ಮನಕಲಕುವ ಘಟನೆ: ತಾಯಿ ಶವದ ಜೊತೆಗಿದ್ದ ಬುದ್ಧಿಮಾಂದ್ಯ ಮಗಳೂ ಸಾವು!

KannadaprabhaNewsNetwork | Updated : May 19 2024, 11:22 AM IST

ಸಾರಾಂಶ

ಮೃತಪಟ್ಟ ತಾಯಿಯ ಜೊತೆ ಊಟ, ನೀರಿಲ್ಲದೆ ಒಬ್ಬಂಟಿಯಾಗಿ ದಿನ ಕಳೆದ ಬುದ್ಧಿಮಾಂದ್ಯ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.  

 ಕುಂದಾಪುರ :  ಕಳೆದ ನಾಲ್ಕು ದಿನಗಳಿಂದ ಮೃತಪಟ್ಟ ತಾಯಿಯ ಜೊತೆ ಊಟ, ನೀರಿಲ್ಲದೆ ಒಬ್ಬಂಟಿಯಾಗಿ ದಿನ ಕಳೆದ ಬುದ್ಧಿಮಾಂದ್ಯ ಮಗಳು ಸ್ಥಳೀಯರ ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ ಮನಕಲಕುವ ಘಟನೆಯೊಂದು ತಾಲೂಕಿನ ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.ಗೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗೋಪಾಡಿ ದಾಸನಹಾಡಿಯ ಜಯಂತಿ ಶೆಟ್ಟಿ (62) ಹಾಗೂ ಪ್ರಗತಿ ಶೆಟ್ಟಿ (32) ಮೃತಪಟ್ಟ ತಾಯಿ, ಮಗಳು.

ಪತಿ ನಿಧನದ ಬಳಿಕ ಬುದ್ಧಿಮಾಂದ್ಯ ಮಗಳೊಂದಿಗೆ ದಾಸನಹಾಡಿಯಲ್ಲಿ ವಾಸವಿದ್ದ ಜಯಂತಿ ಶೆಟ್ಟಿ, ಬಿಪಿ, ಶುಗರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಹುಟ್ಟಿನಿಂದಲೇ ಮಗಳು ಬುದ್ಧಿಮಾಂದ್ಯಳಾಗಿದ್ದು, ಇತ್ತೀಚೆಗೆ ಮಗಳಿಗೆ ಶುಗರ್ ಕಾಯಿಲೆ ಹೆಚ್ಚಾಗಿ ಒಂದು ಕಾಲನ್ನೇ ಕತ್ತರಿಸಲಾಗಿತ್ತು. ಪತಿ ಕೂಡಿಟ್ಟ ಹಣದಲ್ಲೇ ಮಗಳನ್ನು ಜೋಪಾನವಾಗಿ ಆರೈಕೆ ಮಾಡಿಕೊಂಡು ಬಂದಿದ್ದ ತಾಯಿ ಜಯಂತಿ ಶೆಟ್ಟಿ ಮೇ ೧೨ರಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿ ಮಗಳ ಆರೋಗ್ಯ ಚೇತರಿಕೆಗಾಗಿ ವಿಶೇಷ ಸೇವೆಗಳನ್ನು ಸಲ್ಲಿಸಿ ಮನೆಗೆ ವಾಪಾಸ್ಸಾಗಿದ್ದರು. ಮರುದಿನ ಅಂದರೆ ಮೇ ೧೩ರಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಸ್ಥಳೀಯ ಆಟೋ ರಿಕ್ಷಾ ಚಾಲಕನಿಗೆ ಮೊದಲೇ ಮಾಹಿತಿ ನೀಡಿ ಮನೆಗೆ ಬರ ಹೇಳಿದ್ದರು. ಆಟೋ ಚಾಲಕ ಮೇ 13 ರಂದು ದೇವಳಕ್ಕೆ ತೆರಳುವ ಬಗ್ಗೆ ಮನೆಗೆ ಬರಲು ವಿಚಾರಿಸಲು ಕರೆ ಮಾಡಿದಾಗ ಜಯಂತಿ ಶೆಟ್ಟಿ ಕರೆ ಸ್ವೀಕರಿಸಿರಲಿಲ್ಲ. ಬೇರೊಂದು ಆಟೋ ಮಾಡಿಕೊಂಡು ಹೋಗಿರಬೇಕೆಂದು ಆಟೋ ಚಾಲಕ ಮತ್ತೆ ಕರೆಯೂ ಮಾಡಿರಲಿಲ್ಲ.

* ದುರ್ವಾಸನೆಯ ಜಾಡು ಹಿಡಿದ ಸ್ಥಳೀಯರು:

ಇದಾದ ಬಳಿಕ 4 ದಿನಗಳು ಕಳೆದರೂ ಮನೆಯ ಹಿಂಭಾಗ ಮತ್ತು ಮುಂಭಾಗದ ಬಾಗಿಲುಗಳು ಮುಚ್ಚಿಕೊಂಡಿದ್ದು, ಮನೆಯ ಎಲ್ಲ ಕೊಠಡಿಗಳ ಲೈಟ್‌ಗಳು ಹಗಲಿನಲ್ಲಿಯೂ ಉರಿಯುತ್ತಿದ್ದದ್ದನ್ನು ಕಂಡು ಸ್ಥಳೀಯರು ಎಲ್ಲಿಗಾದರೂ ಹೋಗಿರಬಹುದು ಎಂದು ಶಂಕಿಸಿ ಸುಮ್ಮನಿದ್ದರು. 

ಗುರುವಾರ ರಾತ್ರಿ ವೇಳೆ ಮನೆಯ ಸಮೀಪ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸಮೀಪದ ಮನೆಯವರು ಜಯಂತಿ ಶೆಟ್ಟಿಯವರ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಮನೆಯಲ್ಲಿಯೇ ರಿಂಗಣಿಸುತ್ತಿತ್ತಾದರೂ ಮೊಬೈಲ್ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿಗೆ ಮಾಹಿತಿ ನೀಡಿದ್ದರು. 

ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸುರೇಶ್ ಶೆಟ್ಟಿ, ಸ್ಥಳೀಯರೊಂದಿಗೆ ಮನೆಯ ಕಿಟಕಿಯಲ್ಲಿ ನೋಡಿದಾಗ ಮಗಳು ಸಂಪೂರ್ಣ ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ವಿನಯ್ ಕೊರ್ಲಹಳ್ಳಿ ಮನೆಯ ಬಾಗಿಲನ್ನು ಸ್ಥಳೀಯರ ಸಹಕಾರದಿಂದ ಮುರಿದು ಒಳಪ್ರವೇಶಿಸಿದಾಗ ಜಯಂತಿ ಶೆಟ್ಟಿಯವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿತ್ರಾಣಗೊಂಡ ಯುವತಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಪ್ರಗತಿ ಶೆಟ್ಟಿಯೂ ಕೊನೆಯುಸಿರೆಳೆದಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ಜಯಂತಿ ಶೆಟ್ಟಿ ಸಂಬಂಧಿಕರನ್ನು ಪತ್ತೆಹಚ್ಚಿ ಅವರನ್ನು ಸ್ಥಳಕ್ಕೆ ಕರೆಸಿದರು. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ನೆರವಾದರು.

* ಕುಸಿದು ಬಿದ್ದಿರುವ ಶಂಕೆ: ಜಯಂತಿ ಶೆಟ್ಟಿ ಶುಗರ್ ಮತ್ತು ಬಿಪಿಯಿಂದ ಬಳಲುತ್ತಿದ್ದು ಶೌಚಾಯಲಕ್ಕೆ ಹೋಗಿ ಬರುವಾಗ ಕುಸಿದು ಬಿದ್ದಿರಬಹುದೆಂದು ಶಂಕಿಸಲಾಗಿದೆ. 

ನಿನ್ನ ಬಿಟ್ಟಿರಲಾರೆನು..!ಒಬ್ಬಳೇ ಮಗಳನ್ನು ಮುದ್ದಾಗಿ ಸಲುಹಿದ ಜಯಂತಿ ಶೆಟ್ಟಿ, ಸ್ವತಃ ಅನಾರೋಗ್ಯದಲ್ಲಿದ್ದರೂ ಮಗಳ ಆರೈಕೆಯಲ್ಲೇ ತೊಡಗಿಸಿಕೊಂಡಿದ್ದರು. 60 ರ ಆಸುಪಾಸಿನ ಜಯಂತಿ ಶೆಟ್ಟಿ, 32 ವರ್ಷ ಪ್ರಾಯದ ಮಗಳನ್ನು ಸಣ್ಣ ಮಗುವಂತೆ ಆರೈಕೆ ಮಾಡುತ್ತಿದ್ದ ರೀತಿಯೇ ಸೋಜಿಗ! ಮಗಳಿಗೆ ಸಕ್ಕರೆ ಕಾಯಿಲೆ ಹೆಚ್ಚಾಗಿ ಒಂದು ಕಾಲನ್ನು ಕತ್ತರಿಸಿದ ಬಳಿಕ ಅವಳ ಆರೈಕೆಯೂ ಕಷ್ಟಸಾಧ್ಯವಾಗಿತ್ತು. ಜಯಂತಿ ಶೆಟ್ಟಿ ಕುಸಿದು ಬಿದ್ದು ಸಾವನ್ನಪ್ಪಿ ಮನೆಯ ಒಳಗಿನ ಶೌಚಾಯಲದ ದಾರಿಯಲ್ಲೇ ಮಲಗಿದ್ದರೆ ತಾಯಿಯ ಸಮೀಪವೂ ಬರಲು ಕಷ್ಟಸಾಧ್ಯವಾದ ಪ್ರಗತಿ ಶೆಟ್ಟಿ,   ಹೊರಳಾಡಿಕೊಂಡೇ ಬಂದು ಅಮ್ಮನನ್ನು ಬಡಿದೆಬ್ಬಿಸಿದ ಗುರುತುಗಳು ಅಲ್ಲಲ್ಲಿ ಕಾಣಿಸುತ್ತಿತ್ತು. ನಾಲ್ಕು ದಿನಗಳಿಂದ ಊಟ-ನೀರಿಲ್ಲದೆ ನಿತ್ರಾಣಗೊಂಡಿದ್ದ ಪ್ರಗತಿ ಶೆಟ್ಟಿ, ಕೊನೆಗೂ ನಿನ್ನ ಬಿಟ್ಟಿರಲಾರೆನು ಎನ್ನುವಂತೆ ತಾಯಿಯ ಹಿಂದೆಯೇ ನಡೆದು ಹೋಗಿರುವುದು ದುರಂತ.

Share this article