ವಿಜಯಪುರ: ಭೂತಾಯಿ ಮಡಿಲಿಗೆ ರಾಸಾಯನಿಕಗಳೆಂಬವಿಷ ಸುರಿದು ಭೂಮಿಯ ಫಲವತ್ತತೆ ನಾಶಪಡಿಸುವುದಲ್ಲದೆ, ಅನಾರೋಗ್ಯಕರ ಆಹಾರ ಸೇವಿಸಿ ನಮ್ಮ ಆರೋಗ್ಯವನ್ನೂ ಹಾಳುಮಾಡಿಕೊಳ್ಳುವುದನ್ನು ತಡೆಯಲು ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ತಂತ್ರಜ್ಞಾನದ ಬಳಸಿ: ಭಾರತದಲ್ಲಿ ಶೇ. ೬೦ರಷ್ಟು ಕೃಷಿಯನ್ನೇ ಅವಲಂಬಿಸಿದ್ದರೂ, ದೇಶದ ಆರ್ಥಿಕತೆಗೆ ಕೃಷಿ ವಲಯದಿಂದ ಸಿಗುತ್ತಿರುವ ಉತ್ಪತ್ತಿ ಕೇವಲ ಶೇ. ೧೮ರಷ್ಟಿದೆ. ಇದನ್ನು ಹೆಚ್ಚಿಸಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಸಾಫ್ಟ್‌ವೇರ್ ರಂಗದ ''''''''ವರ್ಕ್ ಫ್ರಂ ಹೋಮ್'''''''' ಮಾದರಿಯಲ್ಲೇ, ಕೃಷಿಯಲ್ಲೂ ಮನೆಯಲ್ಲೇ ಕುಳಿತು ಯಾವ ಗಿಡಕ್ಕೆ ರೋಗ ತಗುಲಿದೆ ಎಂಬುದನ್ನು ಪತ್ತೆಹಚ್ಚಿ, ಕೇವಲ ಆ ಗಿಡಕ್ಕೆ ಮಾತ್ರ ಔಷಧ ಸಿಂಪಡಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಈ ಹಿಂದೆ ಕೇವಲ ವೈದ್ಯಕೀಯ ರಂಗದಲ್ಲಿದ್ದ ''''''''ಇಂಟರ್ನ್‌ಶಿಪ್'''''''' ವ್ಯವಸ್ಥೆ ಈಗ ಕೃಷಿ ಶಿಕ್ಷಣಕ್ಕೂ ಬಂದಿದೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಣ್ಣಿನಲ್ಲಿ ಇಳಿದು ಕೆಲಸ ಮಾಡದ ಹೊರತು ಅವರ ತೋಟಗಾರಿಕಾ ಪದವಿ ಪೂರ್ಣಗೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿವಿ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ಯಾವುದೇ ದೇಶ ಅಥವಾ ಮನುಷ್ಯನಿಗೆ ಆಹಾರ, ಆರೋಗ್ಯ ಮತ್ತು ಆದಾಯ ಈ ಮೂರೂ ಪ್ರಮುಖ ಅಂಶಗಳಾಗಿವೆ. ತೋಟಗಾರಿಕಾ ಬೆಳೆಗಳಿಂದ ಉತ್ತಮ ಆದಾಯ ಬರುವುದಲ್ಲದೆ, ಪೋಷಕಾಂಶಯುಕ್ತ ಹಣ್ಣು-ತರಕಾರಿಗಳ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಕಳೆದ ೭ ವರ್ಷಗಳಿಂದ ತೋಟಗಾರಿಕಾ ಸಂಶೋಧನೆ ಹಾಗೂ ಬೆಳೆ ಇಳುವರಿ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನ ಕಾಯ್ದುಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಮಂಗಳನಾಥನಂದ ಸ್ವಾಮೀಜಿ, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಡಾ. ರಾಮಚಂದ್ರ ನಾಯಕ್, ನಿವೃತ್ತ ವಿಜ್ಞಾನಿ ಡಾ. ಜಿ.ಎಸ್. ಕೆ. ಸ್ವಾಮಿ, ಹಾಗೂ ಶಾಶ್ವತ ನೀರಾವರಿ ಹೋರಾಟಗಾರರಾದ ಆಂಜನೇಯರೆಡ್ಡಿ ಉಪಸ್ಥಿತರಿದ್ದರು.
ತೋಟಗಾರಿಕಾ ವಸ್ತು ಪ್ರದರ್ಶನದಲ್ಲಿ ದ್ರಾಕ್ಷಿ, ದಾಳಿಂಬೆ, ಸೇವಂತಿಗೆ, ಗುಲಾಬಿ ಬೆಳೆಗಳ ಸಂರಕ್ಷಣೆ, ಆಧುನಿಕ ನೀರಾವರಿ ಪದ್ಧತಿ, ಮಣ್ಣು ಮತ್ತು ರಾಸಾಯನಿಕ ಗೊಬ್ಬರಗಳ ಸದ್ಬಳಕೆ, ಜಾನುವಾರು ಮೇವು, ಸಾವಯವ ಮತ್ತು ಸುಸ್ಥಿರ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿಯಲ್ಲಿ ಡ್ರೋನ್ ಮತ್ತು ರೊಬೊಟಿಕ್ಸ್ ತಂತ್ರಜ್ಞಾನದ ಬಳಕೆ ಕುರಿತಾದ ಮಳಿಗೆಗಳು ಮತ್ತು ಮಾರಾಟ ಪ್ರದರ್ಶನಗಳು ರೈತರ ಗಮನ ಸೆಳೆದವು.