ಮಂಡ್ಯ ಜಿಲ್ಲೆಯಲ್ಲಿ ಹೃದಯ ಪರೀಕ್ಷೆ: ಶೇ.೧೫ ರಿಂದ ೨೦ರಷ್ಟು ಹೆಚ್ಚಳ

KannadaprabhaNewsNetwork |  
Published : Jul 11, 2025, 12:31 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಸ್ಟೆಮಿ ಕಾರ್ಯಕ್ರಮದಡಿ ೧೧,೩೫೯ ಜನರನ್ನು ಇಸಿಜಿ ಪರೀಕ್ಷೆಗೊಳಪಡಿಸಿದ ವೇಳೆ ೪೧೦ ಜನರಲ್ಲಿ ಕ್ಲಿಷ್ಟ, ೧,೧೪೧ ಜನರಿಗೆ ಇತರೆ ಸಮಸ್ಯೆಗಳಿರುವುದು ಕಂಡುಬಂದಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರಿ- ಖಾಸಗಿ ಆಸ್ಪತ್ರೆಗಳಿಗೆ ಜನರ ದುಂಬಾಲು । ಕಳೆದ ವರ್ಷ ೧೧,೫೭೦ ಜನರಲ್ಲಿ ೨,೦೮೧ ಮಂದಿಗೆ ಹೃದಯ ಸಮಸ್ಯೆ ಪತ್ತೆ । ಈ ವರ್ಷ ಮೂರೇ ತಿಂಗಳಲ್ಲಿ ೩,೩೫೨ ಮಂದಿಯಲ್ಲಿ ೯೬೯ ಜನರಿಗೆ ಹೃದ್ರೋಗ

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯ ಪರೀಕ್ಷೆಗೆ ಒಳಪಡುವವರ ಸಂಖ್ಯೆ ಶೇ.೧೫ ರಿಂದ ಶೇ.೨೦ರಷ್ಟು ಹೆಚ್ಚಾಗಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂರೇ ತಿಂಗಳಲ್ಲಿ ತಪಾಸಣೆಗೊಳಗಾದವರಲ್ಲಿ ೯೬೯ ಮಂದಿಯಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಗಾದವರ ಲೆಕ್ಕ ಸಿಗದಂತಾಗಿದೆ.

ಇದುವರೆಗೆ ಹೃದಯಾಘಾತದಿಂದ ೨೨ ಜನರು ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಸರ್ಕಾರ ಹಠಾತ್ ಮೃತಪಟ್ಟವರ ಮರಣೋತ್ತರ ಪರೀಕ್ಷೆಗೊಳಪಡಿಸುವುದನ್ನು ಕಡ್ಡಾಯಗೊಳಿಸಿದೆ. ಹಾಗಾಗಿ ದಿಢೀರನೆ ಮರಣಕ್ಕೆ ಏಕಾಏಕಿ ಹೃದಯಾಘಾತವೇ ಕಾರಣವೆಂಬ ತೀರ್ಮಾನಕ್ಕೆ ಬಾರದೆ ಸಾವಿಗೆ ನೈಜ ಕಾರಣವನ್ನು ತಿಳಿಯುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.

ಜಿಲ್ಲೆಯಲ್ಲಿ ಹೃದಯ ವೈಶಾಲ್ಯ ಯೋಜನೆ ಜಾರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಳೆದ ವರ್ಷ ೧೧,೫೭೦ ಮಂದಿ ಹೃದಯ ತಪಾಸಣೆಗೊಳಗಾಗಿ ಅದರಲ್ಲಿ ೨,೦೮೧ ಜನರಿಗೆ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಈ ಸಾಲಿನಲ್ಲಿ ಮೂರು ತಿಂಗಳಲ್ಲಿ ೩,೩೫೨ ಮಂದಿ ಹೃದಯ ತಪಾಸಣೆಗೊಳಗಾಗಿದ್ದು ೯೬೯ ಮಂದಿಯಲ್ಲಿ ಹೃದ್ರೋಗವಿರುವುದು ಪತ್ತೆಯಾಗಿದೆ.

ಹಠಾತ್ ಮತ್ತು ಶಾಂತಯುತವಾಗಿ ಜರುಗುತ್ತಿರುವ ಸಾವುಗಳು ಜನರನ್ನು ಬೆಚ್ಚಿ ಬೀಳುವಂತೆ ಮಾಡಿವೆ. ಆರೋಗ್ಯವಂತರಾಗಿದ್ದು, ದೈಹಿಕವಾಗಿ ಸದೃಢರಾಗಿರುವವರೂ ಹಠಾತ್ ಮರಣಕ್ಕೀಡಾಗುತ್ತಿರುವುದು ಭಯ ಮತ್ತು ಆತಂಕ ಹೆಚ್ಚುವಂತೆ ಮಾಡಿದೆ. ಜಿಲ್ಲೆಯಲ್ಲಿ ಹೃದಯ ವೈಶಾಲ್ಯ ಯೋಜನೆ ಜಾರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಜನರು ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ದುಂಬಾಲು ಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದು ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

ಕೆ.ಆರ್.ಪೇಟೆಯ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೃದಯ ವೈಶಾಲ್ಯ ಯೋಜನೆ ಜಾರಿಯಲ್ಲಿದ್ದು, ಕಳೆದ ಮೂರು ತಿಂಗಳಲ್ಲಿ ೪೭೧ ಮಂದಿ ತಪಾಸಣೆಗೊಳಗಾಗಿ ೯೯ ಜನರಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮದ್ದೂರು ತಾಲೂಕಿನಲ್ಲಿ ೨೩೫ ಜನರಿಗೆ ೪೧, ಮಳವಳ್ಳಿ ತಾಲೂಕಿನಲ್ಲಿ ೪೦೬ ಮಂದಿಯಲ್ಲಿ ೮೩, ಮಂಡ್ಯ ತಾಲೂಕಿನಲ್ಲಿ ೫೭೦ ಜನರಲ್ಲಿ ೪೧, ನಾಗಮಂಗಲ ತಾಲೂಕಿನಲ್ಲಿ ೮೮೬ ಮಂದಿಗೆ ೧೨೪, ಪಾಂಡವಪುರ ತಾಲೂಕಿನಲ್ಲಿ ೩೦೬ ಮಂದಿಗೆ ೫೨ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೪೭೮ ಮಂದಿಯಲ್ಲಿ ೧೧೭ ಜನರಿಗೆ ಹೃದಯ ಸಮಸ್ಯೆ ಇರುವುದು ಪತ್ತೆಯಾಗಿದೆ.

ಇದರ ಜೊತೆಗೆ ಸ್ಟೆಮಿ ಕಾರ್ಯಕ್ರಮದಡಿ ೧೧,೩೫೯ ಜನರನ್ನು ಇಸಿಜಿ ಪರೀಕ್ಷೆಗೊಳಪಡಿಸಿದ ವೇಳೆ ೪೧೦ ಜನರಲ್ಲಿ ಕ್ಲಿಷ್ಟ, ೧,೧೪೧ ಜನರಿಗೆ ಇತರೆ ಸಮಸ್ಯೆಗಳಿರುವುದು ಕಂಡುಬಂದಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಹಠಾತ್ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಪ್ರಕರಣಗಳು ಗ್ರಾಮೀಣ ಜನರನ್ನು ಜಾಗೃತಗೊಳಿಸಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸಿದ್ದ ಜನರು ಈಗ ಸ್ವಯಂಪ್ರೇರಿತರಾಗಿ ಹೃದಯ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಸೈಲೆಂಟ್ ಕಿಲ್ಲರ್‌ನಂತಿರುವ ಹೃದಯಾಘಾತಗಳು ಯುವಕರಲ್ಲೂ ಕಂಡುಬರುತ್ತಿರುವುದರಿಂದ ಅವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಮಿಮ್ಸ್ ಆಸ್ಪತ್ರೆಯಲ್ಲೂ ನಿತ್ಯ ೪೦ ರಿಂದ ೫೦ ಮಂದಿ ಹೃದ್ರೋಗ ತಪಾಸಣೆಗೆ ಒಳಗಾಗುತ್ತಿರುವುದು ಕಂಡುಬಂದಿದೆ. ಮಿಮ್ಸ್‌ನಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ, ಹೃದ್ರೋಗ ತಜ್ಞರೂ ಇಲ್ಲದಿರುವುದರಿಂದ ಹೃದಯ ಸಮಸ್ಯೆ ಇರುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಿಕೊಡುವುದು ಸಾಮಾನ್ಯವಾಗಿದೆ.

ಭಯ, ಆತಂಕದಿಂದಲೇ ಹಲವರಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾವಿನ ಪ್ರಕರಣಗಳನ್ನು ಕಂಡು ಇನ್ನಷ್ಟು ಭೀತಿಗೊಳಗಾಗುವ ಅಗತ್ಯವಿಲ್ಲ. ಮನಸ್ಸನ್ನು ಶಾಂತಚಿತ್ತದಲ್ಲಿರಿಸಿಕೊಂಡು ಉತ್ತಮ ಆಹಾರ ಸೇವಿಸುತ್ತಾ, ದೈಹಿಕ ಚಟುವಟಿಕೆಯಿಂದ ಇದ್ದಲ್ಲಿ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎಂಬುದು ವೈದ್ಯರು ಹೇಳುವ ಮಾತಾಗಿದೆ.

ಕೋವಿಡ್ ಸೋಂಕು ಜನರಲ್ಲಿ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುತ್ತಿದೆ. ಇದರಿಂದ ದಿಢೀರ್ ಸಾವುಗಳು ಸಂಭವಿಸುತ್ತಿವೆ. ಕೋವಿಡ್ ಲಸಿಕೆ ಇದಕ್ಕೆ ಕಾರಣವಲ್ಲ. ಲಸಿಕೆ ಇಲ್ಲದಿದ್ದರೆ ಇನ್ನೂ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದರು. ಕೋವಿಡ್ ಸೋಂಕಿನ ಲಕ್ಷಣವೇ ರಕ್ತ ಹೆಪ್ಪುಗಟ್ಟುವಿಕೆಯಾಗಿರುವುದರಿಂದ ಹಠಾತ್ ಸಾವುಗಳು ಸಂಭವಿಸುತ್ತಿರುವುದಾಗಿ ಹೃದ್ರೋಗ ತಜ್ಞರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

------------------------------------

ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೃದಯ ಪರೀಕ್ಷೆ ಪ್ರಮಾಣ ಶೇ.೧೫ರಿಂದ ೨೦ರಷ್ಟು ಹೆಚ್ಚಾಗಿದೆ. ಹೃದಯ ವೈಶಾಲ್ಯ ಯೋಜನೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ಸಾಕಷ್ಟು ಜನರು ತಪಾಸಣೆಗೆ ಒಳಗಾಗುತ್ತಿದ್ದಾರೆ. ಭಯ, ಗಾಬರಿಯಿಂದ ಉತ್ತಮವಾಗಿರುವವರ ಹೃದಯದ ಆರೋಗ್ಯವೂ ಕೆಡಲಿದೆ.

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಡ್ಯ

------------------------------------

ಭಯ ಮತ್ತು ಆತಂಕದಿಂದ ಜನರು ಹೃದಯ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲೂ ತಪಾಸಣೆಗೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಕಳೆದ ಮೂರು ತಿಂಗಳಲ್ಲಿ ೧೨ ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎಲ್ಲ ಸಾವಿನ ಪ್ರಕರಣಗಳನ್ನು ದಾಖಲಿಸಿಕೊಳ್ಳದೆ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟ ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದೆ.

- ಡಾ.ಎಚ್.ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ

-----------------------------------

ಕೋವಿಡ್ ಸೋಂಕಿನ ಕಾರಣದಿಂದ ರಕ್ತ ಹೆಪ್ಪುಗಟ್ಟುತ್ತಿರುವುದರಿಂದ ಹಠಾತ್ ಸಾವುಗಳು ಸಂಭವಿಸುತ್ತಿವೆ. ಇಸಿಜಿ, ಎಕೋ ಮಾಡುವುದಕ್ಕೂ ಅವಕಾಶ ನೀಡದೆ ಬೇಗ ರಕ್ತ ಹೆಪ್ಪುಗಟ್ಟುತ್ತಿದೆ. ಈ ಸೋಂಕಿನ ಲಕ್ಷಣವೇ ರಕ್ತ ಹೆಪ್ಪುಗಟ್ಟುವುದಾಗಿದೆ. ಕೋವಿಡ್ ಲಸಿಕೆ ಸಾವಿಗೆ ಕಾರಣವಲ್ಲ. ಅದೊಂದು ಜೀವ ಸಂಜೀವಿನಿ. ಹೃದಯಾಘಾತಕ್ಕೆ ನಾನಾ ಕಾರಣಗಳಿವೆ. ಪ್ರಕರಣ ಹೆಚ್ಚಿರುವುದರಿಂದ ತಪಾಸಣೆಗೊಳಗಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

- ಡಾ.ಪ್ರಶಾಂತ್, ಹೃದ್ರೋಗ ತಜ್ಞ, ಪ್ರಿಯದರ್ಶಿನಿ ಹಾರ್ಟ್‌ಕೇರ್

---------------------------------

ಮಿಮ್ಸ್ ಆಸ್ಪತ್ರೆಯಲ್ಲೂ ನಿತ್ಯ ೪೦ ರಿಂದ ೫೦ ಮಂದಿ ಹೃದಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡರೂ ಇಸಿಜಿ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಹೃದಯಾಘಾತದಿಂದ ೧೦ ಮಂದಿ ಮಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಠಾತ್ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಮುಂದೆ ಸಾವಿನ ನೈಜ ಕಾರಣ ತಿಳಿಯುವ ಸಾಧ್ಯತೆ ಇದೆ.

- ಡಾ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್ ಆಸ್ಪತ್ರೆ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ