ಭಾರತೀನಗರ : ಹಳ್ಳಿಗಳಲ್ಲಿ ಬದಲಾದ ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಶರಣರ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ನಂದೀಶ್ ತಿಳಿಸಿದರು.
ಕಾಡುಕೊತ್ತನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಶರಣರ ಸಂಘಟನಾ ವೇದಿಕೆ ಮತ್ತು ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಕೆ.ಎಂ.ದೊಡ್ಡಿ, ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲು ಶಿಬಿರ ಆಯೋಜಿಸಲಾಗಿದೆ. ಹಣ, ಆಸ್ತಿಗಿಂತ ಮನುಷ್ಯನಿಗೆ ಆರೋಗ್ಯ ಮುಖ್ಯ. ತಜ್ಞ ವೈದ್ಯರು ಉಚಿತವಾಗಿ ಸಲಹೆ, ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ.ಶ್ವೇತಾ, ಡಾ.ರಾಜು, ಡಾ.ಪ್ರೀತಂ, ಡಾ.ಮೌರ್ಯ, ಡಾ.ಶಿಲ್ಪಶ್ರೀ, ನೇತ್ರ ತಜ್ಞೆ ನವ್ಯ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಇನ್ಸ್‌ಪೆಕ್ಟರ್ ರಾಮಸ್ವಾಮಿ, ಕಾಡುಕೊತ್ತನಹಳ್ಳಿ ಬೀಟ್ ಪೊಲೀಸ್ ಪ್ರಭುಸ್ವಾಮಿ, ಸುಭ್ರಮಣ್ಯ, ಗ್ರಾಪಂ ಅಧ್ಯಕ್ಷ ವೀರಭದ್ರಯ್ಯ, ಮಹಿಳಾ ಅಧ್ಯಕ್ಷೆ ಕವಿತಾ, ಜಿಲ್ಲಾ ಉಪಾಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ.ಹಳ್ಳಿ ಶಿವಕುಮಾರ್, ಕ್ಯಾತಘಟ್ಟ ಸಿದ್ದಲಿಂಗಸ್ವಾಮಿ, ಭುಜುವಳ್ಳಿ ಸಿದ್ದಲಿಂಗಸ್ವಾಮಿ, ನಾಗೇಶ್, ವಕೀಲ ನಾಗೇಂದ್ರ, ಮುಖ್ಯಶಿಕ್ಷಕ ಪ್ರಸನ್ನಕುಮಾರ್ ಸೇರಿದಂತೆ ಹಲವರಿದ್ದರು.
ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಮಂಡ್ಯ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ 2024-25 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ರಾಷ್ಟ್ರೀಯಯ ಹಣಕಾಸು ಅಭಿವೃದ್ದಿ ನಿಗಮದ (NCDC) ಸಹಯೋಗದೊಂದಿಗೆ (20+1) ಕುರಿ/ಮೇಕೆ ಘಟಕಗಳ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಹೆಬ್ಬಾಳ ಕುರಿ ಭವನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿತ ಹಾಗೂ ಸಕ್ರಿಯ ಮಂಡ್ಯ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ, 2022-23 ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಈ ಯೋಜನೆಯ ಸಾಲ ಸಹಾಯಧನ ಸೌಲಭ್ಯ ಪಡೆಯದೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಸದಸ್ಯರುಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಸರ್ಕಾರದ ಮಾರ್ಗಸೂಚಿಗಳನ್ವಯ ಚಾಲ್ತಿಯಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವವರು ಅರ್ಜಿಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಹೋಬಳಿ ಮಟ್ಟದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧಕ್ಷರು/ಕಾರ್ಯದರ್ಶಿಯವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ತಮ್ಮ ವ್ಯಾಪ್ತಿಗೆ ಬರುವ ಕುರಿ ಮತ್ತು ಉಣ್ಣೆ ಉತ್ಪಾದರ ಸಹಕಾರ ಸಂಘದ ಮೂಲಕ ಜುಲೈ 30 ರೊಳಗೆ ಮಂಡ್ಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕರ ಕಛೇರಿಯವರಿಗೆ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08232-221590 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಕಚೇರಿ ಮುಖ್ಯ ಪಶುವೈದ್ಯಾಧಿಕಾರಿ/ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.