ಸರ್ವಕಾರ್ಯ ಸಿದ್ಧಿಗೆ ಆರೋಗ್ಯವೇ ಭದ್ರ ಬುನಾದಿ: ವಾಸುದೇವರಡ್ಡಿ ಮೇಕಳಿ

KannadaprabhaNewsNetwork | Published : Apr 9, 2024 12:54 AM

ಸಾರಾಂಶ

ಗದಗ ನಗರದ ಸಿದ್ಧಲಿಂಗ ನಗರದ ಬಸವ ಯೋಗ ಮಂದಿರದಲ್ಲಿ 528ನೇ ಅನ್ವೇಷಣೆ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಡೆಯಿತು.

ಗದಗ: ಸರ್ವ ಕಾರ್ಯಗಳ ಸಾಧನೆ-ಸಿದ್ಧಿಗಾಗಿ ಆರೋಗ್ಯವೇ ಭದ್ರ ಬುನಾದಿಯಾಗಿದೆ ಎಂದು ನಿವೃತ್ತ ಎಂಜಿನಿಯರ್ ವಾಸುದೇವರಡ್ಡಿ ಮೇಕಳಿ ಹೇಳಿದರು.

ಇಲ್ಲಿಯ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಎಸ್.ವೈ.ಬಿ.ಎಂ.ಎಸ್. ಯೋಗಪಾಠ ಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ೫೨೮ನೇ ಅನ್ವೇಷಣೆ ಕಾರ್ಯಕ್ರಮದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೈನಂದಿನ ಬದುಕು ಪ್ರಾರಂಭವಾಗುವುದೇ ಆರೋಗ್ಯದಿಂದ, ಆರೋಗ್ಯ ಇಲ್ಲದಿದ್ದರೆ ಬದುಕು ಶೂನ್ಯವೆನಿಸುವುದು. ಅಂತೆಯೇ ಆರೋಗ್ಯವೇ ಭಾಗ್ಯವೆಂದು ಎಲ್ಲರೂ ಹೇಳುವರು. ಜೀವಿಯು ಹೆಚ್ಚು ಕಾಲ ಬಾಳಿ ಬದುಕಲು ಕ್ರಿಯಾಶೀಲನಾಗಿರಲು ಆರೋಗ್ಯ ಬೇಕೆ ಬೇಕು ಎಂದು ಹೇಳಿದರು.ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಮಕ್ಕಳಿಂದ ಮೊದಲ್ಗೊಂಡು ಬಹುತೇಕ ಜನತೆ ದುಶ್ಚಟಗಳಿಗೆ ಮಾರುಹೋಗುತ್ತಿದ್ದಾರೆ, ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆರೋಗ್ಯ ಪೀಡಿತರಾಗಿರುವರು. ನಾವೆಲ್ಲರೂ ಆರೋಗ್ಯವಂತರಾಗಿರಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು ಎಂದು ಹೇಳಿದರು.

ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಮಾತನಾಡಿ, ಕೇವಲ ವಿಶ್ವ ಆರೋಗ್ಯ ದಿನಾಚರಣೆಯಿಂದ ನಾವೆಲ್ಲ ಆರೋಗ್ಯವಂತರಾಗಿರುವುದು ಅಸಾಧ್ಯ. ಅದಕ್ಕಾಗಿ ನಾವು ವಿದ್ಯಾರ್ಥಿಗಳಲ್ಲಿ, ನೆರೆಹೊರೆಯವರಲ್ಲಿ, ಸಮಾಜದಲ್ಲಿ ಆರೋಗ್ಯದ ಅರಿವು ಮೂಡಿಸಬೇಕು. ಈ ಕಾರ್ಯ ನನ್ನದಲ್ಲ ಎಂದು ಭಾವಿಸದೇ ಆರೋಗ್ಯ ಜಾಗೃತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷೆ ವಿಜಯಾ ಚನ್ನಶೆಟ್ಟಿ ಹಾಗೂ ಯೋಗ ಸಾಧಕರು, ಸದಸ್ಯರು ಇದ್ದರು. ವೀಣಾ ಮಾಲಿಪಾಟೀಲ ಪ್ರಾರ್ಥಿಸಿದರು. ವೀಣಾ ಗೌಡರ ಸ್ವಾಗತಿಸಿದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮೀ ಮೇಕಳಿ ವಂದಿಸಿದರು.

Share this article