ಶಶಿಕಾಂತ ಮೆಂಡೆಗಾರ
ವಾತಾವರಣದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇರುವ ತಾಪಮಾನ ಈ ಬಾರಿ ಜಿಲ್ಲೆಯ ಜನರನ್ನು ಬಿಸಿಲಾಘಾತಕ್ಕೆ ದೂಡಲಿದೆಯಾ ಎಂಬ ಚಿಂತೆ ಶುರುವಾಗಿದೆ. ಇದೀಗ ವಿಜಯಪುರದಲ್ಲಿ ಗರಿಷ್ಠ ತಾಪಮಾನ 40.5 ಡಿಗ್ರಿಗೆ ತಲುಪಿದ್ದು, 2019ರಲ್ಲಿ ದಾಖಲಾಗಿದ್ದ 43 ಡಿಗ್ರಿ ಸೆಲ್ಸಿಯಸ್ ಅನ್ನೂ ಮೀರಿಸಲಿದೆಯಾ ಎಂಬ ಆತಂಕ ಕಾಡುತ್ತಿದೆ.
ಈ ಭಯದ ಬೆನ್ನಲ್ಲೇ ಜಿಲ್ಲೆಯ ಜನರು ತಂಪು ಪಾನೀಯಗಳು ಹಾಗೂ ಗಾರ್ಡನ್‌ಗಳ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಕೂಡ ಸಿದ್ಧವಾಗಿದೆ. ಯಾವಾಗ ಯಾರಿಗೆ ಸನ್ ಸ್ಟ್ರೋಕ್ ಸಂಭವಿಸಲಿದೆಯೋ ಎಂಬ ಚಿಂತೆ ಜಿಲ್ಲೆಯ ಜನರದ್ದಾಗಿದೆ. ಹಿಟ್ಟಿನಹಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಕೃಷಿ ಹವಾಮಾನಶಾಸ್ತ್ರದ ಇಲಾಖೆಯಲ್ಲಿ ದಾಖಲಾದ ತಾಪಮಾನ ಬೆಚ್ಚಿ ಬೀಳಿಸಿದೆ.ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ:ಬಸವನಾಡು, ಬಿಸಿಲನಾಡು, ಗುಮ್ಮಟ ನಗರಿ ಎನಿಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಮಿತಿಮೀರಿದ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಂಡಿವೆ. ಇದಕ್ಕಾಗಿಯೇ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್‌ಗಳುಳ್ಳ ಹೀಟ್ ಸ್ಟ್ರೋಕ್ ವಾರ್ಡ್ ಆರಂಭಿಸಲಾಗಿದೆ. ಸನ್ ಸ್ಟ್ರೋಕ್ (ಶಾಖಾಘಾತ) ದಿಂದ ಬಂದವರಿಗೆ ತಕ್ಷಣ ಚಿಕಿತ್ಸೆ ನೀಡಲು ಇಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಯಾವ ವರ್ಷ ಎಷ್ಟು ಗರಿಷ್ಠ ತಾಪಮಾನವಿತ್ತು?:
2012 ಮೇ 20ರಂದು 41 ಡಿಗ್ರಿ, 2013 ಮೇ 22ರಂದು 40.8 ಡಿಗ್ರಿ, 2014 ಮೇ 26ರಂದು 40.8 ಡಿಗ್ರಿ, 2015 ಮೇ 22ರಂದು 42.2 ಡಿಗ್ರಿ, 2016 ಮೇ 14ರಂದು 41.2 ಡಿಗ್ರಿ, 2017 ಮೇ 26ರಂದು 41.5 ಡಿಗ್ರಿ, 2018 ಮೇ 2ರಂದು 42 ಡಿಗ್ರಿ, 2019 ಮೇ 30ರಂದು 43 ಡಿಗ್ರಿ, 2020 ಮೇ 27ರಂದು 42.5 ಡಿಗ್ರಿ, 2021 ಮೇ 11ರಂದು 38 ಡಿಗ್ರಿ, 2022 ಮೇ 10ರಂದು 41.5 ಡಿಗ್ರಿ, 2023 ಮೇ 19ರಂದು 40.6 ಡಿಗ್ರಿ, 2024 ಮೇ 7ರಂದು 42.5 ಡಿಗ್ರಿ, 2025 ಮೇ 7ರಂದು 42.5 ಡಿಗ್ರಿ, 2026 ಮೇ 2ರಂದು 40.5 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ.
ಇಂತಹ ಮೈ ಸುಡುವ ಬಿಸಿಲಿನಲ್ಲಿ ಯಾರೂ ಹೊರಗೆ ತಿರುಗಾಡದೆ ನೆರಳಿನಲ್ಲೇ ಇರಬೇಕು. ಮೈಮೇಲೆ ತೆಳುವಾದ ಕಾಟನ್ ಬಟ್ಟೆ ಧರಿಸಬೇಕು ಜೊತೆಗೆ ಕಾಲಕಾಲಕ್ಕೆ ನೀರು, ಮಜ್ಜಿಗೆ, ಅಂಬಲಿ ಸೇರಿದಂತೆ ದೇಹವನ್ನು ತಂಪಾಗಿಸುವ ಪಾನೀಯಗಳನ್ನು ಕುಡಿಯಬೇಕು. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರಬಾರದು. ಅನಿವಾರ್ಯವಾದವರು ಟೋಪಿ ಹಾಕಿಕೊಳ್ಳಬೇಕು, ಕೊಡೆಗಳನ್ನು ಬಳಸುವುದು, ವಸ್ತ್ರಗಳಿಂದ ಮುಖ ಮುಚ್ಚಿಕೊಳ್ಳಬೇಕು.
-ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾಸ್ಪತ್ರೆ.