ಭಾರತ ಹೃದಯ, ಮಧುಮೇಹ ರೋಗಗಳ ರಾಜಧಾನಿ: ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್.ಮಂಜುನಾಥ್

KannadaprabhaNewsNetwork | Updated : Aug 24 2024, 01:40 PM IST

ಸಾರಾಂಶ

ಹಿಂದೆಲ್ಲಾ ಶ್ರಮದಾನದ ಮೂಲಕ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರು. ಒಳ್ಳೆಯ ಆಹಾರ ತೆಗೆದುಕೊಳ್ಳುತ್ತಿದ್ದರು. ಅಂದು ಪಟೇಲರು, ಶ್ಯಾನುಬೋಗರು ಸೇರಿದಂತೆ ಸಿರಿವಂತರು ಮಾತ್ರ ಕಾಯಿಲೆ ಎನ್ನುತ್ತಿದ್ದರು. ಆದರೆ, ಇಂದು ಬಡವರು, ಕೂಲಿ ಕಾರ್ಮಿಕರಿಗೂ ಈ ರೋಗ ಬರುತ್ತಿದೆ.  

  ಮಂಡ್ಯ :  ಭಾರತವು ಹೃದಯ ಮತ್ತು ಮಧುಮೇಹ ರೋಗಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಹೃದಯ ತಜ್ಞರೂ ಆದ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ನಗರದ ಸ್ಪಂದನ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕ್ಯಾತ್‌ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಹೃದಯ ಮತ್ತು ಮಧುಮೇಹದಂತಹ ಕಾಯಿಲೆಗಳು ಹೆಚ್ಚಾಗಲು ಇಂದಿನ ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣ ಎಂದು ಹೇಳಿದರು.

ಹಿಂದೆಲ್ಲಾ ಶ್ರಮದಾನದ ಮೂಲಕ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರು. ಒಳ್ಳೆಯ ಆಹಾರ ತೆಗೆದುಕೊಳ್ಳುತ್ತಿದ್ದರು. ಅಂದು ಪಟೇಲರು, ಶ್ಯಾನುಬೋಗರು ಸೇರಿದಂತೆ ಸಿರಿವಂತರು ಮಾತ್ರ ಕಾಯಿಲೆ ಎನ್ನುತ್ತಿದ್ದರು. ಆದರೆ, ಇಂದು ಬಡವರು, ಕೂಲಿ ಕಾರ್ಮಿಕರಿಗೂ ಈ ರೋಗ ಬರುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರೂ ಕೆಲಸ ಮಾಡಿ ರೋಗಗಳಿಂದ ದೂರ ಇರಬೇಕು. ನಡಿಗೆ ರೂಢಿಸಿಕೊಳ್ಳಬೇಕು. ಸಂಗಾತಿ ಎಂದರೆ ಜೀವನ ಸಂಗಾತಿಯಲ್ಲ. ಸಂಗಾತಿ ಎಂದರೆ ನಮ್ಮ ದೇಹ. ಅದು ನಮ್ಮ ಉಸಿರು ಇರುವವರೆಗೂ ನಮ್ಮ ಜೊತೆಯೇ ಇರುತ್ತದೆ. ಇಂತಹ ಸಂಗಾತಿಯನ್ನು ಅಚ್ಚುಕಟ್ಟಾಗಿ ಯಾವುದೇ ರೋಗಗಳಿಲ್ಲದಂತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.

ಪ್ರತಿದಿನ ಒಂದು ಗಂಟೆಯಾದರೂ ನಡಿಗೆಯನ್ನು ಮಾಡು. ನಾನು ನಿನಗಾಗಿ ಜೀವನ ಪರ್‍ಯಂತ ಇರುತ್ತೇನೆ ಎನ್ನುವ ರೀತಿ ಹೃದಯ ಕೆಲಸ ಮಾಡುತ್ತದೆ. ಅದನ್ನು ಮನವರಿಕೆ ಮಾಡಿಕೊಂಡು ಪ್ರತಿನಿತ್ಯ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಹೃದಯ ಸಮಸ್ಯೆಯಿಂದ ಸ್ವಲ್ಪವಾದರೂ ದೂರ ಇರಬಹುದು ಎಂದರು. 

ಸಂಸತ್ ನಲ್ಲಿ ಪ್ರತಿಪಾದನೆ:

ಹೃದಯಾಘಾತವಾದಲ್ಲಿ ತಕ್ಷಣ ಅವರಿಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಕನಿಷ್ಠ 3 ರಿಂದ 6 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಅವರು ಬದುಕುವ ಸಾಧ್ಯತೆಗಳಿವೆ. 12 ಗಂಟೆಯಾದಲ್ಲಿ ಶೇ.7ರಷ್ಟು ಮಾತ್ರ ಬದುಕುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದರು.

ಚಿಕಿತ್ಸೆ ದೊರೆಯುವುದು ವಿಳಂಬವಾದಲ್ಲಿ ಸಾವಿನ ಸಾಧ್ಯತೆಯೂ ಹೆಚ್ಚಾಗುತ್ತದೆ. ಇದನ್ನು ಮನಗಂಡು ನಾನು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರತಿ 50 ಕಿ.ಮೀ.ಗೊಂದರಂತೆ ಹೃದಯ ಚಿಕಿತ್ಸೆ ನೀಡುವಂತಹ ಆಸ್ಪತ್ರೆಗಳನ್ನು ತೆರೆಯುವ ಅಗತ್ಯವನ್ನು ಪ್ರತಿಪಾದಿಸಿದ್ದೇನೆ ಎಂದು ನೆನಸಿಕೊಂಡರು.

35 ವರ್ಷ ದಾಟಿದ ಪುರುಷ ಹಾಗೂ 45 ವರ್ಷ ದಾಟಿದ ಮಹಿಳೆ ಪ್ರತಿ ವರ್ಷವೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯ ಸದೃಢವಾಗಿರುತ್ತದೆ ಎಂದು ಸಲಹೆ ನೀಡಿದರು.

ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ದುಡಿದು ಸತ್ತವರಿಗಿಂತ ಚಿಂತೆ ಮಾಡಿ ಸತ್ತವರೇ ಹೆಚ್ಚಾಗುತ್ತಿದ್ದಾರೆ. ಮಕ್ಕಳಲ್ಲಿ ಹೃದಯಾಘಾತ, ಶೇ.60 ರಷ್ಟು ಸಾವುಗಳು, ಇದಕ್ಕೆಲ್ಲಾ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣ. ಮಧುಮೇಹ ಮತ್ತು ಹೃದಯ ಕಾಯಿಲೆಗಳು ಜಾತ್ಯಾತೀತವಾದ ಕಾಯಿಲೆಗಳಾಗಿ ಮಾರ್ಪಟ್ಟಿವೆ ಎಂದು ಹೇಳಿದರು.

ಕಾರ್ಡಿಯಾಕ್ ಕ್ಯಾತ್‌ಲಾಗ್ ಅಗತ್ಯ:

ಮಂಡ್ಯ ನಗರಕ್ಕೆ ಹೃದಯ ಚಿಕಿತ್ಸೆ ನೀಡುವಂತಹ ಆಸ್ಪತ್ರೆ ಆಗತ್ಯತೆ ಇದೆ. ಕಾರ್ಡಿಯಾಕ್ ಕ್ಯಾತ್‌ಲಾಗ್ ಬೇಕಾಗಿದೆ. ನಮ್ಮ ದೇಶದಲ್ಲಿ ಮೂರೂವರೆ ಸಾವಿರ ಇಂತಹ ಘಟಕಗಳಿವೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಆರೂವರೆ ಸಾವಿರ ಕಾರ್ಡಿಯಾಕ್ ಕ್ಯಾತ್‌ಲಾಗ್ ಆಸ್ಪತ್ರೆಗಳ ಅಗತ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸಳೆಯುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಹೃದಯಾಘಾತವಾದ ತಕ್ಷಣ ಅವರಿಗೆ ರಕ್ತ ತೆಳುವಾಗಲು ಚುಚ್ಚುಮದ್ದು ನೀಡಬೇಕಾಗಿದೆ. ಅದು 18 ಸಾವಿರ ರು.ಗಳಾಗಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದರಿಂದ ಹೃದಯಾಘಾತಕ್ಕೊಳಗಾದ ರೋಗಿಯನ್ನು ಸ್ವಲ್ಪ ಕಾಲ ಉಳಿಸಿಕೊಂಡು ಉನ್ನತ ಕೇಂದ್ರಕ್ಕೆ ಕರೆದೊಯ್ಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಾವು ಮೈಸೂರಿನಲ್ಲಿ ಜಯದೇವ ಕೇಂದ್ರವನ್ನು ತೆರೆದಿದ್ದೆವು. ಇದರೊಂದಿಗೆ 45 ಕಡೆಗಳಲ್ಲಿ ಇಂತಹ ವ್ಯವಸ್ಥೆ ರೂಪಿಸಿದ್ದು, ಮೈಸೂರು ವಿಭಾಗದಲ್ಲಿ 15, ಬೆಂಗಳೂರು ವಿಭಾಗದಲ್ಲಿ 15 ಹಾಗೂ ಗುಲ್ಬರ್ಗಾ ವಿಭಾಗದಲ್ಲಿ 15 ಆಸ್ಪತ್ರೆಗಳಲ್ಲಿ ಹೃದಯ ತಪಾಸಣಾ ಘಟಕಗಳನ್ನು ಸ್ಥಾಪಿಸಿದ್ದೇವೆ ಎಂದರು.

ಸಮಾರಂಭದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಆದಿತ್ಯ, ಹೃದ್ರೋಗ ತಜ್ಞೆ ಡಾ. ದೀಪ್ತಿ ಮಂಗೇಶ್, ಸ್ತ್ರೀ ರೋಗತಜ್ಞೆ ಡಾ. ಶ್ರೀಕಲಾ, ಡಾ. ರವೀಂದ್ರನಾಥ್ ಹಲವರು ಭಾಗವಹಿಸಿದ್ದರು. 

Share this article