ಸಿಡಿಲು, ಗುಡುಗು ಬೀರುಗಾಳಿ ಸಮೇತ ಭಾರಿ ಮಳೆ । ಧರೆಗುರುಳಿದ ವಿದ್ಯುತ್ ಕಂಬ, ಮರಗಳು । ಅಪಾರ ನಷ್ಟ
ಗುರುವಾರ ಬೆಳಗ್ಗೆಯಿಂದ ವಿಪರೀತ ಬಿಸಿಲು ಕಂಡಿತ್ತು. ಮಧ್ಯಾಹ್ನದ ವೇಳೆಗೆ ಗ್ರಾಮ ಸೇರಿದಂತೆ ಯರಗೇರಾ, ಮಡಿಕೇರಿ, ಮದ್ನಾಳ, ಮನ್ನೇರಾಳ, ಮುದಟಗಿ ಹೀಗೆ ಸುತ್ತಲಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಿಂದ ಅಪಾರ ನಷ್ಟವಾಗಿದೆ.
ಮುದಟಗಿ ಗ್ರಾಮದ ರೈತ ಮಹಿಳೆ ಹೊಳಿಯವ್ವ ಶೇಖಪ್ಪ ಗೋನಾ ಅವರ ತೋಟದಲ್ಲಿ ಕೊಳವೆ ಬಾವಿನ ಮೋಟಾರ್, ವಿದ್ಯುತ್ ಕಂಬಗಳು, 2 ಟೆಂಗಿನ ಮರಗಳು, ಬೇವಿನ ಮರಗಳು ಬಿದ್ದಿವೆ. ಯರಗೇರಾ ಗ್ರಾಮದಲ್ಲಿ ಸಾಂತಪ್ಪ ಮಂಡಲಮರಿ ಅವರಿಗೆ ಸೇರಿದ ಕುರಿಗಳು ಮಳೆಯ ವೇಳೆ ಬೇವಿನಮರದ ಕೆಳಗೆ ನಿಂತಿದ್ದವು, ಮರ ಬಿದ್ದು ಎರಡು ಕುರಿಗಳು ಸಾವನಪ್ಪಿವೆ. ಮತ್ತೊಂದು ಕುರಿ ಗಾಯಗೊಂಡಿದ್ದು ಬಹಳಷ್ಟು ಹಾನಿಯಾಗಿದೆ.ಹನುಮಸಾಗರದ ಹೊಸ ಬಸ್ ನಿಲ್ದಾಣದ ಹತ್ತಿರ ಮದ್ಯದಂಗಡಿ ಮುಂದಿನ ಬೇವಿನ ಮರ ಹಾಗೂ ಪಕ್ಕದಲ್ಲಿದ್ದ ಜಾಲಿಯ ಮರ ನೆಲಕಚ್ಚಿವೆ.
ಕುಷ್ಟಗಿಯಲ್ಲಿ ಮಳೆ:ಸಾಯಂಕಾಲ ಸಮಯದಲ್ಲಿ ಸಾಧಾರಣ ಮಳೆಯಾಗಿದ್ದು, ರಸ್ತೆಯ ಮೇಲೆಲ್ಲ ನೀರು ಹರಿಯಿತು. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.ಪಟ್ಟಣದಲ್ಲಿ ಗುರುವಾರ ಸಾಯಂಕಾಲ ಬಿರುಗಾಳಿ, ಗುಡುಗು ಸಮೇತ ಮಳೆಯಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿದ್ಯುತ್ ಕಂಬ ಸೇರಿದಂತೆ ಮರಗಳು ಧರೆಗುರುಳಿವೆ.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 2ನೇ ಗೇಟ್ ಹತ್ತಿರ 3ಬೇವಿನ ಮರಗಳು, ವಿದ್ಯುತ್ ಕಂಬ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.