ಹುಬ್ಬಳ್ಳಿ: ಕೇಂದ್ರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ₹3.26 ಕೋಟಿ ವೆಚ್ಚದ ಸ್ಮಾರ್ಟ್ ಹೆಲ್ತ್‌ಕೇರ್ ಅನುಷ್ಠಾನದಲ್ಲಿ ಆಗಿರುವ ಲೋಪ ಕುರಿತು ತನಿಖೆ ನಡೆಸುತ್ತಿರುವ ಪಾಲಿಕೆ ಸದನ ಸಮಿತಿ ಮತ್ತೊಂದು ಅವ್ಯವಹಾರವನ್ನು ಪತ್ತೆ ಮಾಡಿದೆ.
ಪಾಲಿಕೆಯ ಸಿಬ್ಬಂದಿಯನ್ನೇ ಬಳಸಿಕೊಂಡಿದ್ದು ಗೊತ್ತಿದ್ದೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಶಿಫಾರಸು ಮಾಡಿದ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರನ್ನು ಸಮಿತಿ ತರಾಟೆಗೆ ತೆಗೆದುಕೊಂಡಿತು. ಅನುಷ್ಠಾನದಿಂದ ಹಸ್ತಾಂತರ ವರೆಗೂ ಆಪರೇಟರ್‌ಗಳ ವೇತನ ಮೊತ್ತವನ್ನು ಗುತ್ತಿಗೆದಾರರಿಂದ ಮರುಪಾವತಿಸಿಕೊಳ್ಳಬೇಕೆಂದು ಸದಸ್ಯರು ಸೂಚಿಸಿದರೆನ್ನಲಾಗಿದೆ.
ಮತ್ತೆ ಯಾಮಾರಿಸಿದ ಅಧಿಕಾರಿಗಳು?ನಾನಾ ನೆಪಗಳ ಮಧ್ಯೆ ಹಲವು ತಿಂಗಳ ಬಳಿಕ ಕಳೆದ ತಿಂಗಳು ನಡೆದ ಸದನ ಸಮಿತಿ ಮೊದಲ ಸಭೆಯಲ್ಲಿ ಸದಸ್ಯರು, ಗುತ್ತಿಗೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸ್ಮಾರ್ಟ್ ಕೇರ್‌ನಲ್ಲಿ ಸಂಗ್ರಹವಾದ ದತ್ತಾಂಶಗಳು, ಬಾರ್ ಕೋಡ್ ಸಕ್ರಿಯತೆ, ವೆಂಡಿಂಗ್ ಮಷಿನ್ ಕ್ರಿಯಾಶೀಲತೆ ಸೇರಿದಂತೆ ಹಲವು ಮಾಹಿತಿ ಹಾಗೂ ದಾಖಲೆ ನೀಡುವಂತೆ ನಿರ್ದೇಶನ ನೀಡಿದ್ದರು.
ವೆಂಡಿಂಗ್ ಮಷಿನ್ ಕಾರ್ಯನಿರ್ವಹಣೆ, ಬಾರ್‌ಕೋಡ್ ನಿಷ್ಕ್ರಿಯತೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಬಳಸಿಕೊಂಡು ಕೆಲಸ ನಿರ್ವಹಿಸಿದ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಐದು ವರ್ಷಗಳಿಂದ ಹಲವು ಎಂಡಿಗಳು ಬದಲಾಗಿದ್ದಾರೆ. ಇದರಿಂದ ಯಾರೂ ಹೊಣೆಗಾರಿಕೆ ವಹಿಸಿಕೊಳ್ಳುತ್ತಿಲ್ಲ. ಇದು ತೊಂದರೆಯಾಗಿದೆ.