ಬಿಸಿಲಾಘಾತ: ಕಾಫಿ, ಕಾಳುಮೆಣಸು ಕೃಷಿಕರಿಗೆ ಆತಂಕ

KannadaprabhaNewsNetwork |  
Published : May 11, 2026, 03:45 AM IST
ಬಿಸಿಲಿನ ಹೆಚ್ವಳ, ಮಳೆಯ ವಿಳಂಬ: ಕಾಫಿ, ಕಾಳು ಮೆಣಸು ಕೃಷಿಕರು ಆತಂಕದಲ್ಲಿ: ಪರದಾಡುತ್ತಿರುವ ರೈತರು | Kannada Prabha

ಸಾರಾಂಶ

ತೀವ್ರ ಬಿಸಿಲಿನಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಗಿಡಗಳು ಹಾಗೂ ಕಾಳುಮೆಣಸಿನ ಬಳ್ಳಿ ಒಣಗುತ್ತಿದೆ. ಹಳ್ಳ ಕೊಳ್ಳಗಳು ಒಣಗಿದ್ದರೆ, ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಕೊಳವೆ ಬಾವಿಗಳಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲ. ಬಿಸಿಲಿನ ಝಳ ಹೆಚ್ಚಳ ಮತ್ತು ಮಳೆ ವಿಳಂಬದಿಂದಾಗಿ ಕಾಫಿ ಮತ್ತು ಕಾಳು ಮೆಣಸಿನ ಫಸಲಿಗೆ ತೀವ್ರ ಹಾನಿಯಾಗುತ್ತಿದೆ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತೀವ್ರ ಬಿಸಿಲಿನಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಗಿಡಗಳು ಹಾಗೂ ಕಾಳುಮೆಣಸಿನ ಬಳ್ಳಿ ಒಣಗುತ್ತಿದೆ. ಹಳ್ಳ ಕೊಳ್ಳಗಳು ಒಣಗಿದ್ದರೆ, ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಕೊಳವೆ ಬಾವಿಗಳಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲ. ಬಿಸಿಲಿನ ಝಳ ಹೆಚ್ಚಳ ಮತ್ತು ಮಳೆ ವಿಳಂಬದಿಂದಾಗಿ ಕಾಫಿ ಮತ್ತು ಕಾಳು ಮೆಣಸಿನ ಫಸಲಿಗೆ ತೀವ್ರ ಹಾನಿಯಾಗುತ್ತಿದೆ.ಈ ಭಾರಿ ಕೆಲವೆಡೆ ಮಾತ್ರ ಉತ್ತಮ ಮಳೆಯಾಗಿ, ಉಳಿದೆಡೆ ಅಲ್ಪಸ್ವಲ್ಪ ಮಳೆಯಾಗಿದೆ. ಹೀಗಾಗಿ ಈ ಸಾಲಿನಲ್ಲಿ ಕಾಫಿ ತೋಟವನ್ನು ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಹವಾಮಾನ ವೈಪ್ಯರಿತ್ಯ ಹಾಗೂ ಮುಂಗಾರು ವಿಳಂಬದಿಂದ ಈಗಾಗಲೇ ಕಾಳು ಮೆಣಸಿನ ಬಳ್ಳಿ ರೋಗ ಪೀಡಿತವಾಗಿದ್ದು. ಬಿಸಿಲು ಹೆಚ್ಚಾದಂತೆ ಬಳ್ಳಿಗಳು ಒಣಗಲಾರಂಭಿಸಿವೆ. ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರ ಸಿಗದ ಪರಿಣಾಮ ಕಾಡಾನೆ, ಕಾಡೆಮ್ಮೆ ಸೇರಿದಂತೆ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಇದರಿಂದ ಅಳಿದುಳಿದ ತೋಟವನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ರೈತರಿಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಗೋಣಿಮರೂರು, ಅಬ್ಬೂರುಕಟ್ಟೆ, ಬಾಣಾವಾರ, ಮಾಲಂಬಿ, ಗೌಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮೆಣಸಿನ ಬಳ್ಳಿಗಳು ಹೆಚ್ಚಿನ ಪ್ರಮಾಣದಲ್ಲಿ ಒಣಗಿವೆ. ನೀರಿನ ಸೌಲಭ್ಯ ಇದ್ದವರು ಮಾತ್ರ ಹಗಲು-ರಾತ್ರಿ ನೀರನ್ನು ಹಾಯಿಸುವ ಮೂಲಕ ತೋಟವನ್ನು ಉಳಿಸಿಕೊಳ್ಳಲು ಸಫಲರಾಗಿದ್ದಾರೆ. ಕಾಳು ಮೆಣಸಿಗೆ ಶೀಘ್ರ ಸೊರಗು ರೋಗ, ನಿಧಾನ ಸೊರಗು ರೋಗ, ಬೇರಿನ ಮಿಲಿಬಗ್ಸ್, ಬಳ್ಳಿಗೆ ತೇವಾಂಶದ ಕೊರತೆ, ಶಲ್ಯ ಕೀಟದ ಸಮಸ್ಯೆ ಹೀಗೆ ಅನೇಕ ರೋಗಗಳು ವ್ಯಾಪಿಸಿವೆ. ರೋಗ ಹತೋಟಿ ಸಾಧ್ಯವಾಗದೆ ರೈತರು ಸಂಕಷ್ಟದಲ್ಲಿದ್ದಾರೆ.ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ, ಸೋಮವಾರಪೇಟೆ ಕಸಬ ಹಾಗೂ ಸುಂಟಿಕೊಪ್ಪ ಹೋಬಳಿಗಳಲ್ಲಿ ಕೆರೆ ಹಾಗೂ ಕೊಳವೆಬಾವಿ ಸೌಲಭ್ಯವಿಲ್ಲದೆ ಕಾಳುಮೆಣಸು ಕೃಷಿ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಣಗೂರು, ನೇರುಗಳಲೆ, ಆಲೂರು, ಬೇಳೂರು, ಐಗೂರು, ಕಿರಗಂದೂರು ಗ್ರಾಪಂ ವ್ಯಾಪ್ತಿಯ ಬಳ್ಳಿಗಳಲ್ಲಿ ಚಿಗುರು ಮೂಡುತ್ತಿಲ್ಲ. ತಾಲೂಕಿನ ಬಹುತೇಕ ಬೆಳೆಗಾರರು ಕಾಫಿ ತೋಟದೊಂದಿಗೆ ನೆರಳಿಗಾಗಿ ಬೆಳೆದಿರುವ ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿ, ಫಸಲು ತೆಗೆಯುತ್ತಿದ್ದರು. ಕೆಲ ವರ್ಷ ಉತ್ತಮ ಫಸಲಿನೊಂದಿಗೆ, ತೃಪ್ತಿಕರ ಬೆಲೆ ಸಿಗುತ್ತಿದ್ದ ಪರಿಣಾಮ ಕಾಫಿ ಬೆಳೆಗಾರರು ಆರ್ಥಿಕವಾಗಿ ಸಬಲರಾಗಿದ್ದರು. ಕಾಫಿ ಬೆಲೆ ಇಲ್ಲದ ಸಮಯದಲ್ಲಿ ಕಾಳುಮೆಣಸು ಕೃಷಿಕರನ್ನು ರಕ್ಷಣೆ ಮಾಡುತ್ತಿತ್ತು. ಈಗ ಕಾಳುಮೆಣಸು ಬಳ್ಳಿಗಳ ರಕ್ಷಣೆ ಕಷ್ಟಕರವಾಗುತ್ತಿದೆ ಎಂದು ಅಬ್ಬೂರುಕಟ್ಟೆ ಗ್ರಾಮದ ಎಸ್.ಎಂ. ಡಿಸಿಲ್ವ ಹೇಳುತ್ತಾರೆ.

ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಮನೆಯಿಂದ ಹೊರಗೆ ಬಾರದ ಸ್ಥಿತಿ ಇದೆ. ಬಿಸಿಲು ಹೆಚ್ಚಿರುವ ಕೆಲವು ಗ್ರಾಮಗಳಲ್ಲಿ ಕಾಫಿ ತೋಟವನ್ನು ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಒಮ್ಮೆ ಕಾಫಿ ಗಿಡ ಅಥವಾ ಕಾಳು ಮೆಣಸಿನ ಬಳ್ಳಿ ಒಣಗಿಹೋದರೆ ಮತ್ತೆ ಉತ್ತಮ ಫಸಲು ಪಡೆಯಲು ಹತ್ತಾರು ವರ್ಷಗಳನ್ನು ಕಾಯಬೇಕು.

ಈಗಾಗಲೇ ಕಾರ್ಮಿಕರ ವೇತನ ಹೆಚ್ಚಳ, ಕೃಷಿ ಪರಿಕರ ಹಾಗೂ ರಾಸಾಯನಿಕ ಗೊಬ್ಬರದ ದರ ಹೆಚ್ಚಾಗಿರುವುದರಿಂದ ಕಾಫಿ ತೋಟವನ್ನು ಉಳಿಸಿಕೊಳ್ಳುವುದೇ ರೈತರಿಗೆ ಸವಾಲಿನ ಕೆಲಸವಾಗಿದೆ. ಬೆಲೆ ಹೆಚ್ಚಾಗಿದ್ದರೂ ಖರ್ಚು ಅಷ್ಟೇ ಜಾಸ್ತಿಯಾಗಿದೆ. ಬೆಳೆಯೇ ಬಾರದಿದ್ದರೆ, ನಿರ್ವಹಣೆ ಹೇಗೆ ಮಾಡುವುದು ಎಂಬುದೇ ಸಮಸ್ಯೆಯಾಗಿದೆ.

-ಮೋಹನ್‌ ಕೃಷಿಕ, ಹಾನಗಲ್ಲು ಗ್ರಾಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೇವಾ ಕಾರ್‍ಯದಲ್ಲಿ ರೋಟರಿ ಪ್ರಮುಖ ಪಾತ್ರ: ರಾಮಕೃಷ್ಣ
ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಗೆ ಚಾಲನೆ