-ತೆರೆದ ಪರಿಕರಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅಬೇಟ್ ದ್ರಾವಣ ಸಿಂಪಡಣೆ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ತೆರೆದ ಪಾತ್ರೆ ಸೇರಿದಂತೆ ಯಾವುದೇ ಪರಿಕರಗಳಲ್ಲಿ ನೀರು ಸಂಗ್ರಹಿಸಬೇಡಿ. ಸೊಳ್ಳೆಗಳ ತಾಣವಾಗದಂತೆ ಕ್ರಮವಹಿಸುವ ಮೂಲಕ ಡೇಂಘೀ ನಿಯಂತ್ರಿಸಬೇಕು ಎಂದು ಆರೋಗ್ಯಾಧಿಕಾರಿ ಡಾ.ಬಿ.ವಿ.ಗೀರೀಶ್ ಹೇಳಿದರು.ಚಿತ್ರದುರ್ಗ ನಗರದ ಎಲ್ಲಾ ವಾರ್ಡ್ ಗಳಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ವಿಶೇಷ ಲಾರ್ವಾ ಸಮೀಕ್ಷೆ ನಡೆಯುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿ ತಂಡ ಮೇಲ್ವಿಚಾರಣೆ ನಡೆಸಿ, ಭೋವಿ ಕಾಲೋನಿ, ಚನ್ನಕ್ಕಿ ಹೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಸೊಳ್ಳೆಗಳ ತಾಣ ನಾಶಪಡಿಸಿ ನಂತರ ಅವರು ಮಾತನಾಡಿದರು.
ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತವೆ. ನಿಮ್ಮ ಕುಟುಂಬಕ್ಕೆ ಬಾಧೆ ಕೊಡುವುದರೊಂದಿಗೆ ಅಕ್ಕ ಪಕ್ಕದ ಕುಟುಂಬಗಳಿಗೆ ತೊಂದರೆ ಉಂಟಾಗುತ್ತದೆ. ಡೆಂಘೀ ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಪರಿಸರ ಸ್ವಚ್ಛತೆ ಕಾಪಾಡೋಣ ಎಂದರು.ತಾೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಡೆಂಘೀ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು. ಸೊಳ್ಳೆಗಳ ಉತ್ಪತ್ತಿ ತಾಣನಾಶ ಮಾಡದಿದ್ದರೆ ಕೀಟಗಳು ನಮನ್ನಾಳುತ್ತವೆ. ಜಾಗೃತರಾಗಿ, ಬುದ್ಧಿವಂತರಾಗಿ ಮನೆ ಒಳಗೆ ಹೊರಗೆ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೀರು ಸಂಗ್ರಹಿಸುವ ಪರಿಕರಗಳನ್ನು ವಾರಕೊಮ್ಮೆಯಾದರೂ ಚೆನ್ನಾಗಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಎಂದರು.
ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆಗೆ ಒಂದು ಭಾಗ ಬೇವಿನ ಎಣ್ಣೆ, 3 ಭಾಗ ಕೊಬ್ಬರಿ ಎಣ್ಣೆ ಈ ಪ್ರಮಾಣದಲ್ಲಿ ಮಿಶ್ರಣ ಮಾಡಿ ಲೇಪನ ಮಾಡಿಕೊಳ್ಳಬೇಕು. ಸೊಳ್ಳೆ ಪರದೆ ಬಳಕೆ ಮಾಡಿ ಮುಸ್ಸಂಜೆ, ಮುಂಜಾವಿನ ಸಮಯದಲ್ಲಿ ಸೊಳ್ಳೆ ಬತ್ತಿ, ಬೇವಿನ ಸೊಪ್ಪಿನ ಹೊಗೆಯ ಧೂಪವನ್ನು ಬೆಳಗಿಸಿಕೊಳ್ಳಬೇಕು. ಯಾವುದೇ ಜ್ವರವಿರಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದರು. ತೆರೆದು ಸಂಗ್ರಹಿಸಿದ, ಲಾರ್ವಾ ಕಂಡು ಬಂದ 20 ಟಬ್‌ಗಳ ನೀರು ಚಲ್ಲಿಸಿ, ಅಬೇಟ್ ದ್ರಾವಣ ಹಾಕಿಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕರ್ ನಾಯ್ಕ್, ಆಶಾ ಕಾರ್ಯಕರ್ತೆ ಶೋಭ, ನಾಗರೀಕರು ಉಪಸ್ಥಿತರಿದ್ದರು.------------
ಪೋಟೋ: 29 ಸಿಟಿಡಿ 2ಚಿತ್ರದುರ್ಗದ ಚೆನ್ನಕ್ಕಿ ಹೊಂಡ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ತೆರೆದ ಪರಿಕರಗಳಿಗೆ ಅಬೇಟ್ ದ್ರಾವಣ ಸಿಂಪಡಿಸಿದರು.