ಆರೋಗ್ಯ, ನೀರು, ನೀರಾವರಿ ನನ್ನ ಕನಸು-ಸಚಿವ ಶಿವಾನಂದ ಪಾಟೀಲ್

KannadaprabhaNewsNetwork |  
Published : Apr 12, 2026, 02:15 AM IST
ಹಾವೇರಿಯಲ್ಲಿ ಆಯೋಜಿಸಿದ್ದ ಭೂಗ್ಯಾರಂಟಿ ಸಮಾವೇಶ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕೃತಜ್ಞತೆ ಅರ್ಪಣೆ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸುಧಾರಿತ ವೈದ್ಯಕೀಯ ಸೇವೆ, ಗುಣಮಟ್ಟದ ಶಿಕ್ಷಣ, ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸುವುದು ನನ್ನ ಕನಸು. ಈ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾವೇರಿ: ಸುಧಾರಿತ ವೈದ್ಯಕೀಯ ಸೇವೆ, ಗುಣಮಟ್ಟದ ಶಿಕ್ಷಣ, ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸುವುದು ನನ್ನ ಕನಸು. ಈ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಯಶಸ್ಸಿನ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವನಾಗಿ ಈ ಜಿಲ್ಲೆಗೆ ಕೆಲವು ಸಮಸ್ಯೆಗಳಿಗಾದರೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಈ ಹಾದಿಯಲ್ಲಿ ನಿಮ್ಮ ಸಹಕಾರ ಅಗತ್ಯ ಎಂದು ಹೇಳಿದರು.

ಹಿಂದಿನ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಕೆಲಸಗಳು ಆಗಿಲ್ಲ ಎಂದು ಟೀಕೆ ಮಾಡಲು ಬಯಸುವುದಿಲ್ಲ. ಹಿಮ್ಸ್‌ ಕಟ್ಟಡಕ್ಕೆ ರಾಜ್ಯ ಸರ್ಕಾರ ಸುಮಾರು 200 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಕಾಲೇಜು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಪ್ರವೇಶ ಮಿತಿ 150ರಿಂದ 200ಕ್ಕೆ ಹೆಚ್ಚಳವಾಗಲಿದೆ. ಪ್ಯಾರಾ ಮೆಡಿಕಲ್‌ ಕಾಲೇಜು, ಟ್ರಾಮಾ ಸೆಂಟರ್‌ ಕೂಡಾ ನಿರ್ಮಾಣವಾಗಲಿದೆ ಎಂದು ವಿವರಿಸಿದರು.

ಜಲಜೀವನ್‌ ಮಿಷನ್‌ ಹಾಗೂ ಮೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಹಲವು ವರ್ಷಗಳಿಂದ ಆಮೆ ವೇಗದಲ್ಲಿ ಸಾಗುತ್ತಿದ್ದು, ನಿರಂತರವಾಗಿ ಸಭೆಗಳನ್ನು ನಡೆಸಿ, ಒತ್ತಡ ತಂದ ಪರಿಣಾಮ ಎಲ್ಲ ಯೋಜನೆಗಳು ಅನುಷ್ಠಾನ ಹಂತಕ್ಕೆ ಬಂದಿವೆ. ಒಂದು ಯೋಜನೆ ಈ ತಿಂಗಳಲ್ಲೇ ಅನುಷ್ಠಾನಕ್ಕೆ ಬರಲಿದೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಹಲವು ಕಡೆ ಜನ ಗುರುತಿಸುವುದಿಲ್ಲ. ಆದರೆ ಹಾವೇರಿ ಜಿಲ್ಲೆಯ ಜನ ಒಂದು ಚಿಕ್ಕ ಕೆಲಸ ಮಾಡಿದರೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ನನಗೂ ಖುಷಿಯಾಗುತ್ತದೆ ಎಂದು ಹೇಳಿದರು.

ಶಾಸಕ ಶ್ರೀನಿವಾಸ ಮಾನೆ, ಕರ್ನಾಟಕ ಅರಣ್ಯ ನಿಗಮದ ಅಧ್ಯಕ್ಷರೂ ಆದ ಶಾಸಕ ಬಸವರಾಜ ಶಿವಣ್ಣನವರ್‌, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ್‌ ಕೋಳಿವಾಡ, ಯಾಸಿರ್‌ ಖಾನ್‌ ಪಠಾಣ್‌ ಸೇರಿದಂತೆ ಹಲವರು ಮಾತನಾಡಿದರು. ಹೆಸ್ಕಾಂ ಅಧ್ಯಕ್ಷ ಅಜೀಂಪೀರ್‌ ಖಾದ್ರಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಮೋಹನ್‌ ಲಿಂಬಿಕಾಯಿ, ಮಾಜಿ ಶಾಸಕ ಬನ್ನಿಕೋಡ್‌, ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ್‌, ಜಿಪಂ ಸಿಇಒ ರುಚಿ ಬಿಂದಲ್‌, ಎಸ್ಪಿ ಯಶೋದಾ ವಂಟಿಗೋಡಿ, ಎಡಿಸಿ ನಾಗರಾಜ್‌, ಹಿಮ್ಸ್‌ ಡೀನ್‌ ಡಾ. ಪ್ರದೀಪ್‌ ಕುಮಾರ್‌ ಇತರರು ಇದ್ದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ ಮಾತನಾಡಿದರು.

ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಉಪವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳನ್ನು ಸಚಿವರು ಸನ್ಮಾನಿಸಿದರು. ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು.ಅಧಿಕಾರಿಗಳು ಈ ಜಿಲ್ಲೆಯಿಂದ ವರ್ಗಾವಣೆಯಾಗಿ ಬೇರೆ ಜಿಲ್ಲೆಗೆ ಹೋದರೂ ನೀವು ಈ ಜಿಲ್ಲೆಯಲ್ಲಿ ಮಾಡಿದ ಕೆಲಸಗಳಿಂದ ಜಿಲ್ಲೆಯ ಜನ ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತಾಗಬೇಕು. ವೃತ್ತಿ ಬದುಕಿನಲ್ಲಿ ಮೈಲುಗಲ್ಲು ಎನ್ನುವಂತಹ ಕೆಲಸ ಮಾಡಿದ ತೃಪ್ತಿ ನಿಮಗೂ ಇರಬೇಕು. ಆ ರೀತಿ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್‌. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಕರ ವಿರೋಧದ ನಡುವೆ ಒಂದಾದ ಅಂತರ್‌ ಧರ್ಮೀಯ ಪ್ರೇಮಿಗಳು
ಮಂತ್ರಾಲಯ ಮಠಕ್ಕೂ ಯಲಬುರ್ಗಾ ಶ್ರೀಮಠಕ್ಕೂ ಅನನ್ಯ ಸಂಬಂಧ