ಬಾಳೆಹೊನ್ನೂರಲ್ಲಿ ರಾತ್ರಿ ವರ್ಷಧಾರೆಯ ಅಬ್ಬರ

KannadaprabhaNewsNetwork | Published : May 26, 2024 1:32 AM

ಬಾಳೆಹೊನ್ನೂರು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶನಿವಾರ ಮುಂಜಾನೆ ಯವರೆಗೆ ಧಾರಾಕಾರವಾಗಿ ಸುರಿದಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶನಿವಾರ ಮುಂಜಾನೆ ಯವರೆಗೆ ಧಾರಾಕಾರವಾಗಿ ಸುರಿದಿದೆ.ಶುಕ್ರವಾರ ರಾತ್ರಿ 10ರ ವೇಳೆಗೆ ಆರಂಭಗೊಂಡ ತುಂತುರು ಮಳೆ ಮಧ್ಯರಾತ್ರಿ 1 ಗಂಟೆವರೆಗೆ ಗುಡುಗು ಸಹಿತವಾಗಿ ಬಿರುಸುಗೊಂಡಿದ್ದು ಮುಂಜಾನೆ ನಾಲ್ಕು ಗಂಟೆವರೆಗೆ ಧಾರಾಕಾರವಾಗಿ ಸುರಿದಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಚರಂಡಿ, ಹಳ್ಳ, ಕೊಳ್ಳಗಳಲ್ಲಿ ನೀರು ರಭಸವಾಗಿ ಹರಿದಿದ್ದು, ಹಲವೆಡೆಗಳಲ್ಲಿ ಮುಖ್ಯರಸ್ತೆಗೆ ಮರಳು, ಜಲ್ಲಿ, ಕಸಕಡ್ಡಿ ತೊಳೆದು ಕೊಂಡು ಬಂದಿದೆ.

ಪಟ್ಟಣದ ಜೇಸಿ ವೃತ್ತದ ಬಳಿಯಲ್ಲಿ ಬಿ.ಕಣಬೂರು ಗ್ರಾಪಂಗೆ ಸಂಪರ್ಕಿಸುವ ಚರ್ಚ್ ರಸ್ತೆಯಿಂದ ಅಪಾರ ಪ್ರಮಾಣದ ಜಲ್ಲಿ ಕಲ್ಲು ಮರಳು ಬಂದು ನಿಂತು ವಾಹನ ಚಾಲಕರಿಗೆ ತೀವ್ರ ಸಮಸ್ಯೆಯುಂಟಾಗಿತ್ತು. ಪ್ರತೀ ಬಾರಿ ಮಳೆ ಬಂದಾಗಲೂ ಸಹ ಜೇಸಿ ವೃತ್ತದ ಬಳಿ ಕಸಕಡ್ಡಿ ಬಂದು ನಿಲ್ಲುತ್ತಿದ್ದು, ಮುಖ್ಯರಸ್ತೆಯಾಗಿರುವುದರಿಂದ ವಾಹನ ಚಾಲಕರು, ಬೈಕ್ ಸವಾರರು ಸಮಸ್ಯೆ ಎದುರಿಸಬೇಕಾಗಿದೆ. ಜಲ್ಲಿಜಲ್ಲು ಬೈಕ್‌ಗೆ ಸಿಲುಕಿದರೆ ಅಪಘಾತವಾಗುವುದು ಖಚಿತವಾಗಿದೆ.ಪಟ್ಟಣದ ಡೋಬಿ ಹಳ್ಳದ ಸೇತುವೆ ಮೇಲೂ ಸಾಕಷ್ಟು ಪ್ರಮಾಣದಲ್ಲಿ ಜಲ್ಲಿ, ಕಸಕಡ್ಡಿ ತೊಳೆದುಕೊಂಡು ಬಂದು ನಿಂತಿದೆ. ಇಟ್ಟಿಗೆ ಶಿವನಗರದ ಬಳಿಯಲ್ಲಿಯೂ ಮುಖ್ಯರಸ್ತೆಗೆ ಮರಳು, ಜಲ್ಲಿ ಬಂದು ನಿಂತಿದೆ. ಜೇಸಿ ವೃತ್ತದ ಬಳಿ ಸಂಗ್ರಹವಾಗಿದ್ದ ಕಸ, ಕೆಸರನ್ನು ಗ್ರಾಪಂ ಕಸ ವಿಲೇವಾರಿ ಸಿಬ್ಬಂದಿ ಸ್ವಚ್ಛಗೊಳಿಸಿದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಭದ್ರಾನದಿಯಲ್ಲಿ ಇದೀಗ ನೀರಿನ ಹರಿವು ಏರಿಕೆಯಾಗಿದ್ದು, ಬೇಸಿಗೆಯಲ್ಲಿ ಮಳೆಯಿಲ್ಲದೆ ಹಳ್ಳದಂತಾಗಿದ್ದ ನದಿ ಇದೀಗ ತನ್ನ ವೈಭವ ಮರಳಿ ಪಡೆಯುತ್ತಿದೆ.ಶನಿವಾರ ಇಡೀ ದಿನ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ವಿದ್ದು, ಮಧ್ಯಾಹ್ನದ ವೇಳೆಗೆ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ಬಾಳೆಹೊನ್ನೂರು ಪಟ್ಟಣದಲ್ಲಿ 3 ಇಂಚು, ಖಾಂಡ್ಯ ಹೋಬಳಿ ಬಿಕ್ಕರಣೆಯಲ್ಲಿ 4.10ಇಂಚು, ಕೋಣೆಮನೆ, ರಂಭಾಪುರಿ ಪೀಠ, ಮೆಣಸುಕೊಡಿಗೆಯಲ್ಲಿ ತಲಾ 2.60 ಇಂಚು ಮಳೆಯಾಗಿದೆ ಎಂದು ಕಾಫಿ ಬೆಳೆಗಾರರು ತಿಳಿಸಿದ್ದಾರೆ. ಮಳೆ ಬಿರುಸುಗೊಳ್ಳುತ್ತಿದ್ದಂತೆ ಕಾಫಿ, ಅಡಕೆ, ಭತ್ತ ಬೆಳೆಗಾರರು ಸಹ ತಮ್ಮ ಮಾನ್ಸೂನ್ ಅವಧಿಯ ಕೆಲಸಗಳಿಗೆ ಮುಂದಾಗುತ್ತಿದ್ದು, ರೈತರು ರಸಗೊಬ್ಬರ ಖರೀದಿ, ಭತ್ತದ ಗದ್ದೆಯ ಹದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

೨೫ಬಿಹೆಚ್‌ಆರ್ ೧:

ಬಾಳೆಹೊನ್ನೂರು ಪಟ್ಟಣದ ಜೇಸಿ ವೃತ್ತದ ಬಳಿ ಧಾರಾಕಾರ ಮಳೆಗೆ ಮರಳು, ಜಲ್ಲಿ ತೇಲಿಕೊಂಡು ಬಂದಿರುವುದು.

೨೫ಬಿಹೆಚ್‌ಆರ್ ೨: ಬಾಳೆಹೊನ್ನೂರು ಪಟ್ಟಣದ ಸುರಿದ ಧಾರಾಕಾರ ಮಳೆಗೆ ಭದ್ರಾ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ.