಆಸ್ಪತ್ರೆಯ ಮೂಲಕ ನಾಡಿನ ಸೇವೆ ಯುವ ವೈದ್ಯರಿಂದ ಪ್ರಾಮಾಣಿಕವಾಗಿ ನಡೆಯಲಿದೆ. ಚಿಕಿತ್ಸೆ ಜೊತೆಗೆ ಜನತೆ ಅನಾರೋಗ್ಯಕ್ಕೆ ಈಡಾಗದಂತೆ ಜಾಗೃತಿ ಮೂಡಿಸುವ ಕೆಲಸ ಸಕಲ ವೈದ್ಯರಿಂದ ನಡೆಯಬೇಕೆಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಪಟ್ಟಣಕ್ಕೆ ಅವಶ್ಯಕತೆಯಿದ್ದ ಸುಸಜ್ಜಿತ ಆಸ್ಪತ್ರೆ ಪ್ರಾರಂಭವಾಗಿದೆ. ವೈದ್ಯರು ಜನತೆಗೆ ಮಾತು ಕೊಟ್ಟಂತೆ ಪ್ರಾಮಾಣಿಕತೆಯಿಂದ ಕಡಿಮೆ ವೆಚ್ಚದ ಉತ್ತಮ ಸೌಲಭ್ಯ ನೀಡಿ ಜನಾನುರಾಗಿ ವೈದ್ಯರಾಗಿ ಹೊರಹೊಮ್ಮಬೇಕೆಂದರು. ಡಾ.ಮಂಜುನಾಥ ಮುದಕನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದೇ ಸೂರಿನಡಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮತ್ತು ಅತ್ಯಾಧುನಿಕ ಸೌಲಭ್ಯದೊಂದಿಗೆ ಪ್ರಾಮಾಣಿಕವಾಗಿ ಚಿಕಿತ್ಸೆ ನೀಡುವ ಪ್ರಮಾಣ ಮಾಡುವೆವು ಎಂದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಹಿರಿಯ ವೈದ್ಯರಾದ ಡಾ.ಬಿ.ಎಸ್.ಮಹಾಂತಶೆಟ್ಟಿ, ಡಾ.ಎ.ಎನ್.ಬಾಳಿ ಅವರನ್ನು ಸನ್ಮಾನಿಸಲಾಯಿತು. ಅನ್ವಿಷಾ ದೊಡವಾಡ ಭರತನಾಟ್ಯ ಪ್ರದರ್ಶಿಸಿದರು.

ವೇದಿಕೆ ಮೇಲೆ ನಯಾನಗರದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಶಾಸ್ತ್ರಿ, ಆರಾದ್ರಿ ಮಠ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ಪ್ರಭಾ ಅಕ್ಕಾ, ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡ ಮಲ್ಲಪ್ಪ ಮುರಗೋಡ, ಹಿರಿಯ ನ್ಯಾಯವಾದಿ ಬಿ.ಎಸ್.ಕಿವಡಸನ್ನವರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರಪ್ಪ ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಸಿದ್ದನ್ನವರ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಉದ್ಯಮಿ ವಿಜಯ ಮೆಟಗುಡ್ಡ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಮಂಜುಳಾ ದೊಡಗೌಡರ, ಎಂಜನಿಯರ್ ರಾಹುಲ ಪಾಟೀಲ, ಆಸ್ಪತ್ರೆ ವೈದ್ಯರಾದ ಡಾ.ಅಶೋಕ ದೊಡವಾಡ ಡಾ.ರವೀಂದ್ರಕುಮಾರ ಜಕನೂರ, ಶೈಲಜಾ ಮುದಕನಗೌಡರ, ಡಾ.ವಿಜಯಲಕ್ಷ್ಮೀ ದೊಡವಾಡ, ಡಾ.ಸಿಂಧು ಅಂಗಡಿ, ಆಡಳಿತಾಧಿಕಾರಿ ಕವಿತಾ ಜಕನೂರ ಅನೇಕರು ಇದ್ದರು.

ಇದೇ ವೇಳೆ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರು ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಿದರು. ಚಿಕ್ಕಮಕ್ಕಳ ತಜ್ಞ ಡಾ.ಶರಣಕುಮಾರ ಅಂಗಡಿ ಸ್ವಾಗತಿಸಿದರು. ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ನಿರೂಪಿಸಿ, ವಂದಿಸಿದರು. ಸಾವಿರಾರು ನಾಗರಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ